ಹಿಂದೂ-ಮುಸಲ್ಮಾನರ ನಡುವೆ ಶತಮಾನಗಳಿಂದ ಸಾಮರಸ್ಯವಿದೆ, ವೃಥಾ ಕಲಹ ಬೇಡ: ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ
ಪೂಜೆ ಮತ್ತು ಪ್ರಾರ್ಥನೆಗಳು ಆಯಾ ಧರ್ಮದ ಪ್ರಾರ್ಥನಾ ಮಂದಿರಗಳ ಅವರಣಗಳಿಗೆ ಸೀಮಿತವಾಗಿರಬೇಕು. ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆ ಭಾರತೀಯರ ಮೂಲಮಂತ್ರವಾಗಿದೆ ಮತ್ತು ವಸುದೈವ ಕುಟುಂಬಕಂ ಅನ್ನುವ ನಂಬಿಕೆ ನಮ್ಮಲ್ಲಿದೆ. ಹಾಗಾಗಿ ನಾವೆಲ್ಲ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು.
ಹಿಂದೂ ಮತ್ತು ಮುಸಲ್ಮಾನರ ನಡುವೆ ಇರಬೇಕಿರುವ ಐಕ್ಯಮತ ಮತ್ತು ಸಾಮರಸ್ಯದ ಬಗ್ಗೆ ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ (Abhinava Oppatteshwara Swamiji) ಅವರು ಬಹಳ ಅರ್ಥಗರ್ಭಿತವಾಗಿ ಮಾತಾಡಿದ್ದಾರೆ. ಮಂಗಳವಾರ ರಾಯಚೂರಿನಲ್ಲಿ ಮಾಧ್ಯಮದರೊಂದಿಗೆ ಮಾತಾಡಿದ ಶ್ರೀಗಳು ಎರಡೂ ಸಮುದಾಯಗಳು (both communities) ಪರಸ್ಪರರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಹೋದರೆ ಅದು ಸಮಾಜದಲ್ಲಿನ ಸಾಮರಸ್ಯವನ್ನು ಕದಡುತ್ತದೆ ಮತ್ತು ನಮ್ಮ ಅರೋಗ್ಯಗಳ ಮೇಲೂ ವ್ಯತಿರಿಕ್ತವಾದ ಪರಿಣಾಮವನ್ನು (adverse impact) ಬೀರುತ್ತದೆ. ಪೂಜೆ ಮತ್ತು ಪ್ರಾರ್ಥನೆಗಳು ಆಯಾ ಧರ್ಮದ ಪ್ರಾರ್ಥನಾ ಮಂದಿರಗಳ ಅವರಣಗಳಿಗೆ ಸೀಮಿತವಾಗಿರಬೇಕು. ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆ ಭಾರತೀಯರ ಮೂಲಮಂತ್ರವಾಗಿದೆ ಮತ್ತು ವಸುದೈವ ಕುಟುಂಬಕಂ ಅನ್ನುವ ನಂಬಿಕೆ ನಮ್ಮಲ್ಲಿದೆ. ಹಾಗಾಗಿ ನಾವೆಲ್ಲ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು.
ಹಿಜಾಬ್ ಕುರಿತು ಮಾತಾಡಿದ ಶ್ರೀಗಳು ಹೈಕೋರ್ಟ್ ನೀಡಿರುವ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು, ಅವರು ಸುಪ್ರೀಮ್ ಕೋರ್ಟಿಗೆ ಹೋಗಿದ್ದಾರೆ. ಶಾಲೆಗಳಲ್ಲಿ ಮಕ್ಕಳಲ್ಲಿ ಭೇದಭಾವ ಹುಟ್ಟಬಾರದು ಅನ್ನುವ ಕಾರಣಕ್ಕೆ ಸಮವಸ್ತ್ರ ಧರಸುವುದನ್ನು ಕಡ್ಡಾಯ ಮಾಡುತ್ತಾರೆ. ಅದರ ಹಿಂದಿರುವ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಶತಮಾನಗಳಿಂದ ಹಿಂದೂ ಮತ್ತು ಮುಸಲ್ಮಾನರು ಸಾಮರಸ್ಯದಿಂದ ಬದುಕಿದ್ದಾರೆ ಎಂದು ಹೇಳಿದ ಸ್ವಾಮೀಜಿ ಅವರು ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು ಆದರೆ ಪರಸ್ಪರ ಪ್ರೀತಿಯಿಂದ ಬಾಳ್ವೆ ನಡೆಸುವ ಸಂಸ್ಕೃತಿಯನ್ನು ನಮ್ಮ ದೇಶ ಪ್ರತಿಪಾದಿಸುತ್ತಾ ಬಂದಿದೆ ಎಂದರು.
ಮೊಹರಂ ಹಬ್ಬದ ಸಂದರ್ಭದಲ್ಲಿ ಮುಸಲ್ಮಾನರು ತಮ್ಮ ಮಠದಲ್ಲಿ ಪೀರುಗಳನ್ನು ಕೂರಿಸುತ್ತಾರೆ. ಶಿರಹಟ್ಟಿ ಫಕೀರೇಶ್ವರ ಮಠದಲ್ಲಿ ಮೇಲೆ ಮಸೀದಿ ಇದೆ ಕೆಳಗಡೆ ಗುರುಗಳ ಸಮಾಧಿ ಇದೆ. ಸಾವಳಗಿ ಶಿವಲಿಗೇಶ್ವರ ಮಠದಲ್ಲೂ ಗುರುಗಳ ಸಮಾಧಿ ಮೇಲೆ ಮಸೀದಿ ಇದೆ. ತಿಂಥಣಿ ಮೌನೇಶ್ವರ, ಕಲಬುರುಗಿ ಶರಣಬಸವೇಶ್ವರ ಮೊದಲಾದ ಕಡೆಗಳಲ್ಲಿ ಹಿಂದೂ ಮುಸಲ್ಮಾನ ಐಕ್ಯತೆಯ ಜ್ವಲಂತ ಉದಾಹರಣೆಗಳನ್ನು ನಾವು ಕಾಣುತ್ತೇವೆ ಎಂದು ಸ್ವಾಮೀಜಿ ಹೇಳುತ್ತಾರೆ.