ಗಣರಾಜ್ಯೋತ್ಸವ ಸ್ತಬ್ಧಚಿತ್ರಗಳ ಪರೇಡ್​​ಗೆ ಇಲಕಲ್ ಸೀರೆ ಮತ್ತು ಗುಳೇದಗುಡ್ಡದ ಖಣ ಆಯ್ಕೆಯಾಗಿವೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2022 | 9:21 PM

8ನೇ ಶತಮಾನದಿಂದ ಇಲಕಲ್​​​ನಲ್ಲಿ ಸೀರೆ ನೇಯುವ ಕಾಯಕ ಜಾರಿಯಲ್ಲಿದೆ. ಈ ಬಾರಿಯ ಗಣರಾಜ್ಯೋತ್ಸವ ಸ್ತಬ್ಧ ಚಿತ್ರಗಳ ಪೆರೇಡ್​ಗೆ ಕರ್ನಾಟಕದಿಂದ ಆಯ್ಕೆಯಾಗಿರುವ 16 ಕರಕುಶಲ ವಸ್ತುಗಳ ಪೈಕಿ ಇಲಕಲ್ ಸೀರೆ ಮತ್ತು ಇದಕ್ಕೆ ಹತ್ತಿರದ ಗುಳೇದಗುಡ್ಡದ ಖಣ (ರವಿಕೆ) ಆಯ್ಕೆಯಾಗಿವೆ.

ಕೈಮಗ್ಗನಲ್ಲಿ ನೇಯ್ದ ಇಲಕಲ್ ಸೀರೆ, ಕುಪ್ಪಸ ಮತ್ತು ಇತರ ಬಟ್ಟೆಗಳು ಕೇವಲ ಉತ್ತರ ಕರ್ನಾಟಕ ಮತ್ತು ಇತರ ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳಲ್ಲೂ ಬಹಳ ಪ್ರಸಿದ್ಧಿ ಪಡೆದಿವೆ. ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಇಲಕಲ್ (Ilkal) ಸೀರೆಗಳನ್ನು ಉಡುವುದು ಪ್ರತಿಷ್ಠೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಶುದ್ಧ ಕಾಟನ್ ಮತ್ತು ಶುದ್ಧ ರೇಷ್ಮೆ ಸೀರೆಗಳು ಇಲಕಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಯಾರಾಗುತ್ತವೆ. ಇಲ್ಲಿಯ ಉತ್ಪನ್ನಗಳಿಗೆ 12 ಶತಮಾನಗಳ ಇತಿಹಾಸವಿದೆ ಎಂದರೆ ನಂಬ್ತೀರಾ? ಹೌದು, 8ನೇ ಶತಮಾನದಿಂದ ಇಲ್ಲಿ ಸೀರೆ ನೇಯುವ ಕಾಯಕ ಜಾರಿಯಲ್ಲಿದೆ. ಈ ಬಾರಿಯ ಗಣರಾಜ್ಯೋತ್ಸವ (Republic Day) ಸ್ತಬ್ಧ ಚಿತ್ರಗಳ ಪೆರೇಡ್ಗೆ (Tableaux) ಕರ್ನಾಟಕದಿಂದ ಆಯ್ಕೆಯಾಗಿರುವ 16 ಕರಕುಶಲ ವಸ್ತುಗಳ ಪೈಕಿ ಇಲಕಲ್ ಸೀರೆ ಮತ್ತು ಇದಕ್ಕೆ ಹತ್ತಿರದ ಗುಳೇದಗುಡ್ಡದ ಖಣ (ರವಿಕೆ) ಆಯ್ಕೆಯಾಗಿವೆ.

ಈ ಸಂದರ್ಭದಲ್ಲಿ ಟಿವಿ9 ಬಾಗಲಕೋಟೆ ವರದಿಗಾರರು ಗುಳೇದಗುಡ್ಡದಲ್ಲಿ ಸೀರೆ ಮತ್ತು ಖಣಗಳನ್ನು ನೇಯುವ ಶಿವಪ್ಪ ಬಸವಲಿಂಗಪ್ಪ ಕಲಬುರಗಿ ಹೆಸರಿನ ನೇಕಾರರನ್ನು ಮಾತಾಡಿಸಿದರು. ಪವರ್ ಲೂಮ್ಗಳ ಭರಾಟೆಯಲ್ಲಿ ಕೈಮಗ್ಗಗಳ ಸಂಸ್ಕೃತಿ ಅಳಿದುಹೋಗುತ್ತಿರುವ ಬಗ್ಗೆ ಶಿವಪ್ಪ ಖೇದ ವ್ಯಕ್ತಪಡಿಸಿದರು.

ಜನರಿಗೆ ಈಗ ಕುಳಿತು ನೇಯುವುದರ ಮೇಲೆ ಒಲವು ಇಲ್ಲ. ಕೈಮಗ್ಗದ ಬಟ್ಟೆಗಳಿಗೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಜನ ನಿರುದ್ಯೋಗಿಗಳಾದರು. ಬದುಕುವ ದಾರಿ ಕಂಡುಕೊಳ್ಳಲು ಪಟ್ಟಣಗಳಿಗೆ ವಲಸೆಹೋದರು. ನೇಕಾರರಿಗೆ ಸರ್ಕಾರದಿಂದಲೂ ಯಾವುದೇ ಉತ್ತೇಜನ ಸಿಗುತ್ತಿಲ್ಲ ಎಂದ ಶಿವಪ್ಪ, ಗುಳೇದಗುಡ್ಡದಲ್ಲಿ ಈಗ ಕೇವಲ 20 ಕೈಮಗ್ಗ ಮಾತ್ರ ಅಸ್ತಿತ್ವದಲ್ಲಿವೆ ಅಂತ ಹೇಳಿದರು.

ನೇಯುವುದು ಒಂದು ಸಂಕೀರ್ಣ ಕಾಯಕವಾಗಿದ್ದು ಇದು ಹಲವಾರು ಆಯಾಮಗಳನ್ನು ಒಳಗೊಂಡಿರುತ್ತದೆ ಎಂದು 6 ಮಕ್ಕಳ ತಂದೆಯಾಗಿರುವ ಶಿವಪ್ಪ ಹೇಳುತ್ತಾರೆ. ಒಂದು ಪಕ್ಷ ಸರ್ಕಾರದಿಂದ ಪ್ರೋತ್ಸಾಹ ಸಿಗದಿದ್ದರೆ ನೇಕಾರಿಕೆ ಇತಿಹಾಸದ ಪುಟ ಸೇರುವುದು ನಿಶ್ಚಿತ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:   Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ