Tokyo Olympics 2020: ಹಾಕಿಯಲ್ಲಿ ಭಾರತ ಶುಭಾರಂಭ: ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ
ಕೊನೆಯ ಮೂರು ನಿಮಿಷಗಳಿದ್ದಾಗ ನ್ಯೂಜಿಲೆಂಡ್ಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಭಾರತ ತಂಡ 3-2 ಗೋಲುಗಳ ಅಂತರದಲ್ಲಿ ರೋಚಕ ಜಯ ಸಾಧಿಸಿತು.
ಟೋಕಿಯೋ ಒಲಿಂಪಿಕ್ಸ್ 2020ರ (Tokyo Olympics 2020) ಮೊದಲ ಹಾಕಿ ಪಂದ್ಯದಲ್ಲೇ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಶುಭಾರಂಭ ಮಾಡಿದೆ. ನ್ಯೂಜಿಲೆಂಡ್ (India vs New Zealand) ವಿರುದ್ಧ ಶನಿವಾರ ಮುಂಜಾನೆ ನಡೆದ ಹಾಕಿ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ಕಂಡಿದೆ. ಭಾರತ ಗಳಿಸಿದ ಮೂರು ಗೋಲುಗಳು ಕೂಡ ಪೆನಾಲ್ಟಿ ಕಾರ್ನರ್‌ಗಳಿಂದ ಬಂದಿರುವುದು ವಿಶೇಷ. ಹರ್ಮನ್‌ಪ್ರೀತ್ ಎರಡು ಬಾರಿ ಗೋಲು ಗಳಿಸಲು ಸಫಲರಾದರೆ ಮತ್ತೊಂದು ಗೋಲನ್ನು ರೂಪಿಂದರ್ ಮೂಲಕ ಭಾರತ ತಂಡ ಗಳಿಸಿತು.
ಎ ಗುಂಪಿನಲ್ಲಿ ಕಣಕ್ಕಿಳಿದ ಭಾರತ ಹಾಕಿ ತಂಡ ನ್ಯೂಜಿಲೆಂಡ್ ವಿರುದ್ಧ ತನ್ನ ಗೆಲುವಿನ ದಾಖಲೆಯನ್ನು ಮುಂದುವರೆಸಿತು. ಪಂದ್ಯದ ಆರಂಭದಲ್ಲೇ 6ನೇ ನಿಮಿಷ ಇರುವಾಗ ನ್ಯೂಜಿಲೆಂಡ್‌ನ ಕೇನ್ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಕಿವೀಸ್ ಮೊದಲ ಕ್ವಾರ್ಟರ್‌ನ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು.
ಈ ಸಂದರ್ಭ ಎಚ್ಚೆತ್ತುಕೊಂಡು ಭಾರತ 10ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಗೋಲು ಬಾರಿಸುವ ಭಾರತದ ಗೋಲುಗಳ ಖಾತೆ ತೆರೆದರು. ಮೊದಲ ಕ್ವಾರ್ಟರ್ ಮುಕ್ತಾಯದ ವೇಳೆಗೆ ಉಭಯ ತಂಡಗಳು ತಲಾ 1-1 ಗೋಲುಗಳ ಸಮಬಲ ಸಾಧಿಸಿದವು. ದ್ವಿತಿಯಾರ್ಧದ 26ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಅನ್ನು ಸರಿಯಾಗಿ ಉಪಯೋಗಿಸಿ 2-1 ಗೋಲುಗಳ ಮುನ್ನಡೆ ಒದಗಿಸಿಕೊಟ್ಟರು.
ತೃತಿಯಾರ್ಧದ ಆರಂಭದಲ್ಲೇ ಡ್ರ್ಯಾಗ್ ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತಕ್ಕೆ ಭರ್ಜರಿ ಮುನ್ನಡೆ ತಂದಿಟ್ಟರು. ಇದರೊಂದಿಗೆ ಭಾರತ ಕಿವೀಸ್ ಎದುರು ಬಿಗಿಹಿಡಿತ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿತು. ತೃತಿಯಾರ್ಧದ ಕೊನೆಯ ಕ್ಷಣದಲ್ಲಿ ನ್ಯೂಜಿಲೆಂಡ್‌ನ ಸ್ಟೀವನ್ ಜೆನ್ನೀಸ್ ಗೋಲು ಬಾರಿಸಿ 3-2ಕ್ಕೆ ತಂದಿಟ್ಟರು.
ಈ ಸಂದರ್ಭ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಅಂತಿಮ ಕ್ವಾರ್ಟರ್‌ನಲ್ಲಿ ಉಭಯ ತಂಡದ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ ಯಾವ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಕೊನೆಯ ಮೂರು ನಿಮಿಷಗಳಿದ್ದಾಗ ನ್ಯೂಜಿಲೆಂಡ್ಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಭಾರತ ತಂಡ 3-2 ಗೋಲುಗಳ ಅಂತರದಲ್ಲಿ ರೋಚಕ ಜಯ ಸಾಧಿಸಿತು.
ಈ ಮೂಲಕ ಭಾರತ ಹಾಕಿ ತಂಡ ಕಿವೀಸ್ ತಂಡವನ್ನು 12 ಬಾರಿ ಎದುರಿಸಿ ಒಂಬತ್ತು ಬಾರಿ ಜಯಿಸಿದ ಸಾಧನೆ ಮಾಡಿದೆ.
IND vs SL: ಲಂಕಾ ನಾಯಕನಿಗೂ ಕ್ರಿಕೆಟ್ ಟಿಪ್ಸ್ ನೀಡಿವ ದ್ರಾವಿಡ್: ಕನ್ನಡಿಗನ ನಡೆಗೆ ನೆಟ್ಟಿಗರ ಸಲಾಂ
(Tokyo Olympics 2020 India beat New Zealand 3-2 in Hockey opener)