ನಾಳೆಯ ಹವಾಮಾನ: ಕರ್ನಾಟಕದಲ್ಲಿ ಭಾರಿ ಮಳೆ ಎಚ್ಚರಿಕೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಕರ್ನಾಟಕದಲ್ಲಿ ಮಳೆಯಾಗುತ್ತಿದ್ದು, ಆಗಸ್ಟ್ 24 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾವೇರಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು, ಆಗಸ್ಟ್ 18: ಕರ್ನಾಟಕದಲ್ಲಿ ಮತ್ತೆ ಮಳೆರಾಯನ (Rain) ಆರ್ಭಟ ಮುಂದುವರೆದಿದೆ. ಆಗಸ್ಟ್ 24ರವರೆಗೆ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಮಂಗಳವಾರ (ಆ.19) ದಂದು ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಧಾರವಾಡ, ಚಿಕ್ಕಮಗಳೂರು, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಈ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟ, ಯಾದಗಿರಿ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಟ್ವಿಟರ್ ಪೋಸ್ಟ್
ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಆಗಸ್ಟ್ 20 ರವರೆಗೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರದಿಂದ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆ, ಹಾಗೂ ಅಲ್ಲಲ್ಲಿ ಅತಿ ಭಾರಿ ಮಳೆ, ಇಂದು ಅಲ್ಲಲ್ಲಿ ಅತ್ಯಅಧಿಕ ಮಳೆ. pic.twitter.com/wsozXhqPnl
— Karnataka State Natural Disaster Monitoring Centre (@KarnatakaSNDMC) August 18, 2025
ಶಾಲೆಗಳಿಗೆ ರಜೆ
ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಸಂಬಂಧ ಜಿಲ್ಲೆಯ ಅಂಗನವಾಡಿ, ಶಾಲೆಗಳು, ಕಾಲೇಜುಗಳಿಗೆ ನಾಳೆಯೂ (ಆ.19) ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು
ಇನ್ನು, ಚಿಕ್ಕಮಗಳೂರು ಜಿಲ್ಲೆಯಲ್ಲೂ ಅಂಗನವಾಡಿ ಮತ್ತು ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಮಲೆನಾಡು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್ಆರ್ ಪುರ, ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆಲ್ದೂರು, ಕಸಬಾ, ಅಂಬಳೆ, ವಸ್ತಾರೆ, ಆವತಿ ಹೋಬಳಿ, ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ ಹೋಬಳಿಯಲ್ಲಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ
ಬೆಳಗಾವಿ ಜಿಲ್ಲೆಯ ಏಳು ತಾಲೂಕಿನಲ್ಲಿನ ಅಂಗನವಾಡಿ ಕೇಂದ್ರ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ, ಬೈಲಹೊಂಗಲ, ಕಿತ್ತೂರು, ಖಾನಾಪುರ, ರಾಮದುರ್ಗ, ಸವದತ್ತಿ, ಚಿಕ್ಕೋಡಿ ತಾಲೂಕಿನಲ್ಲಿನ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಧಾರವಾಡ
ಧಾರವಾಡ ಜಿಲ್ಲೆಯಲ್ಲಿನ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ. ಈ ರಜೆಯನ್ನು ಮುಂದಿನ ಸಾರ್ವತ್ರಿಕ ರಜಾ ದಿನಗಳಲ್ಲಿ ಹೊಂದಾಣಿಕೆ ಮಾಡಲು ಸೂಚನೆ ನೀಡಿದ್ದಾರೆ.
ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆಯ 11 ತಾಲೂಕಿನ ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಹಾಸನ
ಹಾಸನ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಬೇಲೂರು, ಆಲೂರು ತಾಲೂಕಿನ ಅಂಗನವಾಡಿ ಮತ್ತು ಶಾಲೆಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ರಜೆ ಘೋಷಿಸಿದ್ದಾರೆ.
ಬೀದರ್
ಬೀದರ್ ಜಿಲ್ಲೆಯ ಔರಾದ್ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿನ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಔರಾದ್ ತಹಶಿಲ್ದಾರ್ ಘೋಷಿಸಿಸಿದ್ದಾರೆ.
ಗಾಳಿಯ ವೇಗ
ಆಗಸ್ಟ್ 19ರಂದು ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿಮೀ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Mon, 18 August 25




