ಟೊಕಿಯೋ ಒಲಂಪಿಕ್ಸ್ 2020: ಒಟ್ಟು 202 ಕೆಜಿ ಭಾರ ಎತ್ತಿದ ಮೀರಾಬಾಯಿ ಚಾನು ಭಾರತೀಯರೆಲ್ಲ ಗರ್ವದಿಂದ ತಲೆ ಎತ್ತುವಂತೆ ಮಾಡಿದ್ದಾರೆ!
ರಿಯೋ 2016 ಒಲಂಪಿಕ್ಸ್ನಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದ ಮೀರಾಬಾಯಿ, ಅಗ ನೀಡಿದ್ದ ನಿರಾಶಾದಾಯಕ ಪ್ರದರ್ಶನವನ್ನು ಟೊಕಿಯೋನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡಿದ್ದಾರೆ.
ಟೊಕಿಯೋ ಒಲಂಪಿಕ್ಸ್ನಲ್ಲಿ ಭಾರತದ ಪದಕ ಬೇಟೆ ಕ್ರೀಡಾಕೂಟದ ಮೊದಲ ದಿನವೇ ಆರಂಭವಾಗಿದೆ. 26-ವರ್ಷ ವಯಸ್ಸಿನ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವೇಟ್-ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 202 ಕೆಜಿ ಭಾರ ಎತ್ತಿ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ) 140 ಕೋಟಿ ಭಾರತೀಯರನ್ನು ಸಂತೋಷ ಸಾಗರದಲ್ಲಿ ಮುಳುಗಿಸಿದ್ದಾರೆ. ಅವರ ಸಾಧನೆಯನ್ನು ಮೆಚ್ಚಿ ಎಲ್ಲರಗಿಂತ ಮೊದಲು ಅಭಿನಂದನೆ ಸಲ್ಲಿಸಿದವರು ಪ್ರಧಾನ ಮಂತ್ರಿ ನರೆಂದ್ರ ಮೋದಿ. ಮಹಿಳಾ ವೇಟ್-ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಬಾರತಕ್ಕೆ ಮೊಟ್ಟ ಮೊದಲ ಬೆಳ್ಳಿ ಪದಕ ಗೆದ್ದು ಕೊಟ್ಟ ಕೀರ್ತಿಗೆ ಮೀರಾಬಾಯಿ ಪಾತ್ರರಾಗಿದ್ದಾರೆ. ಸಿಡ್ನಿ ಒಲಂಪಿಕ್ಸ್ 2000 ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು.
ರಿಯೋ 2016 ಒಲಂಪಿಕ್ಸ್ನಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದ ಮೀರಾಬಾಯಿ, ಅಗ ನೀಡಿದ್ದ ನಿರಾಶಾದಾಯಕ ಪ್ರದರ್ಶನವನ್ನು ಟೊಕಿಯೋನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡಿದ್ದಾರೆ. 2017 ರಲ್ಲಿ ಅಮೆರಿಕದ ಅನಹೀಮ್ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅವರು 48ಕೆಜಿ ವಿಭಾಗದಲ್ಲಿ 194 ಕೆಜಿ ಭಾರ ಎತ್ತಿ ಚಾಂಪಿಯನ್ ಎನಿಸಿಕೊಂಡಿದ್ದರು. 2018 ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಭಾರತಕ್ಕೆ ಸ್ವರ್ಣ ಪದಕ ಗೆದ್ದಿದ್ದರು.
ಮಣಿಪುರದ ರಾಜಧಾನಿ ಇಂಫಾಲನಿಂದ ಸುಮಾರು 200 ಕಿಮೀ ದೂರದಲ್ಲಿರುವ ಒಂದು ಚಿಕ್ಕ ಗ್ರಾಮದಲ್ಲಿ ಹುಟ್ಟಿ ಮನೆಯಲ್ಲಿ ಉರುವಲು ಆಗಿ ಬಳಸಲು ಗುಡ್ಡಗಾಡು ಪ್ರದೇಶಗಳಿಂದ ಸೌದೆ ಹೊತ್ತು ತರುತ್ತಿದ್ದ ಮೀರಾಬಾಯಿ ಪ್ರಾಯಶ: ಆಗಲೇ ವೇಟ್ಲಿಫ್ಟರ್ ಆಗಬೇಕೆಂಬ ಕನಸು ಕಂಡಿದ್ದರು. ಅಣ್ಣನ ಪ್ರೋತ್ಸಾಹದಿಂದ ಅದನ್ನು ಸಾಕಾರ ಮಾಡಿಕೊಂಡು ಈಗ ಇಡೀ ಭಾರತ ಗರ್ವ ಪಡುವಂತೆ ಮಾಡಿದ್ದಾರೆ. ಅಂದ ಹಾಗೆ, 2004 ಅಥೆನ್ಸ್ ಒಲಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರಖ್ಯಾತ ವೇಟ್-ಲಿಫ್ಟರ್ ಕುಂಜಾರಾಣಿ ದೇವಿ ಅವರು ಮೀರಾಬಾಯಿಯ ರೋಲ್ ಮಾಡೆಲ್.