Union Budget
ಬಜೆಟ್ ಎಂದರೆ ಆಯವ್ಯಯ ಪತ್ರ. ಆಯ ಎಂದರೆ ಆದಾಯ, ವ್ಯಯ ಎಂದರೆ ಖರ್ಚು. ಯೂನಿಯನ್ ಬಜೆಟ್ ಅಥವಾ ಕೇಂದ್ರ ಬಜೆಟ್ ಎಂಬುದು ಕೇಂದ್ರ ಸರ್ಕಾರ ರೂಪಿಸುವ ಬಜೆಟ್. ಇದು ಒಂದು ಹಣಕಾಸು ವರ್ಷದ ಹಣಕಾಸು ಲೆಕ್ಕಾಚಾರವಾಗಿದೆ. ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ಖರ್ಚುಗಳ ಒಂದು ಲೆಕ್ಕಪುಸ್ತಕವೇ ಬಜೆಟ್. ಇಡೀ ಒಂದು ವರ್ಷದಲ್ಲಿ ಸರ್ಕಾರದಿಂದ ಯಾವುದೆಲ್ಲಾ ಮತ್ತು ಎಷ್ಟೆಲ್ಲಾ ಆದಾಯ ಬರಬಹುದು. ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ ಮಾಡಬೇಕು ಎಂದು ನಮೂದಿಸಲಾಗುತ್ತದೆ. ಒಂದು ಹಣಕಾಸು ವರ್ಷ ಎಂದರೆ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗಿನ ಅವಧಿ. ಬಜೆಟ್ ಅನ್ನು ರೆವೆನ್ಯೂ ಬಜೆಟ್ ಮತ್ತು ಕ್ಯಾಪಿಟಲ್ ಬಜೆಟ್ ಎಂದು ವರ್ಗೀಕರಿಸಲಾಗುತ್ತದೆ. ರೆವೆನ್ಯೂ ಬಜೆಟ್ನಲ್ಲಿ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಬರುವ ಆದಾಯಗಳು, ಮತ್ತು ಆ ಆದಾಯ ಹಣವನ್ನು ಹೇಗೆಲ್ಲಾ ವಿನಿಯೋಗಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ. ಕ್ಯಾಪಿಟಲ್ ಬಜೆಟ್ನಲ್ಲಿ ಸರ್ಕಾರ ಸಾರ್ವಜನಿಕ ಸಾಲಗಳಿಂದ ಪಡೆಯಬಹುದಾದ ಹಣದ ವಿವರ ಹಾಗೂ ಆ ಹಣ ಎಲ್ಲೆಲ್ಲಿ ಬಳಕೆ ಆಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ.