Congress
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ಎಂದು ಕರೆಯಲಾಗುತ್ತದೆ. ಇದು ಭಾರತದ ಅತ್ಯಂತ ಪುರಾತನ ಮತ್ತು ಪ್ರಮುಖ ರಾಜಕೀಯ ಸಂಸ್ಥೆಗಳಲ್ಲಿ ಒಂದಾಗಿದೆ. 1885 ರಲ್ಲಿ ಸ್ಥಾಪಿತವಾದ ಇದು ಬ್ರಿಟಿಷರ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರಂತಹ ನಾಯಕರು ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದವರು.
1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಯಿತು ಮತ್ತು ಸ್ವಾತಂತ್ರ್ಯದ ನಂತರದ ದಶಕಗಳ ಕಾಲ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿತು. ಆದರೆ ಇತ್ತೀಚೆಗೆ ಅಧಿಕಾರದಿಂದ ದೂರ ಉಳಿದಿದೆ. ಪಕ್ಷದ ಸಿದ್ಧಾಂತವು ಕಾಲಕಾಲಕ್ಕೆ ವಿಕಸನಗೊಳ್ಳುತ್ತಾ ಬಂದಿದೆ. ಸಮಾಜವಾದ, ಜಾತ್ಯತೀತ ಆಡಳಿತದ ಅಂಶಗಳನ್ನು ಒಳಗೊಂಡಿದೆ. ಇದು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹರಾವ್, ಮನಮೋಹನ್ ಸಿಂಗ್ ಸೇರಿದಂತೆ ಹಲವಾರು ಪ್ರಧಾನ ಮಂತ್ರಿಗಳನ್ನು ನಿರ್ಮಿಸಿದೆ.
ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮತ್ತು ನಾನಾ ರಾಜ್ಯಗಳ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳನ್ನು ಪ್ರತಿಪಾದಿಸುತ್ತದೆ. ಕಾಂಗ್ರೆಸ್ ಪಕ್ಷವು ದೇಶದ ಅನೇಕ ರಾಜ್ಯಗಳಲ್ಲಿಯೂ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಾ ಬಂದಿತ್ತು. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಅದು ಕೆಲವು ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಇತರ ಪ್ರಾದೇಶಿಕ ಪಕ್ಷಗಳಿಂದ ಸವಾಲುಗಳನ್ನು ಎದುರಿಸುತ್ತಿದೆ.