ಕ್ಯಾಬ್ ಡ್ರೈವರ್ಗಳಲ್ಲಿ ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಅವರ ಜೀವನಶೈಲಿ ಕಾರಣ: ಡಾ ರಾಹುಲ ಪಾಟೀಲ್
ಕೋವಿಡ್ ಸೋಂಕಿನ ತೀವ್ರತೆ ಬಹಳವಿರಲಿ ಇಲ್ಲವೇ ಸಾಧಾರಣ-ಚೇತರಿಸಿಕೊಂಡ ನಂತರ ಒಂದು ಈಸಿಜಿ ಮತ್ತು ಇಕೋ ಟೆಸ್ಟ್ ಮಾಡಿಸುವುದು ಒಳ್ಳೆಯದು ಅನ್ನುತ್ತಾರೆ ಡಾ ಪಾಟೀಲ.
ಕೋವಿಡ್ ಸೋಂಕು ಮತ್ತು ಹಾರ್ಟ್ ಆಟ್ಯಾಕ್ ನಡುವೆ ಏನಾದರೂ ಸಂಬಂಧವಿದೆಯಾ? ಹೌದು ಅನ್ನುತ್ತಾರೆ ಬೆಂಗಳೂರು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಾಹುಲ ಪಾಟೀಲ್. ಅವರು ಹೇಳುವ ಪ್ರಕಾರ ಸೋಂಕಿತ ವ್ಯಕ್ತಿಯೊಬ್ಬ ಚಿಕಿತ್ಸೆ ಪಡೆಯುವಾಗ ಅವನ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ಅದರಿಂದಾಗಿ ಹಾರ್ಟ್ ಅಟ್ಯಾಕ್ ಆಗುವ ಅಪಾಯವಿರುತ್ತದೆ. ಇದರಲ್ಲಿ ಎರಡು ರೀತಿಯಿದೆ. ತೀವ್ರ ಸ್ವರೂಪದ ಸೋಂಕಿಗೊಳಗಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡವರು ಮತ್ತು ಸಾಧಾರಣ ಸ್ವರೂಪದ ಸೋಂಕಿಗೀಡಾಗಿ ಮನೆಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದು ಚೇತರಿಸಿಕೊಂಡವರು. ವೈದ್ಯರು ನಡೆಸಿರುವ ಸಮೀಕ್ಷೆಯ ಪ್ರಕಾರ ಹೋಮ್ ಐಸೊಲೇಶನ್ ನಲ್ಲಿದ್ದು ಚಿಕಿತ್ಸೆ ಪಡೆದವರಲ್ಲೇ ಹೆಚ್ಚು ಹೃದಯಾಘಾತದ ಪ್ರಕರಣಗಳು ಸಂಭವಿಸಿವೆ.
ಕೋವಿಡ್ ಸೋಂಕಿನ ತೀವ್ರತೆ ಬಹಳವಿರಲಿ ಇಲ್ಲವೇ ಸಾಧಾರಣ-ಚೇತರಿಸಿಕೊಂಡ ನಂತರ ಒಂದು ಈಸಿಜಿ ಮತ್ತು ಇಕೋ ಟೆಸ್ಟ್ ಮಾಡಿಸುವುದು ಒಳ್ಳೆಯದು ಅನ್ನುತ್ತಾರೆ ಡಾ ಪಾಟೀಲ. ಹಾಗೆಯೇ ಕ್ಯಾಬ್ ಡ್ರೈವರ್ ಗಳಲ್ಲಿ ಹೃದಯಾಘಾತ ಹೆಚ್ಚಿತ್ತಿರುವುದಕ್ಕೂ ಅವರು ಕಾರಣಗಳನ್ನು ತಿಳಿಸುತ್ತಾರೆ. ಬೆಂಗಳೂರು ನಗರದಲ್ಲಿ ಹೃದಯಾಘಾತದ ಪ್ರಕರಣಗಳನ್ನು ಅಧ್ಯಯನ ನಡೆಸಿದಾಗ ಶೇಕಡಾ 27 ರಿಂದ 30 ರಷ್ಟು ಜನ ಕ್ಯಾಬ್ ಚಾಲಕರಾಗಿದ್ದರು ಎಂದು ಡಾ ಪಾಟೀಲ ಹೇಳುತ್ತಾರೆ.
ಅವರ ಜೀವನ ಶೈಲಿ ಹೃದಯಾಘಾತದ ಅಪಾಯವನ್ನು ತಂದೊಡ್ಡುತ್ತಿದೆ. ಅವರು ಸರಿಯಾಗಿ ನಿದ್ರೆ ಮಾಡುವುದಿಲ್ಲ, ಏರ್ ಪೋರ್ಟ್ಗೆ ಹೋದಾಗ ನಿದ್ರೆ ತಡೆಗಟ್ಟಲು ಅವರು ಚಹಾ ಮತ್ತು ಸಿಗರೇಟಿನ ಮೊರೆಹೋಗುತ್ತಾರೆ, ಹಸಿವಾದಾಗ ಯಾವುದೋ ಹೋಟೆಲ್ ನಲ್ಲಿ ಊಟ ಮಾಡುತ್ತಾರೆ. ಕೆಲ ಹೋಟೆಲ್ಗಳಲ್ಲಿ ಉಪಯೋಗಿಸುವ ಎಣ್ಣೆ ಕೆಟ್ದದಾಗಿರುತ್ತದೆ ಮತ್ತು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಎಲ್ಲ ಕಾರಣಗಳಿಂದ ಅವರಲ್ಲಿ ಹೃದಯಾಘಾತವಾಗುತ್ತಿದೆ ಎಂದು ಡಾ ಪಾಟೀಲ ಹೇಳುತ್ತಾರೆ.