AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದರಿಗೇ ಪಂಗನಾಮ! ಸೈಬರ್ ವಂಚನೆಯಲ್ಲಿ 56 ಲಕ್ಷ ರೂ. ಕಳೆದುಕೊಂಡ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸೈಬರ್ ಅಪರಾಧಿಗಳು ದೋಚಿದ್ದಾರೆ. ಇದರಿಂದ ಕಲ್ಯಾಣ್ ಅವರು 56 ಲಕ್ಷ ರೂ. ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು 4 ಬಾರಿ ಸಂಸದರಾಗಿರುವ ಕಲ್ಯಾಣ್ ಬ್ಯಾನರ್ಜಿ ಅವರು ಬೃಹತ್ ಆನ್‌ಲೈನ್ ಬ್ಯಾಂಕಿಂಗ್ ವಂಚನೆಗೆ ಸಿಲುಕಿದ್ದಾರೆ. ಈ ಘಟನೆಯ ಬಗ್ಗೆ ಕೋಲ್ಕತ್ತಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂಸದರಿಗೇ ಪಂಗನಾಮ! ಸೈಬರ್ ವಂಚನೆಯಲ್ಲಿ 56 ಲಕ್ಷ ರೂ. ಕಳೆದುಕೊಂಡ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ
Kalyan Banerjee
ಸುಷ್ಮಾ ಚಕ್ರೆ
|

Updated on:Nov 07, 2025 | 5:52 PM

Share

ಕೋಲ್ಕತ್ತಾ, ನವೆಂಬರ್ 7: ಯಾವುದೇ ಒಟಿಪಿಯನ್ನು ಅಪರಿಚಿತರ ಜೊತೆ ಹಂಚಿಕೊಳ್ಳಬೇಡಿ, ಆನ್​ಲೈನ್ ವಹಿವಾಟು ನಡೆಸುವಾಗ ಎಚ್ಚರಿಕೆಯಿಂದಿರಿ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಆದರೂ ಸೈಬರ್ ಕ್ರೈಂ (Cyber Crime) ಮಾಡುವವರು ಹಣವನ್ನು ದೋಚಲು ಒಂದಿಲ್ಲೊಂದು ಹೊಸ ಮಾರ್ಗ ಹುಡುಕುತ್ತಲೇ ಇರುತ್ತಾರೆ. ಇದೀಗ ಟಿಎಂಸಿ (ತೃಣಮೂಲ ಕಾಂಗ್ರೆಸ್) ಪಕ್ಷದ ಸಂಸದರೇ ಈ ಸೈಬರ್ ಅಪರಾಧಕ್ಕೆ ಬಲಿಪಶುವಾಗಿರುವ ಆಘಾತಕಾರಿ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು 4 ಬಾರಿ ಸಂಸದರಾಗಿರುವ ಕಲ್ಯಾಣ್ ಬ್ಯಾನರ್ಜಿ ಅವರು ಬೃಹತ್ ಆನ್‌ಲೈನ್ ಬ್ಯಾಂಕಿಂಗ್ ವಂಚನೆಗೆ ಸಿಲುಕಿದ್ದಾರೆ.

ಸೈಬರ್ ಅಪರಾಧಿಗಳು ಕಲ್ಯಾಣ್ ಬ್ಯಾನರ್ಜಿ ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆಯಿಂದ 56 ಲಕ್ಷ ರೂ.ಗೂ ಹೆಚ್ಚು ಹಣವನ್ನು ಕದ್ದಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಕೊಲ್ಕತ್ತಾದ ಎಸ್‌ಬಿಐ ಹೈಕೋರ್ಟ್ ಶಾಖೆಯು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಔಪಚಾರಿಕ ದೂರು ದಾಖಲಿಸಿದ್ದು, ವಂಚನೆಯ ವಹಿವಾಟುಗಳ ಬಗ್ಗೆ ತಕ್ಷಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಇದನ್ನೂ ಓದಿ: Cyber Fraud: ದೇಶದ ವಿವಿಧೆಡೆ ಕೋಟಿ ಕೋಟಿ ದೋಚುತ್ತಿದ್ದ ಸೈಬರ್ ವಂಚಕರ ಜಾಲ ಭೇದಿಸಿದ ದಾವಣಗೆರೆ ಪೊಲೀಸ್

ಅಪರಾಧಿಗಳು ತಮ್ಮ ಖಾತೆಯ ಕೆವೈಸಿ ವಿವರಗಳನ್ನು ನವೀಕರಿಸಲು ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮಾರ್ಫ್ ಮಾಡಿದ ಫೋಟೋದೊಂದಿಗೆ ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಂದಹಾಗೆ, ಕಲ್ಯಾಣ್ ಬ್ಯಾನರ್ಜಿ ಅವರ ಈ ಖಾತೆಯನ್ನು 2001 ಮತ್ತು 2006ರ ನಡುವೆ ತೆರೆಯಲಾಗಿತ್ತು. ಆಗ ಅವರು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಸನ್ಸೋಲ್ (ದಕ್ಷಿಣ) ನಿಂದ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಖಾತೆಯು ಹಲವಾರು ವರ್ಷಗಳ ಕಾಲ ನಿಷ್ಕ್ರಿಯವಾಗಿತ್ತು. ನಂತರ ಅದನ್ನು ಸುಳ್ಳು ದಾಖಲೆಗಳನ್ನು ಬಳಸಿ ಪುನಃ ಸಕ್ರಿಯಗೊಳಿಸಲಾಗಿತ್ತು.

ಅಕ್ಟೋಬರ್ 28, 2025ರಂದು, ವಂಚಕರು ಆ ಖಾತೆಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದರು. ಆ ಖಾತೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದರು. ವಿವರಗಳನ್ನು ಬದಲಾಯಿಸಿದ ನಂತರ ಅವರು ಆನ್‌ಲೈನ್ ವಹಿವಾಟುಗಳನ್ನು ಪ್ರಾರಂಭಿಸಿದರು. ವಿವಿಧ ಖಾತೆಗಳಿಗೆ 56,39,767 ರೂ.ಗಳನ್ನು ವರ್ಗಾಯಿಸಿದರು. ಆಭರಣ ಖರೀದಿಗೆ ಹಣ ಖರ್ಚು ಮಾಡಿದರು ಮತ್ತು ಎಟಿಎಂ ಮೂಲಕ ಹಣ ಡ್ರಾ ಮಾಡಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಶುರು: ನಾಲ್ಕು ವಿಂಗ್​​ಗಳಲ್ಲಿ ಕಾರ್ಯಚರಣೆ

ಸಂಸದ ಕಲ್ಯಾಣ್ ಬ್ಯಾನರ್ಜಿಯವರ ವೈಯಕ್ತಿಕ ಖಾತೆಯಾದ ಎಸ್‌ಬಿಐ ಕಾಲಿಘಾಟ್ ಶಾಖೆಯ ಖಾತೆಯಿಂದ ಈ ನಿಷ್ಕ್ರಿಯ ಖಾತೆಗೆ 56 ಲಕ್ಷ ರೂ.ಗಳನ್ನು ವರ್ಗಾಯಿಸಲಾಗಿತ್ತು. ಆದರೆ, ಈ ವಿಷಯ ಯಾರ ಗಮನಕ್ಕೂ ಬರಲಿಲ್ಲ. ನಂತರ ಆ ಹಣವನ್ನು ಹಲವಾರು ಅನಧಿಕೃತ ಟ್ರಾನ್ಸಾಕ್ಷನ್ ಮೂಲಕ ಖಾಲಿ ಮಾಡಲಾಯಿತು. ಈ ಬಗ್ಗೆ ಅನುಮಾನಗೊಂಡ ಸಂಸದ ಕಲ್ಯಾಣ್ ಬ್ಯಾನರ್ಜಿ ತಕ್ಷಣವೇ ಎಸ್‌ಬಿಐ ಅಧಿಕಾರಿಗಳನ್ನು ಸಂಪರ್ಕಿಸಿದರು. ನಂತರ ಎಸ್​ಬಿಐ ಸೈಬರ್ ಅಪರಾಧ ಇಲಾಖೆಗೆ ದೂರು ಸಲ್ಲಿಸಿತು. ಕೋಲ್ಕತ್ತಾ ಪೊಲೀಸ್ ಸೈಬರ್ ಅಪರಾಧ ವಿಭಾಗವು ಈ ವಿಷಯದ ಬಗ್ಗೆ ಪೂರ್ಣ ಪ್ರಮಾಣದ ತನಿಖೆಯನ್ನು ಪ್ರಾರಂಭಿಸಿದೆ.

ಈ ಘಟನೆಯ ಬಗ್ಗೆ ಅಸಮಾಧಾನ ಹೊರಹಾಕಿರುವ ಕಲ್ಯಾಣ್ ಬ್ಯಾನರ್ಜಿ, “ನೀವು ಹಣವನ್ನು ಬ್ಯಾಂಕಿನಲ್ಲಿ ಇರಿಸಿದರೆ, ಅಪರಾಧಿಗಳು ಅದನ್ನು ತೆಗೆದುಕೊಳ್ಳುತ್ತಾರೆ. ನೀವು ಅದನ್ನು ಮನೆಯಲ್ಲಿ ಇರಿಸಿದರೆ ಪ್ರಧಾನಿ ನರೇಂದ್ರ ಮೋದಿ ಅದನ್ನು ತೆಗೆದುಕೊಳ್ಳುತ್ತಾರೆ” ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Fri, 7 November 25