ಬಿಹಾರದಲ್ಲಿ ನಡೆದ ದಾಖಲೆಯ ಮತದಾನ ಜನರಿಗೆ ನಮ್ಮ ಮೇಲಿಟ್ಟ ನಂಬಿಕೆಗೆ ಸಾಕ್ಷಿ; ಪ್ರಧಾನಿ ಮೋದಿ
ಬಿಹಾರದಲ್ಲಿ ಗುರುವಾರ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆದಿದೆ. ಜನರು ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಸಿಎಂ ನಿತೀಶ್ ಕುಮಾರ್ ಅವರನ್ನು ನಂಬುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಔರಂಗಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ನಡೆದ 'ದಾಖಲೆಯ ಮತದಾನ'ಕ್ಕಾಗಿ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.

ಔರಂಗಾಬಾದ್, ನವೆಂಬರ್ 7: ಬಿಹಾರದ ವಿಧಾನಸಭಾ ಚುನಾವಣೆಯ (Bihar Assembly Elections) ಮೊದಲ ಹಂತದ ಮತದಾನ ನಿನ್ನೆ ನಡೆದಿದೆ. ಇಂದು ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೊದಲ ಹಂತದಲ್ಲಿ ನಡೆದ ದಾಖಲೆಯ ಮತದಾನಕ್ಕಾಗಿ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಶ್ಲಾಘಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಭಾರಿ ಜಯಗಳಿಸುವುದಾಗಿ ಭವಿಷ್ಯ ನುಡಿದಿದ್ದಾರೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ನಡೆದ ‘ದಾಖಲೆಯ ಮತದಾನ’ಕ್ಕಾಗಿ ಮತದಾರರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ತಮ್ಮ ಮತ್ತು ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ‘ಟ್ರ್ಯಾಕ್ ರೆಕಾರ್ಡ್’ನಲ್ಲಿ ಜನರ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಂದೇ ಮಾತರಂ ಎಂಬುದು ಭಾರತ ಮಾತೆಯ ಆರಾಧನೆ, ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತೆ: ಮೋದಿ
ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ನನ್ನ-ನಿತೀಶ್ ಅವರ ಹಿಂದಿನ ದಾಖಲೆ ಎಲ್ಲರ ಮುಂದೆ ಇದೆ. ನಾನು ಹೇಳುವುದನ್ನೇ ಮಾಡುತ್ತೇನೆ. ರಾಮ ಮಂದಿರ ನಿರ್ಮಿಸುವುದಾಗಿ ನಾನು ಹೇಳಿದ್ದೆ, ಅದು ಆಯಿತೇ ಅಥವಾ ಇಲ್ಲವೇ? 370ನೇ ವಿಧಿಯ ಗೋಡೆ ಕುಸಿಯುತ್ತದೆ ಎಂದು ನಾನು ಭರವಸೆ ನೀಡಿದ್ದೆ. ಅದು ಆಯಿತೇ ಅಥವಾ ಇಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
“ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಹಿಂದಿನ ಸಾಧನೆಯನ್ನು ನೀವು ನೋಡಿದ್ದೀರಿ. ಉದ್ಯೋಗಕ್ಕಾಗಿ ಬಿಹಾರದ ಯುವಕರಿಂದ ಭೂಮಿಯನ್ನು ಕಸಿದುಕೊಳ್ಳುವ ಜನರು ಇವರು ಇಂದು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಏಜೆನ್ಸಿಗಳು ಅವರ ಬಗ್ಗೆ ತನಿಖೆ ನಡೆಸುತ್ತಿವೆ” ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಿಮ್ಮ ಎದೆ ಮೇಲೆ ಬುಲ್ಡೋಜರ್ ಓಡಿಸುತ್ತೇವೆ; ಚಪ್ಪಲಿ ಎಸೆದವರಿಗೆ ಬಿಹಾರದ ಡಿಸಿಎಂ ಎಚ್ಚರಿಕೆ
ನವೆಂಬರ್ 6ರಂದು ಬಿಹಾರದ 18 ಜಿಲ್ಲೆಗಳ 121 ಸ್ಥಾನಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಿತು. ಬಿಹಾರದಲ್ಲಿ ಶೇ. 64.5ರಷ್ಟು ಮತದಾನ ದಾಖಲಾಗಿದೆ. ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




