ಟೋಕಿಯೋ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತ ಚೊಚ್ಚಲ ಪದಕ ಗೆದ್ದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಮೀರಾಬಾಯಿ ಚಾನು (Mirabai Chanu). ಶನಿವಾರ ನಡೆದ ಟೋಕಿಯೋ ಒಲಂಪಿಕ್ಸ್ನ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ (Silver Medal) ಗೆದ್ದು ದಾಖಲೆ ಬರೆದರು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 21 ವರ್ಷಗಳ ಬಳಿಕ ಭಾರತ ವೇಟ್ಲಿಫ್ಟಿಂಗ್ (Weightlifting) ವಿಭಾಗದಲ್ಲಿ ಪದಕವೊಂದನ್ನು ಗೆದ್ದ ವಿಶೇಷ ಸಾಧನೆ ಮಾಡಿತು.
ಆದರೆ, ಮೀರಾಬಾಯಿ ಈ ಮಟ್ಟದಲ್ಲಿ ಸಾಧನೆ ಮಾಡಲು ಅವರು ನಡೆದ ಬಂದ ಹಾದಿ ಸುಗಮವಾಗಿರಲಿಲ್ಲ. 12ನೇ ವಯಸ್ಸಿನಲ್ಲಿ ಅಣ್ಣನಿಗಿಂತ ಹೆಚ್ಚು ಕಟ್ಟಿಗೆ ಹೊತ್ತು ಸಾಗುತ್ತ ತನ್ನ ಶಕ್ತಿ ಪ್ರದರ್ಶಿಸಿದ ಮೀರಾಬಾಯಿ ಚಾನು ಇಂದು ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿಗೆ ಮುತ್ತಿಕ್ಕಿರುವುದು ಅವರ ಕ್ರೀಡಾ ಬದುಕಿನ ಇನ್ನೊಂದು ಮುಖ.
ಒಂದು ಕಾಲದಲ್ಲಿ ಉರುವಲಿಗಾಗಿ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಿದ್ದ ಮೀರಾಬಾಯಿ ಚಾನು ಮುಂದೊಂದು ದಿನ ಇದು ವೇಟ್ಲಿಫ್ಟಿಂಗ್ಗೆ ನೆರವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮಣಿಪುರದ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದ ಮೀರಾಬಾಯಿ ಅವರ ಮನೆಯಲ್ಲಿ ಕ್ರೀಡಾಪಟುಗಳಿದ್ದರು. ತಂದೆ, ಅಣ್ಣಂದಿರು ಫುಟ್ಬಾಲ್, ಸೆಪೆಕ್ ಟಕ್ರಾಗಳಲ್ಲಿ ಆಡುತ್ತಿದ್ದರು.
ಇಂಪಾಲದಿಂದ 20 ಕಿ.ಮೀ. ದೂರದಲ್ಲಿರುವ ನಾಂಗ್‌ಪಾಕ್ ಕಾಕ್ಚಿಂಗ್ ಗ್ರಾಮದ ಬಡ ಕುಟುಂಬಕ್ಕೆ ಸೇರಿದ ಮೀರಾಬಾಯಿ ಚಾನು, ಆರು ಮಕ್ಕಳಲ್ಲಿ ಅತ್ಯಂತ ಕಿರಿಯರು. ತನಗಿಂತ ನಾಲ್ಕು ವರ್ಷ ದೊಡ್ಡವನಾಗಿರುವ ಅಣ್ಣ ಸೈಕೊಮ್ ಸನಾತೊಂಬಾ ಮೈಟೈ ಅವರೊಂದಿಗೆ ಹತ್ತಿರದ ಬೆಟ್ಟಕ್ಕೆ ಹೋಗಿ ಕಟ್ಟಿಗೆಯನ್ನು ಸಂಗ್ರಹಿಸುತ್ತಿದ್ದರಂತೆ. ಒಂದು ದಿನ ಮೀರಾ ಅಣ್ಣ ತಾಯಿಯ ಬಳಿ ಬಂದು ನನಗೆ ಕಟ್ಟಿಗೆ ಮೂಟೆಯನ್ನು ಎತ್ತಲಾಗಲಿಲ್ಲ. ಆದರೆ ಮೀರಾ ಸುಲಭವಾಗಿ ಎತ್ತಿ ಮನೆಗೆ ತಂದಳು ಎಂದು ಹೇಳಿದರು.
ಇದನ್ನ ಗಮನಿಸಿದ ಮೀರಾಬಾಯಿ ಅವರ ತಾಯಿ ಲೈಮಾ ಅವರಿಗೆ ತಮ್ಮ ಮಗಳನ್ನು ಕ್ರೀಡಾಪಟುವನ್ನಾಗಿ ರೂಪಿಸಬೇಕು ಎಂಬ ಹಂಬಲ ಶುರುವಾಯಿತು. ಬಾಲ್ಯದಲ್ಲಿ ಮೀರಾಬಾಯಿ ಆರ್ಚರಿ ಕಲಿಯಲು ಆಸಕ್ತಿ ತೋರಿಸಿದ್ದರು. ಆಗ ಅವರಿಗೆ ಪರಿಣತ ಕೋಚ್ ಸಿಗಲಿಲ್ಲ. ಹೀಗಾಗಿ ಸುಮ್ಮಮೆ ಕೂತಿದ್ದಾಗ ಮಣಿಪುರದ ಹಿರಿಯ ವೇಟ್ಲಿಫ್ಟಿರ್ ಕುಂಜುರಾಣಿದೇವಿ ಮತ್ತು ಅನಿತಾ ದೇವಿ ಅವರ ಸಾಧನೆಯನ್ನು ಒಂದು ಸಾಕ್ಷ್ಯಚಿತ್ರದಲ್ಲಿ ವೀಕ್ಷಿಸಿದರು. ಇದುವೆ ಇವರ ಜೀವನದ ಟರ್ನಿಂಗ್ ಪಾಯಿಂಟ್.
2007ರಲ್ಲಿ ಅವರು ತಮ್ಮ ಮನೆಯಿಂದ 60 ಕಿ.ಮೀ ದೂರದಲ್ಲಿದ್ದ ಕುಮಾನ್ ಲಂಪಕ್ ಕ್ರೀಡಾ ಸಂಕೀರ್ಣದಲ್ಲಿ ಅಭ್ಯಾಸಕ್ಕೆ ಸೇರಿದರು. ಪ್ರತಿದಿನವೂ ತರಬೇತಿಗೆ ಹೋಗಿ ಬರುವ ಗಡಿಬಿಡಿಯಲ್ಲಿ ಸರಿಯಾದ ಊಟ ಕೂಡ ಸಿಗುತ್ತಿರಲಿಲ್ಲ. ಈವೇಳೆ ಸಾಕಷ್ಟು ಕಷ್ಟ ಅನುಭವಿಸಿದ ಮೀರಾ ಒಂದು ದಿನ ಅಮ್ಮನ ಬಳಿ ಬಂದು ನಾನು ವೇಟ್ಲಿಫ್ಟಿಂಗ್ ಬಿಡುತ್ತೇನೆ ಎಂದು ಹೇಳಿದ್ದರಂತೆ. ಆಗ ಅವರ ತಾಯಿ ಲೈಮಾ ನೀನು ಯಾವುದೇ ಯೋಚನೆ ಮಾಡಬೇಡ. ನಿನ್ನ ಊಟ, ವಿದ್ಯಾಭ್ಯಾಸ ಮತ್ತು ಪ್ರಯಾಣದ ವ್ಯವಸ್ಥೆಗಳನ್ನು ಮಾಡುತ್ತೇವೆ. ಶ್ರದ್ಧೆಯಿಂದ ಸಾಧನೆ ಮಾಡು ಎಂದು ಭರವಸೆ ನೀಡಿದರು.
ಮೀರಾ ಅವರು ತಮ್ಮ ಯಶಸ್ಸಿನ ಯಾತ್ರೆ ಆರಂಭಿಸಲು ಸತತ ಐದು ವರ್ಷಗಳ ತಾಲೀಮಿ ನಡೆಸಿದರು. ಜೂನಿಯರ್ ವಿಭಾಗದಲ್ಲಿ ಮಿಂಚಿದರು. 2011ರಲ್ಲಿ ಅಂತರರಾಷ್ಟ್ರೀಯ ಯೂತ್ ಚಾಂಪಿಯನ್ ಷಿಪ್ ಮತ್ತು ದಕ್ಷಿಣ ಏಷ್ಯಾ ಜೂನಿಯರ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದು ಬೀಗಿದರು. 2013ರಲ್ಲಿ ಗುವಾಹಟಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ‘ಬೆಸ್ಟ್ ಲಿಫ್ಟರ್’ ಗೌರವಕ್ಕೆ ಕೂಡ ಪಾತ್ರರಾದರು. ಇದು ಅವರ ಕ್ರೀಡಾಜೀವನಕ್ಕೆ ಲಭಿಸಿದ ಮಹತ್ವದ ತಿರುವು. 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 2014ರ ವಿಶ್ವ ಚಾಂಪಿಯನ್ಶಿಪ್ನಲ್ಲಿ 11ನೇ ಹಾಗೂ 2015ರಲ್ಲಿ ಒಂಬತ್ತನೇ ಸ್ಥಾನ ಪಡೆದರು.
ಮೀರಾಬಾಯಿ ರಿಯೊ ಡಿ ಜನೈರೊ 2016 ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು. ಆದರೆ ಇಲ್ಲಿ ಅವರಿಗೆ ಪದಕ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದ ಫಲದಿಂದ 21ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದಾಖಲೆಯೊಂದಿಗೆ ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟರು.
ಸದ್ಯ ಸಾಗುತ್ತಿರುವ ಟೋಕಿಯೋ ಒಲಿಂಪಿಕ್ಸ್ 2020 ರ 49 ಕೆಜಿ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆಲ್ಲುವ ವಿಶೇಷ ಸಾಧನೆ ಮಾಡಿದ್ದಾರೆ. ಒಲಿಂಪಿಕ್ನಲ್ಲಿ ಮಹಿಳಾ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಪದಕ ಗೆದ್ದ ಎರಡನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮೀರಾಬಾಯಿ ಅವರ ಈ ಸಾಧನೆಗೆ ದೇಶಾದ್ಯಂತ ಸಾಕಷ್ಟು ಪ್ರಶಂಸೆಗಳು ಹರಿದು ಬರುತ್ತಿದೆ. ಭಾರತದ ಕ್ರೀಡಾಪ್ರೇಮಿಗಳು ಮೀರಾಭಾಯಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ನರೇಂದ್ರ ಮೋದಿ ಕೂಡ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Tokyo Olympics 2020: ಹಾಕಿಯಲ್ಲಿ ಭಾರತ ಶುಭಾರಂಭ: ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ
Tokyo Olympics 2020: ಶೂಟಿಂಗ್ನಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಭಾರತದ ಸೌರಭ್ ಚೌಧರಿ
(Mirabai Chanu s journey from lifting firewood to Olympic Medal here is the details in Kannada)
Published On - 2:11 pm, Sat, 24 July 21