ಏಪ್ರಿಲ್ 13ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗಿಸಲು ಗಡುವು ನೀಡಿದ ಹಿಂದೂ ಸಂಘಟನೆಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 05, 2022 | 10:19 PM

ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗದಂತಿರಲು ಮುಸಲ್ಮಾನರಿಗೆ ತಿಳಿಸಲಾಗುವುದು ಮತ್ತು ಧ್ವನಿವರ್ಧಕಗಳನ್ನು ತೆಗೆಸಲಾಗುವುದು ಅಂತ ಪೊಲೀಸರು ಹಿಂದೂ ಸಂಘಟನೆಗಳಿಗೆ ತಿಳಿಸಿದ್ದಾರೆ.

ನೀವು ಧ್ವನಿವರ್ಧಕದ ಮೂಲಕ ಅಜಾನ್ (Azaan) ಕೂಗುವುದಾದರೆ ನಾವು ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಮೂಲಕ ರಾಮನಾಮ ಜಪ ಮತ್ತು ಹನುಮಾನ್ ಚಾಲಿಸಾ (Hanuman Chalisa) ನುಡಿಸುತ್ತೇವೆ ಎಂದು ರಾಜ್ಯದ ಕೆಲಭಾಗಗಳಲ್ಲಿ ಹಿಂದೂ ಸಂಘಟನೆಗಳು ಹಟಕ್ಕೆ ಬಿದ್ದಿವೆ. ಸುಪ್ರೀಮ್ ಕೋರ್ಟ್ (Supreme Court) ಆದೇಶದ ಮೇರೆಗೆ ನಾವು ದೇವಸ್ಥಾನಗಳಲ್ಲಿ ಸುಪ್ರಭಾತ ಹಾಕುವುದನ್ನು ನಿಲ್ಲಿಸಿದ್ದೇವೆ, ಆದರೆ ಮುಸಲ್ಮಾನರು ಇನ್ನೂ ನಿಲ್ಲಿಸಿಲ್ಲ, ಹಾಗಾಗೇ ನಾವು ದೇವಸ್ಥಾನಗಳಲ್ಲಿ ಪುನಃ ಹನುಮಾನ್ ಚಾಲೀಸಾ ನುಡಿಸುತ್ತೇವೆ ಎಂದು ಹಿಂದೂ ಸಂಘಟನೆಗಳು ಹೇಳುತ್ತಿವೆ. ಈ ಸಂಘರ್ಷ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಮಾರಾಯ್ರೇ. ಸರ್ಕಾರ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಯಾಕೆ ನಿರ್ಲಿಪ್ತರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ.

ಅಸಲಿಗೆ, ಮಂಗಳವಾರದಿಂದಲೇ ಹಿಂದೂ ದೇವಸ್ಥಾನಗಳಲ್ಲಿ ಮತ್ತು ಹಿಂದೂಗಳ ಮನೆಗಳ ಮೇಲೆ ಧ್ವನಿವರ್ಧಕಗಳನ್ನು ಆಳವಡಿಸಿ ರಾಮನಮ ಜಪ, ಭಜನೆ ಮತ್ತು ಹನುಮಾನ್ ಚಾಲೀಸಾ ನುಡಿಸುವಂತೆ ಕೆಲ ಹಿಂದೂ ಸಂಘಟನೆಗಳು ಕರೆ ನೀಡಿದ್ದವು. ಯಲಹಂಕ ಉಪನಗರದ ವೀರಾಂಜನೇಯ ದೇವಸ್ಥಾನದಲ್ಲಿ ಎಲ್ಲ ತಯಾರಿ ಸಹ ನಡೆದಿದ್ದವು.

ಅದರೆ ಪೊಲೀಸರು ಮಧ್ಯೆ ಪ್ರವೇಶಿಸಿ ಹಾಗೆ ಮಾಡದಂತೆ ಹೇಳಿದ್ದರಿಂದ ಅದನ್ನು ಕೈ ಬಿಡಬೇಕಾಯಿತು. ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗದಂತಿರಲು ಮುಸಲ್ಮಾನರಿಗೆ ತಿಳಿಸಲಾಗುವುದು ಮತ್ತು ಧ್ವನಿವರ್ಧಕಗಳನ್ನು ತೆಗೆಸಲಾಗುವುದು ಅಂತ ಪೊಲೀಸರು ಹಿಂದೂ ಸಂಘಟನೆಗಳಿಗೆ ತಿಳಿಸಿದ್ದಾರೆ.

ಆದರೆ ಹಿಂದೂ ಸಂಘಟನೆಗಳು ಸುಮ್ಮನೆ ಹಿಂತೆಗೆದಿಲ್ಲ, ಅವರು ಮಸೀದಿಗಳಿಂದ ಲೌಡ್ ಸ್ಪೀಕರ್ ಗಳನ್ನು ತೆಗೆಸಲು ಏಪ್ರಿಲ್ 13 ರವರೆಗೆ ಗಡುವು ನೀಡಿದ್ದಾರೆ. ಒಂದು ಪಕ್ಷ ಪೊಲೀಸರು ಅಷ್ಟರೊಳಗೆ ಮಸೀದಿ ಮೇಲಿಂದ ಧ್ವನಿವರ್ಧಕಗಳನ್ನು ತೆಗೆಸದಿದ್ದರೆ ದೇವಸ್ಥಾನಗಳಲ್ಲಿ ಮತ್ತು ಹಿಂದೂಗಳ ಮನೆಗಳ ಮೇಲಿಂದ ಸುಪ್ರಭಾತ ಧ್ವನಿಮುದ್ರಿಕೆಗಳನ್ನು ಧ್ವನಿವರ್ಧಕಗಳ ಮೂಲಕ ಕೇಳಿಸಲಾಗುವುದು ಎಂದು ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರರೊಂದಿಗೆ ಮಾತಾಡಿದ ಹಿಂದೂ ಸಂಘಟನೆಯೊಂದರ ಸದಸ್ಯರು ತಿಳಿಸಿದರು.

ಇದನ್ನೂ ಓದಿ:  ಅಜಾನ್ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ, ರೇಣುಕಾಚಾರ್ಯ ಒಬ್ಬ ಮತಾಂಧ: ಸಿದ್ದರಾಮಯ್ಯ