Siddaramaiah
ಕರ್ನಾಟಕ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ನಾಯಕರ ಪೈಕಿ ಸಿದ್ದರಾಮಯ್ಯ ಪ್ರಮುಖರು. ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ 1948ರ ಆಗಸ್ಟ್ 12ರಂದು ಜನಿಸಿದ ಸಿದ್ದರಾಮಯ್ಯನವರ ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲೇ ಆಯಿತು. ಮೈಸೂರಿನಲ್ಲಿ ಬಿಎಸ್ಸಿ ಹಾಗೂ ಕಾನೂನು ಪದವಿ ಪಡೆದ ಅವರು 1978ರ ವರೆಗೆ ವಕೀಲಿ ವೃತ್ತಿ ನಡೆಸುತ್ತಿದ್ದು, ನಂತರ ರಾಜಕೀಯಕ್ಕೆ ಧುಮುಕಿದರು.
1983ರ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರತೀಯ ಲೋಕದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಸಿದ್ದರಾಮಯ್ಯ, ನಂತರ ರಾಜಕೀಯದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ಬಳಿಕ ಜನತಾ ದಳಕ್ಕೆ ಸೇರಿದ ಅವರು, ತರುವಾಯ ನಾಯಕತ್ವದ ವಿರುದ್ಧ ಅಸಮಾಧಾನದಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು. ಎರಡು ಬಾರಿ ಉಪಮುಖ್ಯಮಂತ್ರಿಯಾಗಿದ್ದ ಅವರು ಹಣಕಾಸು ಸಚಿವರಾಗಿ ಹಲವು ಬಾರಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಿಂದುಳಿದ ವರ್ಗಗಳ ನಾಯಕನೆಂದು ತಮ್ಮನ್ನು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ, 2013ರ ವಿಧಾನಸಭೆ ಚುನಾವಣೆಗೂ ಮುನ್ನ ಬೃಹತ್ ಅಹಿಂದ ಸಮಾವೇಶ ಆಯೋಜಿಸಿ ರಾಜಕೀಯ ಬಲ ಪ್ರದರ್ಶನ ಮಾಡಿದ್ದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಅಧಿಕಾರ ಚಲಾಯಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಸಿದ್ದರಾಮಯ್ಯ ಅವರದ್ದಾಗಿದೆ.
ಮುಖ್ಯಮಂತ್ರಿಯಾಗಿ ಮೊದಲ ಅವಧಿಯಲ್ಲಿ (2013 – 2018) ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಹಲವು ‘ಭಾಗ್ಯ’ಗಳನ್ನು ಘೋಷಣೆ ಮಾಡಿದ್ದ ಸಿದ್ದರಾಮಯ್ಯ, ಭಾರೀ ಜನಪ್ರಿಯತೆಯ ಹೊರತಾಗಿಯೂ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿರುದ್ಧ ಸೋಲನುಭವಿಸಿದ್ದರು. ಆದರೆ, ಬಾದಾಮಿಯಿಂದಲೂ ಸ್ಪರ್ಧಿಸಿದ್ದ ಅವರು, ಅಲ್ಲಿ ಗೆಲುವು ಸಾಧಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಇದೀಗ ಎರಡನೇ ಅವಧಿಗೆ (2023 ಮೇ) ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.