ಲೋಕಸಭಾ ಚುನಾವಣೆ 2024 ಸುದ್ದಿಗಳು

ಲೋಕಸಭೆ ಚುನಾವಣೆ 2024
ಲೋಕಸಭೆ ಚುನಾವಣೆ ಅಧಿಕೃತವಾಗಿ ಘೋಷಣೆಯಾಗದಿದ್ದರೂ ರಾಜಕೀಯ ವಲಯದಲ್ಲಿ ಬಿಸಿ ಏರಿದೆ. 17 ನೇ ಲೋಕಸಭೆಯ ಅಧಿಕಾರಾವಧಿಯು 2024 ಜೂನ್ 16ರಂದು ಕೊನೆಗೊಳ್ಳುತ್ತಿದೆ. ಈ ಕಾರಣದಿಂದಾಗಿ ಚುನಾವಣಾ ಆಯೋಗವು ಜೂನ್ 16 ರ ಮೊದಲು ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಿದ್ದು,ನಂತರ ನೂತನ ಸರ್ಕಾರ ರಚನೆ ಆಗಲಿದೆ. ದೇಶದಲ್ಲಿ ಒಟ್ಟು 543 ಲೋಕಸಭಾ ಸ್ಥಾನಗಳಿದ್ದು ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದೆ. 2024ರ ಲೋಕಸಭೆ ಚುನಾವಣೆಗೆ ಬಿಜೆಪಿ 30ಕ್ಕೂ ಹೆಚ್ಚು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ವಿರೋಧ ಪಕ್ಷ 28 ಪಕ್ಷಗಳೊಂದಿಗೆ ಸೇರಿ ಇಂಡಿಯಾ ಮೈತ್ರಿಕೂಟ ರಚಿಸಿದೆ.ಈ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದೆ.ಆದರೆ ಬಿಎಸ್‌ಪಿ, ಬಿಜೆಡಿ, ಅಕಾಲಿದಳದಂತಹ ಪಕ್ಷಗಳು ಯಾವುದೇ ಮೈತ್ರಿಕೂಟದ ಭಾಗವಾಗಿಲ್ಲ.

2019 ರಲ್ಲಿ, ಏಪ್ರಿಲ್ 11 ಮತ್ತು ಮೇ 19 ರ ನಡುವೆ ದೇಶಾದ್ಯಂತ ಏಳು ಹಂತಗಳಲ್ಲಿ ಚುನಾವಣೆಗಳನ್ನು ನಡೆಸಲಾಯಿತು. ಫಲಿತಾಂಶಗಳು ಮೇ 23 ರಂದು ಬಂದವು. 2019 ರಲ್ಲಿ, ದೇಶಾದ್ಯಂತ ಸುಮಾರು 91.2 ಕೋಟಿ ಮತದಾರರಿದ್ದು, 67 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ಇದರಲ್ಲಿ ಬಿಜೆಪಿ ಶೇ.37.36 ಮತ್ತು ಕಾಂಗ್ರೆಸ್ ಶೇ.19.49 ಮತಗಳನ್ನು ಪಡೆದಿವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸತತ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದು, 2024ರಲ್ಲಿ ಬಿಜೆಪಿ ಹ್ಯಾಟ್ರಿಕ್ ಅಧಿಕಾರದ ಗದ್ದುಗೆ ಏರುವ ಪ್ರಯತ್ನದಲ್ಲಿದೆ. ಅದೇ ಸಮಯದಲ್ಲಿ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಇಂಡಿಯಾ ಮೈತ್ರಿಯು ಬಿಜೆಪಿ ಅಧಿಕಾರಕ್ಕೇರದಂತೆ ತಡೆಯಲು ಪ್ರಯತ್ನಿಸುತ್ತಿದೆ.

ದೇಶದ 18ನೇ ಲೋಕಸಭೆಗೆ 2024ರ ಏಪ್ರಿಲ್ ಮತ್ತು ಮೇ ನಡುವೆ ಲೋಕಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಲೋಕಸಭೆಯ ಪ್ರತಿ ಸದನದ ಅಧಿಕಾರಾವಧಿ ಐದು ವರ್ಷಗಳು. ಐದು ವರ್ಷಗಳ ಅವಧಿ ಮುಗಿಯುವ ಮೊದಲೇ ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ. ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ದಿನಾಂಕವನ್ನು ಸಂವಿಧಾನವು ಸೂಚಿಸಿರುವ ಕಾಲಮಿತಿಯನ್ನು ಉಲ್ಲಂಘಿಸದ ರೀತಿಯಲ್ಲಿ ಖಚಿತಪಡಿಸಿಕೊಳ್ಳಬೇಕು. ಇದಲ್ಲದೇ ಚುನಾವಣೆ ಘೋಷಣೆಯಾದ ಸುಮಾರು 40 ರಿಂದ 45 ದಿನಗಳ ನಂತರ ಮತದಾನದ ದಿನಾಂಕವಾಗಿದ್ದು, ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರಕ್ಕೆ ಸಮಯ ಸಿಗುತ್ತದೆ. 2014 ಮತ್ತು 2019ರಲ್ಲಿ ನಡೆದಂತೆ 2024 ರಲ್ಲೂ ಏಪ್ರಿಲ್-ಮೇ ವೇಳೆಗೆ ಚುನಾವಣೆಗಳು ನಡೆಯಬಹುದು. ಮಾರ್ಚ್ ನಿಂದ ಮೇ ವರೆಗಿನ ಸಮಯ ಹವಾಮಾನದ ದೃಷ್ಟಿಯಿಂದ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಐದರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಬಹುದು ಎಂದು ಹೇಳಲಾಗುತ್ತಿದೆ.