ರಾತ್ರಿ ಊಟ 7:30ಕ್ಕಿಂತ ಮುಂಚೆ ಮಾಡಬೇಕು ಮತ್ತು ದಿನಕ್ಕೆ 1,000 ಹೆಜ್ಜೆ ನಡೆಯಲೇ ಬೇಕು ಅನ್ನುತ್ತಾರೆ ಡಾ ರಾಹುಲ ಪಾಟೀಲ
ಡಿನ್ನರ್ ನಂತರ ಮಲಗುವ ಮುಂಚೆ ಹಸಿವು ಅನಿಸಿದರೆ, ಹಣ್ಣು-ಹಂಪಲು ತಿನ್ನಬೇಕೇ ಹೊರತು ಊಟ ಮಾತ್ರ ಮಾಡಬಾರದು ಅಂತ ಅವರು ಹೇಳುತ್ತಾರೆ.
ಉತ್ತಮ ಅರೋಗ್ಯ ಹೊಂದಿರಬೇಕಾದರೆ ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಅನ್ನೋದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದ ನಂತರ ಅತಿಹೆಚ್ಚು ಚರ್ಚಿಸಲ್ಪಡುತ್ತಿರುವ ವಿಷಯವಾಗಿದೆ. ಡಾಕ್ಟರ್ ಗಳು ಸರಿಯಾದ ಸಮಯಕ್ಕೆ ಊಟ, ನಿಯಮಿತ ವ್ಯಾಯಾಮ ನಮ್ಮ ದೇಹ ಮತ್ತು ಮನಸನ್ನು ಆರೋಗ್ಯವಾಗಿಡುತ್ತವೆ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಟಿವಿ9 ನಿರೂಪಕ ಮಾಲ್ತೇಶ್ ಅವರು ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ ರಾಹುಲ ಪಾಟೀಲ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉತ್ತಮ ಮತ್ತು ಆರೋಗ್ಯಕರ ಜೀವನ ಶೈಲಿಗೆ ಆಹಾರ ಕ್ರಮ ಹೇಗಿರಬೇಕು, ವ್ಯಾಯಾಮ ಎಷ್ಟು ಹೊತ್ತು ಮಾಡಬೇಕು ಅನ್ನೋದನ್ನು ಸರಳ ಭಾಷೆಯಲ್ಲಿ ವೈದ್ಯರು ಹೇಳಿದ್ದಾರೆ.
ಮೊದಲು ಆಹಾರ ಕ್ರಮದ ಬಗ್ಗೆ ಮಾತಾಡಿರುವ ಡಾ ಪಾಟೀಲ, ಬೆಳಗ್ಗೆ 9 ಗಂಟೆಗೆ ಉಪಹಾರ ಸೇವಿಸಿದ ನಂತರ ಮಧ್ಯಾಹ್ನ ಒಂದು ಗಂಟೆಗೆ ಲಂಚ್ ಸೇವಿಸಬೇಕು ಅಂತ ಹೇಳುತ್ತಾರೆ. ಮಧ್ಯಾಹ್ನದ ಊಟದ ಸಮಯ ಸ್ವಲ್ಪ ಹೆಚ್ಚು ಕಮ್ಮಿಯಾದರೂ ನಡೆಯುತ್ತದೆ, ಅದರೆ ಡಿನ್ನರ್ ಮಾತ್ರ ರಾತ್ರಿ 7:30 ರೊಳಗೆ ಆಗಬೇಕು ಅನ್ನುತ್ತಾರೆ.
ಡಿನ್ನರ್ ನಂತರ ಮಲಗುವ ಮುಂಚೆ ಹಸಿವು ಅನಿಸಿದರೆ, ಹಣ್ಣು-ಹಂಪಲು ತಿನ್ನಬೇಕೇ ಹೊರತು ಊಟ ಮಾತ್ರ ಮಾಡಬಾರದು ಅಂತ ಅವರು ಹೇಳುತ್ತಾರೆ. ಹಿಂದಿನ ಕಾಲದಲ್ಲಿ ನಮ್ಮ ತಾತ ಮುತ್ತಾತಂದಿರು ಆಗ ವಿದ್ಯುತ್ ಇರದಿದ್ದ ಕಾರಣ ಹೊತ್ತು ಮುಳುಗುವ ಮೊದಲೇ ಊಟ ಮಾಡುತ್ತಿದ್ದರು. ಅವರ ಉತ್ತಮ ಆರೋಗ್ಯದ ಗುಟ್ಟು ಅದೇ ಆಗಿತ್ತು ಎಂದು ಡಾ ಪಾಟೀಲ ಹೇಳುತ್ತಾರೆ.
ವ್ಯಾಯಾಮದ ವಿಷಯಕ್ಕೆ ಬಂದರೆ, ವಾರಕ್ಕೆ 150 ನಿಮಿಷಗಳ ನಡೆದಾಟ ಬೇಕೆಂದು ಸಾಮಾನ್ಯವಾಗಿ ಎಲ್ಲ ವೈದ್ಯರು ಹೇಳುತ್ತಾರೆ. ಅದು ಒಳ್ಳೆಯದೆ, ಆದರೆ ಅದು ಕೂಡ ಸಾಧ್ಯವಾಗದ ಪಕ್ಷದಲ್ಲಿ ದಿನಕ್ಕೆ ಕನಿಷ್ಠ 700-1,000 ಹೆಜ್ಜೆ ನಡೆಯಲೇ ಬೇಕು ಎಂದು ಅವರು ಹೇಳುತ್ತಾರೆ.