ದೇಶದ ಆರ್ಥಿಕ ಸಂಕಷ್ಟ ನಿವಾರಿಸಿದ ಮನಮೋಹನ್ ಸಿಂಗ್, ಅಂದಿನ ಪ್ರಸಂಗ ಬಿಚ್ಚಿಟ್ಟ ದೇವೇಗೌಡ
ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಇಂದು (ಡಿಸೆಂಬರ್ 27) ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು, ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ನೆನೆದು ಭಾವುಕರಾದರು. ಡಾ ಸಿಂಗ್ ಅವರು ದೇಶದ ಆರ್ಥಿಕ ಸುಧಾರಣೆಗೆ ಸಂಬಂಧಿಸಿದ ಕೆಲಸವನ್ನು ದೇವೇಗೌಡ ಕೊಂಡಾಡಿದರು.
ಬೆಂಗಳೂರು, (ಡಿಸೆಂಬರ್ 27): ಬೆಂಗಳೂರಿನ ಶೇಷಾದ್ರಿಪುರಂ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಈ ವೇಳೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ, ಡಾ.ಸಿಂಗ್ ನಿಧನ ವಿಚಾರ ಅತ್ಯಂತ ದುಃಖವನ್ನುಂಟು ಮಾಡಿದೆ. 1991ರಲ್ಲಿ ಲೋಕಸಭೆಯಲ್ಲಿ ಡಾ.ಮನಮೋಹನ್ ಸಿಂಗ್ ನೋಡಿದ್ದೆ. ನಾನು ಕರ್ನಾಟಕದಿಂದ ಮೊದಲ ಬಾರಿ ಲೋಕಸಭೆಗೆ ಆಯ್ಕೆ ಆಗಿದ್ದೆ. ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಡಾ.ಸಿಂಗ್ ಹಣಕಾಸು ಸಚಿವರಾಗಿದ್ರು. ಭಾರತದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಸಾಕಷ್ಟು ಶ್ರಮ ಹಾಕಿದ್ದರು. ಡಾ.ಮನಮೋಹನ್ ಸಿಂಗ್ ವಿಶ್ವಸಂಸ್ಥೆಯಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ನಮ್ಮ ದೇಶದ 130 ಟನ್ ಚಿನ್ನ ಅಡವಿಟ್ಟದ್ದರು. ನಮ್ಮ ದೇಶಕ್ಕೆ ಕೆಟ್ಟ ಪರಿಸ್ಥಿತಿ ಉಂಟಾಗುತ್ತಿತ್ತು. ನರಸಿಂಹರಾವ್ ಸರ್ಕಾರದಲ್ಲಿ ಈ ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ಸೇವೆ ಮಾಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಪಾರುಮಾಡಿ ಗೌರವ ಉಳಿಸಿದ್ದು, ಮನಮೋಹನ್ ಸಿಂಗ್. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳುತ್ತ ಭಾವುಕರಾದರು.