ಉಕ್ರೇನ್​ನಲ್ಲಿ ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆಯಾಗುತ್ತಿದ್ದರೂ ಯುಎನ್​ಎಚ್​ಆರ್​ಸಿ ಸುಮ್ಮನಿದೆ: ನೋಯರ್, ಕಾರ್ಯಕರ್ತ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 25, 2022 | 6:47 PM

ಪರಿಸ್ಥಿತಿ ಕೈಮೀರಿ ಹೋಗಿದ್ದರೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮೌನವಾಗಿರುವುದು ಆಘಾತ ಮೂಡಿಸುತ್ತದೆ. 47 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಮಂಡಳಿ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಉದ್ಭವಿಸಿರುವ ಮಾನವ ಹಕ್ಕುಗಳ ಉಲ್ಲಂಘನೆ ಚರ್ಚಿಸಲು ತುರ್ತು ಸಭೆ ಕರೆದಿಲ್ಲ, ಯಾವುದೇ ಅಜೆಂಡಾ ಪಾಸು ಮಾಡಿಲ್ಲ ಮತ್ತು ತನಿಖಾ ಆಯೋಗವನ್ನೂ ರಚಿಸಿಲ್ಲ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಎರಡು ದಿನಗಳಾದರೂ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡದಿರುವುದು ಎಲ್ಲರಲ್ಲಿ ಅಚ್ಚರಿ ಹುಟ್ಟಿಸುತ್ತಿದೆ. ಹೆಲೋ ನೋಯರ್ ಹೆಸರಿನ ಮಾನವ ಹಕ್ಕುಗಳ ಕಾರ್ಯಕರ್ತ ಸ್ವಿಜರ್ಲ್ಯಾಂಡ್ ನ ಜಿನೀವಾನಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ ಎದುರುಗಡೆ ನಿಂತುಕೊಂಡೇ ಉಕ್ರೇನ್ ನಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ವಿಶ್ವಸಂಸ್ಥೆಯ ಬಗ್ಗೆ ಮಾತಾಡಿದ್ದಾರೆ. ಅವರ ಮಾತುಗಳನ್ನು ಕೇಳಿಸಕೊಂಡರೆ ಯು ಎನ್ ಮಾನವ ಹಕ್ಕುಗಳ (UNHRC) ಕೌನ್ಸಿಲ್ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಬೇಕಾಗುತ್ತದೆ. ಅವರು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ರಷ್ಯಾ, ಉಕ್ರೇನ್ ಮೇಲೆ ಪೂರ್ಣಪ್ರಮಾಣದ ದಾಳಿ ಆರಂಭಿಸಿದ 24 ಗಂಟೆಗಳಲ್ಲಿ ಹಲವಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ನೋಯರ್ ಹೇಳುತ್ತಾರೆ.

ಕೇವಲ ಒಂದು ದಿನದ ಅವಧಿಯಲ್ಲಿ ಸುಮಾರು 15 ಲಕ್ಷ ಉಕ್ರೇನಿಯನ್ನರು ಪ್ರಾಣಭಯದಿಂದ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗಿದ್ದಾರೆ. ಯುದ್ಧ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಉಕ್ರೇನ್ ಸುಮಾರು 50 ಲಕ್ಷ ಜನ ಪ್ರಾಣಭೀತಿ, ಗಾಯಗೊಳ್ಳುವ ಹೆದರಿಕೆ ಮತ್ತು ರಷ್ಯನ್ ಪಡೆಗಳ ಶೋಷಣೆಯಿಂದ ಬಚಾವಾಗಲು ಸ್ಥಳಾಂತರ ಮಾಡಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಉಕ್ರೇನ್ ನಲ್ಲಿ ಈಗ ಆತ್ಯಂತ ದಯನೀಯ ಸ್ಥಿತಿ ಇದೆ, ಅವ್ಯಾಹತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ. ಅಂತರರಾಷ್ಟ್ರೀಯ ಸಮುದಾಯ ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ನೋಯರ್ ಹೇಳುತ್ತಾರೆ.

ಅದರೆ ಪರಿಸ್ಥಿತಿ ಕೈಮೀರಿ ಹೋಗಿದ್ದರೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮೌನವಾಗಿರುವುದು ಆಘಾತ ಮೂಡಿಸುತ್ತದೆ. 47 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಮಂಡಳಿ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಉದ್ಭವಿಸಿರುವ ಮಾನವ ಹಕ್ಕುಗಳ ಉಲ್ಲಂಘನೆ ಚರ್ಚಿಸಲು ತುರ್ತು ಸಭೆ ಕರೆದಿಲ್ಲ, ಯಾವುದೇ ಅಜೆಂಡಾ ಪಾಸು ಮಾಡಿಲ್ಲ ಮತ್ತು ತನಿಖಾ ಆಯೋಗವನ್ನೂ ರಚಿಸಿಲ್ಲ. ಆದರೆ ಬೇರೆ ರಾಷ್ಟ್ರಗಳ ನಡುವೆ ಹೀಗೆ ಯುದ್ಧ ಸಂಭವಿದ್ದರೆ ಮಂಡಳಿಯು ಇವನ್ನೆಲ್ಲ ಮಾಡಿರುತ್ತಿತ್ತು ಎಂದು ನೋಯರ್ ಹೇಳುತ್ತಾರೆ.

ವಿಶೇಷ ಮಾಹಿತಿ: 

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ದ್ವಂದ್ವ ನಿಲುವು, ನಿಷ್ಕ್ರಿಯತೆ ಮತ್ತು ಉದಾಸೀನ ಮನೋಭಾವ ಅಕ್ಷಮ್ಯ ಎಂದು ನೋಯರ್ ಖಾರವಾಗಿ ಹೇಳುತ್ತಾರೆ.
ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ಪೋರ್ಟಲ್ ಸ್ಥಾಪಿಸಿದೆ. ಉಕ್ರೇನ್ನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್ಸೈಟ್ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್ ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.

ವೆಬ್​ಪೋರ್ಟಲ್ ಲಿಂಕ್: http://Ukraine.Karnataka.tech

ಇದನ್ನೂ ಓದಿ:  ಭಾರತದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಉಕ್ರೇನ್ ಆಯ್ಕೆ ಮಾಡುತ್ತಿರುವುದೇಕೆ? ಹೇಗಿದೆ ಅಲ್ಲಿನ ಶಿಕ್ಷಣ ವ್ಯವಸ್ಥೆ?