ಗೆಳೆಯರೇ, ಆದಾಯ ತೆರಿಗೆ (Income Tax) ಎಂಬ ಪದವನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಈಗಾಗಲೇ ಉದ್ಯೋಗದಲ್ಲಿ ತೊಡಗಿಸಿಕೊಂಡವರು ಆಗಾಗ ಈ ಪದವನ್ನು ಹೇಳುತ್ತಲೇ ಇರುತ್ತಾರೆ, ಅದು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತದೆ. ಇನ್ನೇನು ಕೆಲಸಕ್ಕೆ ಸೇರುತ್ತೇವೆ ಅಥವಾ ಈಗಷ್ಟೇ ಕೆಲಸಕ್ಕೆ ಸೇರಿದ್ದೇವೆ. ಸ್ವಂತ ಉದ್ಯೋಗ ಆರಂಭಿಸಿದ್ದೇವೆ ಎಂದಾದರೆ ನೀವು ಆದಷ್ಟು ಬೇಗ ತಿಳಿದುಕೊಳ್ಳಲೇಬೇಕಾದ ವಿಷಯ ಆದಾಯ ತೆರಿಗೆಗೆ ಸಂಬಂಧಿಸಿದ್ದು.
ನಾವು ಗಳಿಸುವ ಹಣದ ಕೊಂಚ ಭಾಗವನ್ನು ಸಮಾಜಕ್ಕೆ ಮರು ಸಂದಾಯ ಮಾಡುತ್ತೇವೆ. ಇಲ್ಲಿ ಸಮಾಜ ಎಂದಿರುವಲ್ಲಿ ಸರ್ಕಾರ ಎಂದು ಒಮ್ಮೆ ಓದಿಕೊಳ್ಳಿ. ಸರ್ಕಾರ ಇಂಥ ತೆರಿಗೆಗಳಿಂದ ಸಂಗ್ರಹಿಸಿದ ಆದಾಯವನ್ನೇ ವಿವಿಧ ಯೋಜನೆಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತದೆ. ಹೀಗೆ, ಒಂದಲ್ಲಾ ಒಂದು ತೆರನಾಗಿ ದೇಶ ಕಟ್ಟುವ ಕೆಲಸದಲ್ಲಿ ತೆರಿಗೆ ಪಾವತಿದಾರರಾದ ನಾವೂ ಭಾಗಿಯಾಗಿರುತ್ತೇವೆ.
ಆದಾಯ ತೆರಿಗೆ ಕಾನೂನಿನ ವಿವಿಧ ನಿಯಮಗಳ ಅಡಿ ತೆರಿಗೆ ಪಾವತಿಗೆ ವಿನಾಯ್ತಿ ಇದೆ. ಮುಖ್ಯವಾಗಿ ಸೆಕ್ಷನ್ 80 ಸಿ ಈ ವಿಚಾರದಲ್ಲಿ ಬಹುತೇಕರಿಗೆ ಅನ್ವಯವಾಗುತ್ತದೆ. ಈ ಕೆಳಗಿನ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದರೆ ಈ ನಿಯಮದಡಿ ಸಿಗುವ ತೆರಿಗೆ ವಿನಾಯ್ತಿಯನ್ನು ನಾವು ಪಡೆದುಕೊಳ್ಳಬಹುದು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
ದೀರ್ಘ ಕಾಲದಲ್ಲಿ ಉತ್ತಮ ಪ್ರತಿಫಲ ಮತ್ತು ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ತೆರಿಗೆ ವಿನಾಯ್ತಿಯನ್ನೂ ದಕ್ಕಿಸಿಕೊಡುವ ಹಣಕಾಸು ಯೋಜನೆ ಪಿಪಿಎಫ್. ಭಾರತ ಸರ್ಕಾರದ ಹಣಕಾಸು ಇಲಾಖೆಯ ನೇರ ಸುಪರ್ದಿಯಲ್ಲಿರುವ ಈ ಯೋಜನೆಯನ್ನು ಎಸ್ಬಿಐ ನಿರ್ವಹಿಸುತ್ತದೆ. ಈ ಯೋಜನೆಯಡಿ 15 ವರ್ಷಗಳ ಕಾಲ ಪ್ರತಿವರ್ಷವೂ ನಮ್ಮ ಹಣಕ್ಕೆ ನಿಗದಿತ ಮೊತ್ತದ ಬಡ್ಡಿದರ ದೊರಕುತ್ತದೆ. ಈ ಯೋಜನೆಯಡಿ ಹೂಡಿಕೆ, ಅದರ ಮೇಲಿನ ಬಡ್ಡಿ ಮತ್ತು ಕೊನೆಯಲ್ಲಿ ಪಡೆದುಕೊಳ್ಳುವ ಒಟ್ಟಾರೆ ಪ್ರತಿಫಲದ ಮೊತ್ತವೂ ತೆರಿಗೆ ಮುಕ್ತ. ಸದ್ಯ ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ಶೇ 7.1ರಷ್ಟು ಬಡ್ಡಿ ದೊರಕುತ್ತಿದೆ. ಆರ್ಥಿಕ ವರ್ಷದ ಮುಕ್ತಾಯಕ್ಕೆ 80C ಅಡಿ ತೆರಿಗೆ ವಿನಾಯ್ತಿಗೆ ಅರ್ಜಿ ಸಲ್ಲಿಸಬಹುದು. ಕನಿಷ್ಠ 500ರಿಂದ ಗರಿಷ್ಠ 1,50,00ದವರೆಗೆ ಹೂಡಿಕೆ ಮಾಡಬಹುದು. ಪಿಪಿಎಫ್ ಖಾತೆಯನ್ನು ಸಾರ್ವಜನಿಕ ಅಥವಾ ಖಾಸಗಿ ವಲಯದ ಯಾವುದೇ ಬ್ಯಾಂಕ್ನಲ್ಲಿ ತೆರೆಯಬಹುದಾಗಿದೆ.
ಇದನ್ನೂ ಓದಿ: Explainer | ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ, ಅದರರ್ಥವೇನು?
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (NSC)
ನೀವು ಬ್ಯಾಂಕ್ನಲ್ಲಿ 5 ವರ್ಷದ ಅವಧಿಗೆ ಹಣವನ್ನು ಠೇವಣಿ ಇಡಬೇಕೆಂದು ಯೋಚಿಸುತ್ತಿದ್ದೀರಾ? ನಿಲ್ಲಿ, ಈ ಲೇಖನವನ್ನು ಓದಿದ ನಂತರ ಮತ್ತೊಮ್ಮೆ ನಿಮ್ಮ ನಿರ್ಧಾರ ಪರಿಶೀಲಿಸಿ. ಸ್ಥಿರ ಠೇವಣಿಗಿಂತ (Fixed Deposite) ಹೆಚ್ಚಿನ ಬಡ್ಡಿದರ ಒದಗಿಸುವ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ನಡಿ ನೀವು ಹಣ ತೊಡಗಿಸಬಹುದು. 80C ವಿನಾಯ್ತಿಯಿಡಿ 1,50,000ದವರೆಗಿನ ಬಡ್ಡಿಹಣಕ್ಕೆ ಯಾವುದೇ ತೆರಿಗೆಯನ್ನು ನೀವು ಕಟ್ಟಬೇಕಂತಿಲ್ಲ. ಸದ್ಯ ಶೇ 6.8 ಬಡ್ಡಿದರ ಲಭ್ಯವಿರುವ ಈ ಆದಾಯ ತೆರಿಗೆ ವಿನಾಯ್ತಿಯ ಲಾಭವನ್ನು ಹತ್ತಿರದ ಅಂಚೆ ಕಚೇರಿ ಮೂಲಕ ನೀವು ಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆ
ನೀವು ಖಾಸಗಿ ಉದ್ಯೋಗಿಯೇ ಆಗಿರಿ ಅಥವಾ ಸ್ವಂತ ವಹಿವಾಟನ್ನೇ ಹೊಂದಿರಿ. ಈ ಯೋಜನೆಯ ಲಾಭ ಪಡೆಯುವುದರಿಂದ ಯಾರೂ ನಿಮ್ಮನ್ನು ತಡೆಯಲಾರರು. ಸರ್ಕಾರಿ ಉದ್ಯೋಗಿಗಳಿಗಂತೂ ಈ ಯೋಜನೆ ಕಡ್ಡಾಯವಾಗಿದೆ. ದುಡಿಯಲು ಆರಂಭಿಸಿದ ವರ್ಷದಿಂದಲೇ ನಿಮ್ಮ ನಿವೃತ್ತಿಯ ನಂತರದ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಲು ಸರ್ಕಾರ ನೀಡಿದ ಬಹುದೊಡ್ಡ ಅವಕಾಶವಿದು. 80 CCD (1) ಅಡಿ ಸಂಬಳದ ಶೇ 10ರಷ್ಟಕ್ಕೆ ಆದಾಯ ತಡೆರಿಗೆ ವಿನಾಯ್ತಿ ಪಡೆಯಬಹುದು.
ಈಕ್ವಿಟಿ ಉಳಿತಾಯ ಯೋಜನೆ (ELSS)
ಅತಿ ಕಡಿಮೆ ಅವಧಿಯಲ್ಲಿ ನೀವು ತೆರಿಗೆ ವಿನಾಯ್ತಿ ಯೋಜನೆಯಡಿ ಹೂಡಿಕೆ ಮಾಡಬೇಕು ಎಂದಲ್ಲಿ ಈ ಯೋಜನೆಯಲ್ಲಿ ನೋಂದಣಿಯಾಗುವುದೊಳಿತು. ಈ ಯೋಜನೆಯ ಈಕ್ವಿಟಿ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಒಂದು ಆರ್ಥಿಕ ವರ್ಷದಲ್ಲಿ ₹ 48,800 ದಷ್ಟು ಹಣವನ್ನು ಆದಾಯ ತೆರಿಗೆಯಿಂದ ಉಳಿಸಬಹುದು. ಎಂದು ಏನಾಗಬಹುದು ಎಂದು ಊಹಿಸಲಾಗದ ಈಕ್ವಿಟಿ ಮಾರುಕಟ್ಟೆಯಲ್ಲಿ ದೀರ್ಘಾವಧಿಯವರೆಗೆ ಕಾಯಬಲ್ಲ ಮತ್ತು ಎಂಥದ್ದೇ ಸವಾಲು ಎದುರಾದರೂ ಎದುರಿಸುವ ಛಾತಿಯುಳ್ಳವರಿಗೆ ಹೇಳಿಮಾಡಿಸಿದ ತೆರಿಗೆ ವಿನಾಯ್ತಿ ಯೋಜನೆಯಿದು. ಇದು ಮ್ಯೂಚುವಲ್ ಫಂಡ್ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ನೀವು ಹೂಡಿಕೆ ಮಾಡಿದ ಹಣ 3 ವರ್ಷಗಳ ಅವಧಿಗೆ ಲಾಕ್ ಆಗಿರುತ್ತದೆ. ಎಸ್ಬಿಐ, ಎಲ್ಐಸಿ, ಆಕ್ಸಿಸ್ ಸೇರಿದಂತೆ ಹಲವು ಎಎಂಸಿಗಳು ಈ ಯೋಜನೆ ಘೋಷಿಸಿವೆ.
ಇದನ್ನೂ ಓದಿ: Budget 2021 Explainer | ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು
ಬ್ಯಾಂಕ್ನಲ್ಲಿ 5 ವರ್ಷದ ಸ್ಥಿರ ಠೇವಣಿ
₹ 1.50 ಲಕ್ಷ ಹಣವನ್ನು ತೆರಿಗೆ ಕಟ್ಟುವುದರಿಂದ ಉಳಿಸಲು ನೀವು 5 ವರ್ಷದ ಸ್ಥಿರ ಠೇವಣಿಯನ್ನು (Fixed Deposit) ಇಡಬಹುದು. ಆದರೆ ಇತರ ತೆರಿಗೆ ವಿನಾಯ್ತಿ ಯೋಜನೆಗಳಿಗೆ ಹೋಲಿಸಿದರೆ ಇದು ಕಡಿಮೆ ಲಾಭ ತಂಡುಕೊಡಲಿದೆ ಎಂಬುದನ್ನು ನೆನಪಿಸಬೇಕು. ಜತೆಗೆ, ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ಬಡ್ಡಿದರದಲ್ಲಿ ವ್ಯತ್ಯಾಸವಿರುತ್ತದೆ. ಇವುಗಳನ್ನು ಅರಿತು ಹೂಡಿಕೆ ಮಾಡುವತ್ತ ಯೋಜನೆ ರೂಪಿಸುವುದೊಳಿತು.
ಯೂನಿಟ್ ಸಂಯೋಜಿತ ವಿಮಾ ಯೋಜನೆ Unit Link Insurence Plans (ULIP)
ಇನ್ಸುರೆನ್ಸ್ ಮತ್ತು ಹೂಡಿಕೆಗಳ ಸಮ್ಮಿಲನವೇ ULIPಗಳು. ನಿಮ್ಮ ಹೂಡಿಕೆಯ ಕೆಲ ಮೊತ್ತದ ಸ್ವಲ್ಪ ಭಾಗವನ್ನು ವಿಮಾ ಸೌಲಭ್ಯಕ್ಕೆ ತೆಗೆದಿಟ್ಟು ಮಿಕ್ಕ ಹಣವನ್ನು ನಿಮ್ಮ ಹೂಡಿಕೆಯ ಗುರಿಗೆ ಅನುಸಾರವಾಗಿ ಈಕ್ವಿಟಿ ಅಥವಾ ಡೆಟ್ ಫಂಡ್ನಲ್ಲಿ ತೊಡಗಿಸಲಾಗುತ್ತದೆ. ಪ್ರತಿವರ್ಷವೂ ₹ 1.50 ಲಕ್ಷಕ್ಕೆ ಈ ಮೂಲಕ 80C ನಿಯಮದಡಿ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದು. ಇದು ದೀರ್ಘಾವಧಿ ಹೂಡಿಕೆ ಯೋಜನೆ. ಈ ಯೋಜನೆಯಡಿ ಸೂಕ್ತ ಪ್ರತಿಫಲ ಪಡೆಯಲು ನಿಮಗೆ 10ರಿಂದ 15 ವರ್ಷದವರೆಗೆ ಕಾಯುವ ತಾಳ್ಮೆ ಬೇಕು.
ಜೀವವಿಮೆ
ಜೀವವಿಮೆಗೆ ಕಟ್ಟುವ ಕಂತು ಸಹ ಸೆಕ್ಷನ್ 80 ಸಿ ಅಡಿ ತೆರಿಗೆ ವಿನಾಯ್ತಿಗೆ ಯೋಗ್ಯವಾಗಿದೆ. ಇಂಥ ಪಾಲಿಸಿಗಳು ದೀರ್ಘಾವಧಿಯ ಹೂಡಿಕೆಗೆ ಬಹುಯೋಗ್ಯವಾಗಿವೆ. ಪ್ರತಿಫಲದ ಮೊತ್ತ ಕಡಿಮೆಯಿದ್ದರೂ ಅಸಲಿಗೆ ಬಹುತೇಕ ಸಂದರ್ಭದಲ್ಲಿ ಮೋಸವಾಗುವುದಿಲ್ಲ. ಹೀಗಾಗಿಯೇ ಇದು ಮಧ್ಯಮ ವರ್ಗದ ನೆಚ್ಚಿನ ತೆರಿಗೆ ಉಳಿತಾಯ ಮಾರ್ಗವಾಗಿದೆ.
Published On - 9:48 pm, Sun, 31 January 21