Maruti Suzuki Fronx: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಫ್ರಾಂಕ್ಸ್ ಹೊಸ ಮೈಲಿಗಲ್ಲು

|

Updated on: Jun 14, 2024 | 9:42 PM

ಮಾರುತಿ ಸುಜುಕಿ ಕಂಪನಿಯ ಹೊಸ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿಯು ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದ್ದು, ಇದೀಗ ಹೊಸ ಮೈಲಿಗಲ್ಲು ಸಾಧಿಸಿದೆ.

Maruti Suzuki Fronx: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಫ್ರಾಂಕ್ಸ್ ಹೊಸ ಮೈಲಿಗಲ್ಲು
ಮಾರುತಿ ಸುಜುಕಿ ಫ್ರಾಂಕ್ಸ್
Follow us on

ಬಜೆಟ್ ಬೆಲೆಯ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ಫ್ರಾಂಕ್ಸ್(Fronx) ಕಂಪ್ಯಾಕ್ಟ್ ಎಸ್ ಯುವಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಬಿಡುಗಡೆಯಾದ ಕೇವಲ 14 ತಿಂಗಳ ಅವಧಿಯಲ್ಲಿ 1.50 ಲಕ್ಷ ಯುನಿಟ್ ಗಳು ಮಾರಾಟಗೊಂಡಿವೆ. ಹೊಸ ಫ್ರಾಂಕ್ಸ್ ಕಾರು ಮಾರುತಿ ಸುಜುಕಿಯ ಬಲೆನೊ ಮತ್ತು ಎಸ್ ಕ್ರಾಸ್ ಕಾರುಗಳ ವಿನ್ಯಾಸ ಮಿಶ್ರಣ ಹೊಂದಿದ್ದು, ಇದು ಸಣ್ಣ ಗಾತ್ರ ಎಸ್ ಯುವಿ ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಕ್ರಾಸ್ ಓವರ್ ಎಸ್ ಯುವಿ ಮಾದರಿಯಾಗಿ ಗುರುತಿಸಿಕೊಂಡಿರುವ ಫ್ರಾಂಕ್ಸ್ ಕಾರು ವಿವಿಧ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿದೆ. ಇದರಲ್ಲಿ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಲೀಟರ್ ಗೆ ಗರಿಷ್ಠ 22.89 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹಾಗೆಯೇ ಹೊಸ ಕಾರಿನ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಗೆ ಗರಿಷ್ಠ 21.79 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದರಲ್ಲಿ ಟರ್ಬೊ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 20.01 ಕಿ.ಮೀ ನಿಂದ 21.05 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರೊಂದಿಗೆ ಹೊಸ ಕಾರು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, ಇದರಲ್ಲಿ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 88.5 ಹಾರ್ಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಮಾದರಿಯು 98.06 ಹಾರ್ಸ್ ಪವರ್ ಮತ್ತು 147.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಕಾರಿನಲ್ಲಿ ಇನ್ನು ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಸಿಎನ್ ಜಿ ಆವೃತ್ತಿ ಕೂಡಾ ಲಭ್ಯವಿದ್ದು, ಸಿಎನ್ ಜಿ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಜೋಡಣೆ ಪಡೆದುಕೊಂಡಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 77.5 ಹಾರ್ಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಇದು ಪ್ರತಿ ಲೀಟರ್ ಸಿಎನ್ ಜಿಗೆ ಗರಿಷ್ಠ 28.51 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಈ ವಿಭಾಗದ ಕಾರುಗಳಲ್ಲೇ ಅತಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಜೊತೆಗೆ ಹೊಸ ಫ್ರಾಂಕ್ಸ್ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಆಕರ್ಷಕ ಹೊರಭಾಗದ ವಿನ್ಯಾಸದ ಜೊತೆಗೆ ಐಷಾರಾಮಿ ಅನುಭವ ನೀಡುವ ಡ್ಯುಯಲ್ ಕಲರ್ ಕ್ಯಾಬಿನ್ ಸೌಲಭ್ಯವನ್ನು ನೀಡಿದೆ. ಇದರಲ್ಲಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಮಾರ್ಟ್ ಪ್ಲೇ ಪ್ರೋ ಸಿಸ್ಟಂ, ಸ್ಟಿರಿಂಗ್ ಮೌಂಟೆಡ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗ್ರಾಹಕರನ್ನು ಆಕರ್ಷಿಸಲಿದ್ದು, ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ.