ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಮುಖ್ಯಮಂತ್ರಿ ಸಿದ್ದಮಯ್ಯ ಅವರು ಕರ್ನಾಟಕದಲ್ಲಿ 17 ಬಜೆಟ್‌ಗಳನ್ನು ಮಂಡಿಸಿದ್ದು, ಇದು ರಾಜ್ಯದಲ್ಲಿ ದಾಖಲೆಯಾಗಿದೆ. ಇನ್ನೂ ಎರಡು ಬಜೆಟ್‌ಗಳನ್ನು ಮಂಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ಹೇಳಿದ ಅವರು, ರಾಜ್ಯದ ಸಾಲದ ಬಗ್ಗೆ ಟೀಕಾಕಾರರಿಗೆ ಪ್ರಧಾನಿ ಮೋದಿ ಅವರ ಸಾಲದ ಕುರಿತು ಪ್ರಶ್ನಿಸಿದ್ದಾರೆ.
ಮೈಸೂರು, ಮಾರ್ಚ್ 7: ಬಜೆಟ್ ಮಂಡನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಮುನ್ನೆಲೆಗೆ ಬರಲಿದೆಯಾ? ಸಿಎಂ ಸಿದ್ದರಾಮಯ್ಯ ನೀಡಿರುವ ಶಾಕಿಂಗ್ ಹೇಳಿಕೆ ಹೀಗೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಅನ್ನು ಮಾರ್ಚ್ 7 ರಂದು ಮಂಡಿಸಿದ್ದಾರೆ. ಬಳಿಕ ಮಾರ್ಚ್ 7 ರಂದು ಮೈಸೂರಿಗೆ ಭೇಟಿ ನೀಡಿದ್ದು, ಇದೇ ವೇಳೆ ಪತ್ರಕರ್ತರು ಅವರ ಬಳಿ, ‘ಇನ್ನೆರಡು ಬಜೆಟ್ ಅನ್ನೂ ನೀವೇ ಮಂಡಿಸಲಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಸಿದ್ದರಾಮಯ್ಯ, ಅದು ಹೈಕಮಾಂಡ್‌ನ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡಿದರೂ ಅದಕ್ಕೆ ತಾನು ಬದ್ಧನಾಗಿರುವುದಾಗಿ ಸಿದ್ರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಬಿಟ್ಟುಬಿಡು ಎಂದರೆ ಬಿಡುತ್ತೀನಿ ಎಂದೂ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವ ಮಾತುಗಳನ್ನಾಡಿದರಾ ಎಂಬ ಪ್ರಶ್ನೆ ಮೂಡಿದೆ.

