Bakerwal nomad community: ಜಮ್ಮು ಮತ್ತು ಕಾಶ್ಮೀರದ ಬಕರ್ವಾಲ್ ಅಲೆಮಾರಿ ಜನಾಂಗದ ಬದುಕು ಅಲೆದಾಟದಲ್ಲೇ ಮುಗಿದುಹೋಗುತ್ತದೆ!
ತಮ್ಮ ಬದುಕು ಯಾತನಾಮಯವಾಗಿದ್ದು ಸವಾಲುಗಳಿಂದ ಕೂಡಿದೆ ಎಂದು ಬಕರ್ವಾಲ್ ಸಮುದಾಯದವರು ಹೇಳುತ್ತಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶಿಷ್ಟ ಪಂಗಡವಾಗಿ ವರ್ಗೀಕೃತಗೊಂಡಿರುವ ಬಕರ್ವಾಲ್ (Bakerwal) ಅಲೆಮಾರಿ ಸಮುದಾಯದ (nomadic community) ಜನ ಪ್ರತಿವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿನ (Union Territory) ಎತ್ತರದ ಪರ್ವತ ಪ್ರಾಂತ್ಯಗಳ ಕಡೆ ವಲಸೆ ಹೋಗುತ್ತಾರೆ. ಕುದುರೆ, ಕುರಿ, ಮೇಕೆ ಒಳಗೊಂಡ ತಮ್ಮ ಪಶು ಪಕ್ಷಿಗಳ ಜೊತೆ ಅವರು ಧೋಕ್ ಅಂತ ಕರೆಯುವ ಬೇಸಿಗೆ ಮನೆಗಳಿಗೆ ಗುಳೆ ಹೋಗುತ್ತಾರೆ. ಆಹಾರ, ಬಟ್ಟೆ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಹೊತ್ತುಕೊಂಡು 400-500 ಕಿಮೀ ನಡೆದು ತಮ್ಮ ಗುರಿ ಮುಟ್ಟುತ್ತಾರೆ.
ತಮ್ಮ ಬದುಕು ಯಾತನಾಮಯವಾಗಿದ್ದು ಸವಾಲುಗಳಿಂದ ಕೂಡಿದೆ ಎಂದು ಅವರು ಹೇಳುತ್ತಾರೆ.
‘ನಾವು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿವರ್ಷ 6 ತಿನಗಳು ಕಾಲ ನಾವು ಜಮ್ಮುನಲ್ಲಿ ವಾಸವಾಗಿರುತ್ತೇವೆ. ಚಳಿಗಾಲದಲ್ಲಿ ಶ್ರೀನಗರದ ಗುಡ್ಡಗಾಡು ಪ್ರದೇಶಗಳಿಗೆ ಹೋಗುತ್ತೇವೆ. ನಮ್ಮ ಕುದುರೆ ಮತ್ತು ಆಡು-ಕುರಿಗಳಿಗೆ ಸುಂದರಬನಿ ಹಾಗೂ ನೌಶೀರಾ ಪ್ರದೇಶಗಳಿಂದ ರೂ. 1 ಲಕ್ಷದಿಂದ 1.5 ಲಕ್ಷ ತೆತ್ತು ಮೇವು ಖರೀದಿಸುತ್ತೇವೆ. ಸರ್ಕಾರ ನಮ್ಮ ಬಗ್ಗೆ ಯೋಚನೆಯೇ ಮಾಡಲ್ಲ. ಬದುಕು ನಡೆಸಲು ನಮ್ಮ ಪಶು ಪಕ್ಷಿಗಳನ್ನು ಮಾರಬೇಕಾಗುತ್ತದೆ. ನಮಗೆ ರೇಶನ್ ಒದಗಿಸುವ ಕೆಲಸವನ್ನು ಸರ್ಕಾರ ಯಾವತ್ತೂ ಮಾಡಿಲ್ಲ ಮತ್ತು ನಮ್ಮ ಋತುಮಾನದ ಅಲೆದಾಟಕ್ಕೆ ಯಾವ ವ್ಯವಸ್ಥೆಯನ್ನೂ ಕಲ್ಪಿಸುವುದಿಲ್ಲ,’ ಬಕರ್ವಾಲ್ ಸಮುದಾಯದ ಸದಸ್ಯ ಜಫರ್ ಇಕ್ಬಾಲ್ ಹೇಳುತ್ತಾರೆ.
‘ನಮ್ಮ ಬದುಕೇ ಹೀಗೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆದಾಡುವುದು. ನಮಗೆ ಯಾವ ಸೌಲಭ್ಯವೂ ಸಿಗಲ್ಲ. ಈ ಅಲೆದಾಟದಲ್ಲೇ ನಮ್ಮ ಬದುಕು ಮುಗಿದುಹೋಗುತ್ತದೆ. ನಮ್ಮಲ್ಲಿರೋದು ಇಷ್ಟು ಮಾತ್ರ. ನಮ್ಮ ಪಶುಗಳನ್ನು ಸಾಗಿಸಲು ಬಳಸುತ್ತಿದ್ದ ರಸ್ತೆಗಳನ್ನು ಬಂದ್ ಮಾಡಲಾಗಿದೆ ಹಾಗಾಗಿ ಅವುಗಳನ್ನು ನಾವು ಮಾರಿಬಿಟ್ಟಿದ್ದೇವೆ. ಜನ ನಮ್ಮನ್ನು ಕಳ್ಳರೆಂದು ಭಾವಿಸುತ್ತಾರೆ ಮತ್ತು ನಮ್ಮನ್ನು ನೋಡಿದಾಕ್ಷಣ ಬೈದಾಡುತ್ತಾರೆ. ರಸ್ತೆಯಲ್ಲಿ ನಮಗೆ ಯಾವ ಸೌಲಬ್ಯಗಳೂ ಸಿಕ್ಕಲ್ಲ, ಸರ್ಕಾರದಿಂದ ನಮಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ,’ ಎಂದು ಅಬ್ದುಲ್ ಗನಿ ಹೆಸರಿನ ಮತ್ತೊಬ್ಬ ಅಲೆಮಾರಿ ಹೇಳುತ್ತಾರೆ.
ಬಕರ್ವಾಲ್ ಗಳು ಬೇಸಿಗೆಯ 4 ತಿಂಗಳುಗಳನ್ನು ಎತ್ತರದ ಪರ್ವತ ಪ್ರದೇಶಗಳಲ್ಲಿ ಕಳೆದರೆ ಚಳಿಗಾಲದ 4 ತಿಂಗಳುಗಳನ್ನು ಬಯಲು ಪ್ರದೇಶಗಳಲ್ಲಿ ಕಳೆಯುತ್ತಾರೆ. ಉಳಿದ 4 ತಿಂಗಳು ಅಲೆದಾಟದಲ್ಲಿ ಕಳೆದುಹೋಗುತ್ತವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ