ಉಕ್ರೇನಿಂದ ಭಾರತಕ್ಕೆ ವಾಪಸ್ಸಾಗುತ್ತಿರುವ ವಿದ್ಯಾರ್ಥಿಗಳ ಜೋಷ್ ನಿಜಕ್ಕೂ ಹೈ ಆಗಿದೆ, ಅದರೆ ಇನ್ನೂ ಅಲ್ಲೇ ಸಿಲುಕಿರುವ ವಿದ್ಯಾರ್ಥಿಗಳ ಪಾಡೇನು?
ಇನ್ನೂ ಸಾವಿರಾರು ಮಕ್ಕಳು ಉಕ್ರೇನಿನ ಬೇರೆ ಬೇರೆ ಭಾಗಗಳಲ್ಲಿದ್ದಾರೆ. ಕೆಲವರು ಪೋಲೆಂಡ್, ರುಮೇನಿಯಾ, ಹಂಗರಿ ಮತ್ತು ಸ್ಲೋವಾಕಿಯಾ ಗಡಿಗಳಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದಾರೆ. ಗಡಿ ತಲುಪಲು ಯಾವುದೇ ಸಾರಿಗೆ ವ್ಯವಸ್ಥೆ ಅವರಿಗಿಲ್ಲ. ಭಾರತದಲ್ಲಿ ಅವರ ಕುಟುಂಬಗಳು ಆತಂಕದಲ್ಲಿವೆ.
ಹೌ ಈಸ್ ದ ಜೋಷ್? ಹೈ ಸರ್! ಹೌ ಈಸ್ ದಿ ಜೋಷ್? ಹೈ ಸರ್!! ವಂದೇ ಮಾತರಂ! ವಂದೇ ಮಾತರಂ!! (Vande Mataram) ಈ ವಿಮಾನದಲ್ಲಿ ಕುಳಿತು ಹೀಗೆ ಹರ್ಷೋದ್ಗಾರ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ (Indian students) ಜೋಷ್ (Josh) ನಿಸ್ಸಂದೇಹವಾಗಿ ವಿಮಾನ ಹಾರುವಾಗ ಪಡೆದುಕೊಳ್ಳುವ ಎತ್ತರಕ್ಕಿಂತ ಬಹಳ ಮೇಲಿದೆ. ಅವರ ಜೋಷ್, ಆನಂದ, ರೋಮಾಂಚನ, ಸಮಾಧಾನದ ನಿಟ್ಟುಸಿರು-ಇವುಗಳಿಗೆ ಪಾರವೇ ಇಲ್ಲ ಮಾರಾಯ್ರೇ. ಒಂದು ವಾರದವರೆಗೆ ಪ್ರತಿದಿನ ಅವರು ಸಾವಿನ ಭೀತಿಯಲ್ಲಿದ್ದರು. ಜೀವಂತವಾಗಿ ಮನೆ ತಲುಪುವ ನಿರೀಕ್ಷೆ ಅವರಲ್ಲಿ ದಿನೇದಿನೆ ಕ್ಷೀಣಿಸಲಾರಂಭಿಸಿತ್ತು. ಉಕ್ರೇನ್ ಗಡಿದಾಟಿ ಬರಲು ಅವರು ಬರಿ ಹೊಟ್ಟೆಯಲ್ಲಿ ಬೆನ್ನ ಮೇಲೆ ಮಣಗಟ್ಟಲೆ ಲಗ್ಗೇಜ್ ಹೊತ್ತು 20-30-40-50 ಕಿಮೀಗಳಷ್ಟು ದೂರ ನಡೆದರು. ಬಹಳಷ್ಟು ಜನಕ್ಕೆ ಕುಡಿಯಲು ನೀರು ಸಹ ಸಿಕ್ಕಿಲ್ಲ. ದಾರಿ ಮಧ್ಯೆ ಎಲ್ಲಿ ಬಾಂಬ್ ಬೀಳುತ್ತೋ, ಶೆಲ್ಲಿಂಗ್ ಆಗುತ್ತೋ ಎಂಬ ಭಯ. ನರಕದ ವ್ಯಾಖ್ಯಾನವನ್ನು ಈ ವಿದ್ಯಾರ್ಥಿಗಳಿಗಿಂತ ಹೆಚ್ಚು ಅರ್ಥಗರ್ಭಿತವಾಗಿ ಬೇರೆ ಯಾರೂ ನೀಡಲಾರರು.
ಭಾರತ ಸರ್ಕಾರ ಕಳಿಸಿರುವ ವಿಮಾನಗಳಲ್ಲಿ ಇವರೆಲ್ಲ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ವಿಮಾನದಲ್ಲಿ ಒಬ್ಬ ಕನ್ನಡಿಗ ವಿದ್ಯಾರ್ಥಿ ಇದ್ದಾರೆ. ಅವರು ರಾಯಚೂರಿನವರಂತೆ. ಓಕೆ, ಇವರು ಸುರಕ್ಷಿತ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಎಲ್ಲ ಭಾರತೀಯರಿಗೂ ಸಂತೋಷ.
ಆದರೆ, ಇನ್ನೂ ಸಾವಿರಾರು ಮಕ್ಕಳು ಉಕ್ರೇನಿನ ಬೇರೆ ಬೇರೆ ಭಾಗಗಳಲ್ಲಿದ್ದಾರೆ. ಕೆಲವರು ಪೋಲೆಂಡ್, ರುಮೇನಿಯಾ, ಹಂಗರಿ ಮತ್ತು ಸ್ಲೋವಾಕಿಯಾ ಗಡಿಗಳಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದಾರೆ. ಗಡಿ ತಲುಪಲು ಯಾವುದೇ ಸಾರಿಗೆ ವ್ಯವಸ್ಥೆ ಅವರಿಗಿಲ್ಲ. ಭಾರತದಲ್ಲಿ ಅವರ ಕುಟುಂಬಗಳು ಆತಂಕದಲ್ಲಿವೆ.