Bihar Election Results: ಬಿಹಾರದಲ್ಲಿ ತನ್ನದೇ ದಾಖಲೆ ಮುರಿದು ದೊಡ್ಡಣ್ಣನಾಗಿ ಹೊರಹೊಮ್ಮಿದ ಬಿಜೆಪಿ!
ಬಿಹಾರದಲ್ಲಿ 10ನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾದ ನಾಯಕ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ. ಎನ್ಡಿಎ ನಾಯಕರು 74 ವರ್ಷದ ನಾಯಕ ನಿತೀಶ್ ಕುಮಾರ್ ಅವರನ್ನೇ ತಮ್ಮ ಸಿಎಂ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮತ್ತೊಮ್ಮೆ ಜೆಡಿಯು ನಾಯಕ ನಿತೀಶ್ ಕುಮಾರ್ ಅವರೇ ಪಟ್ಟಕ್ಕೇರಲಿದ್ದಾರೆ. ಇನ್ನೂ ಮತ ಎಣಿಕೆ ಮುಂದುವರೆದಿದ್ದು, ಎನ್ಡಿಎ 204 ಸ್ಥಾನಗಳಲ್ಲಿ ಮುಂದಿದ್ದರೆ ಮಹಾಘಟಬಂಧನ್ ಕೇವಲ 32 ಸ್ಥಾನಗಳಲ್ಲಿ ಮುಂದಿದೆ. ಹೀಗಾಗಿ, ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ರಚನೆಯಾಗುವುದು ಖಚಿತವಾಗಿದೆ.

ಪಾಟ್ನಾ, ನವೆಂಬರ್ 19: ಬಿಹಾರದಲ್ಲಿ (Bihar Assembly Elections Result) ಈ ಬಾರಿ ಎನ್ಡಿಎ ಮತ್ತು ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ಇರಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಮತ ಎಣಿಕೆ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಆ ನಿರೀಕ್ಷೆ ಹುಸಿಯಾಯಿತು. ಬಿಜೆಪಿ ನೇತೃತ್ವದ ಎನ್ಡಿಎ ಸಮೀಪಕ್ಕೂ ಸುಳಿಯದ ಮಹಾಘಟಬಂಧನ್ ತೀವ್ರ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದಲ್ಲೇ ಬೀಡುಬಿಟ್ಟು ಸಾಲು ಸಾಲು ಚುನಾವಣಾ ರ‍್ಯಾಲಿಗಳನ್ನು ನಡೆಸಿದರೂ ಎಸ್ಐಆರ್ ಕುರಿತು ಸಾಲು ಸಾಲು ಆರೋಪಗಳನ್ನು ಮಾಡಿದರೂ, ವೋಟ್ ಚೋರಿ ಅಭಿಯಾನವನ್ನೇ ನಡೆಸಿದರೂ ಮತದಾರರನ್ನು ಸೆಳೆಯಲು ಅವರು ಸಫಲರಾಗಲಿಲ್ಲ. ಅತ್ತ ಕಾಂಗ್ರೆಸ್ ಜೊತೆ ನೆಪಮಾತ್ರಕ್ಕೆ ಕೈಜೋಡಿಸಿದ್ದ ಆರ್‌ಜೆಡಿ ಕೂಡ ತನ್ನ ಬಿಗಿಹಿಡಿತವಿರುವ ಕ್ಷೇತ್ರಗಳಲ್ಲೂ ಸೋಲನ್ನೊಪ್ಪಿಕೊಂಡು ಕುಳಿತಿದೆ.
ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದ ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಭಾರತೀಯ ಚುನಾವಣಾ ಆಯೋಗದ (ECI) ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಎನ್ಡಿಎ ಮೈತ್ರಿಕೂಟ 204 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದರೆ ಮಹಾಘಟಬಂಧನ್ ಅಥವಾ ಮಹಾಮೈತ್ರಿಕೂಟ ಸುಮಾರು 32 ಸ್ಥಾನಗಳಲ್ಲಿ ಮುಂದಿದೆ.
ಇದನ್ನೂ ಓದಿ: ಬಿಹಾರದಲ್ಲಿ ನಿಮೋ ಮೋಡಿ; ಫಲಿತಾಂಶಕ್ಕೂ ಮೊದಲೇ ಗೆಲುವಿನ ನಗು ಬೀರಿದ ನಿತೀಶ್-ಮೋದಿ ಜೋಡಿ
NDAಯಲ್ಲಿ ಭಾರತೀಯ ಜನತಾ ಪಕ್ಷ (BJP), ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ-ಯುನೈಟೆಡ್ (JD-U), ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ (LJP-RM), ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಚಾ (RLM) ಸೇರಿವೆ.
ಮತ್ತೊಂದೆಡೆ, ಮಹಾಘಟಬಂಧನ್‌ನಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಾಂಗ್ರೆಸ್, ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ), ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) (ಲಿಬರೇಶನ್), ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಸಿಪಿಐ) ಸೇರಿವೆ.
ಇದನ್ನೂ ಓದಿ: Bihar Election Result: ಬಿಹಾರ ಚುನಾವಣಾ ಫಲಿತಾಂಶ, ರಾಹುಲ್ ಗಾಂಧಿಗೆ ಇದು 95ನೇ ಸೋಲು
ಉನ್ನತ ಮಟ್ಟದ ಸಮೀಕ್ಷೆಯ ಪ್ರಕಾರ, ಬಿಜೆಪಿ ಬಿಹಾರದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಪ್ರಸ್ತುತ 92 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಹಾರ ರಾಜ್ಯದಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಇದೇ ಮೊದಲು. ಹೀಗಾಗಿ, ಬಿಜೆಪಿ ಪಾಲಿಗೆ ಈ ಗೆಲುವು ಬಹಳ ವಿಶೇಷವಾದುದು ಮತ್ತು ಐತಿಹಾಸಿಕವಾದುದು.
ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಾಗಿನಿಂದ, ಬಿಜೆಪಿ ಯಾವಾಗಲೂ ಬಿಹಾರದಲ್ಲಿ ಜೆಡಿಯುಗೆ ಬೆಂಬಲ ನೀಡುವ ಕಿರಿಯ ಸಹೋದರನಾಗಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. 2020ರ ಬಿಹಾರ ಚುನಾವಣೆಯ ಸಮಯದಲ್ಲಿ ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು, ಜೆಡಿಯು 115 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಆದರೆ, ಈ ಬಾರಿ ಬಿಜೆಪಿ ಮತ್ತು ಜೆಡಿಯು ಎರಡೂ ಪಕ್ಷಗಳು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಹೀಗಿದ್ದರೂ ಬಿಜೆಪಿ ಈ ಬಾರಿ ಐತಿಹಾಸಿಕ ಗೆಲುವು ಕಂಡಿದೆ.
ಈ ಮೂಲಕ ಬಿಜೆಪಿ ಬಿಹಾರದಲ್ಲಿ ತನ್ನದೇ ದಾಖಲೆಯನ್ನು ಮುರಿದಿದೆ. 2010ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ 91 ಸ್ಥಾನಗಳನ್ನು ಪಡೆದಿತ್ತು. ಆಗ ಬಿಜೆಪಿ 102 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. 2015ರಲ್ಲಿ ಬಿಜೆಪಿ ಕೇವಲ 53 ಸ್ಥಾನಗಳನ್ನು ಗೆದ್ದಿತ್ತು. 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು 110 ಸ್ಥಾನಗಳಲ್ಲಿ ಸ್ಪರ್ಧಿಸಿದ ನಂತರ 74 ಸ್ಥಾನಗಳನ್ನು ಗೆದ್ದಿತ್ತು. ಇದೀಗ ಬಿಜೆಪಿ 2010ರ ತನ್ನ ದಾಖಲೆಯನ್ನು ಮುರಿದು ಬಿಹಾರದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ, ಈ ಹಿಂದೆಯೇ ಘೋಷಿಸಿದ ಕಾರಣಕ್ಕೆ ಬಿಹಾರದ ಸಿಎಂ ಸ್ಥಾನವನ್ನು ಜೆಡಿಯುಗೆ ಬಿಟ್ಟುಕೊಡಲೇಬೇಕಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Fri, 14 November 25




