ಬಿಡುಗಡೆಗೆ ಸಿದ್ದವಾದ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಎಷ್ಟು ಗೊತ್ತಾ?

ಮಾರುತಿ ಸುಜುಕಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ತಲೆಮಾರಿನ ಸ್ವಿಫ್ಟ್ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಶೀಘ್ರದಲ್ಲಿಯೇ ಸಿಎನ್‌ಜಿ ಆವೃತ್ತಿಯಲ್ಲೂ ಬಿಡುಗಡೆಗೂ ಸಿದ್ದವಾಗುತ್ತಿದೆ.

ಬಿಡುಗಡೆಗೆ ಸಿದ್ದವಾದ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಎಷ್ಟು ಗೊತ್ತಾ?
ಮಾರುತಿ ಸುಜುಕಿ ಸ್ವಿಫ್ಟ್
Praveen Sannamani

Updated on: Sep 07, 2024 | 7:51 PM

ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ಶೀಘ್ರದಲ್ಲಿಯೇ ಹೊಸ ತಲೆಮಾರಿನ ಸ್ವಿಫ್ಟ್ ಆವೃತ್ತಿಯಲ್ಲಿ ಸಿಎನ್‌ಜಿ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರುವ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಕಾರು ಸಿಎನ್‌ಜಿ ಆವೃತ್ತಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಮಾಹಿತಿಗಳ ಪ್ರಕಾರ, ಹೊಸ ಸ್ವಿಫ್ಟ್ ಸಿಎನ್‌ಜಿ ಮಾದರಿಯು ಇದೇ ತಿಂಗಳು 12ರಂದು ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಹೊಸ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ. ಸಿಎನ್‌ಜಿ ಮಾದರಿಯು ಪೆಟ್ರೋಲ್ ಆವೃತ್ತಿಯಲ್ಲಿನ ಮಧ್ಯಮ ಕ್ರಮಾಂಕದ ವೆರಿಯೆಂಟ್ ಆಧರಿಸಿ ನಿರ್ಮಾಣವಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ರೂ. 60 ಸಾವಿರದಿಂದ ರೂ. 70 ಸಾವಿರದಷ್ಟು ದುಬಾರಿಯಾಗಿರಲಿದೆ.

ಸ್ವಿಫ್ಟ್ ಸಿಎನ್‌ಜಿ ಮಾದರಿಯು ಪೆಟ್ರೋಲ್ ಎಂಜಿನ್ ನೊಂದಿಗೆ ಸಂಯೋಜನೆ ಹೊಂದಿರುವುದರಿಂದ ಹೊಸ ಮಾದರಿಯು ಪ್ರತಿ ಕೆಜಿ ಸಿಎನ್‌ಜಿಗೆ 32ರಿಂದ 33 ಕಿ.ಮೀ ಮೈಲೇಜ್ ನೀರಿಕ್ಷೆ ಮಾಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ. 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಮಾನ್ಯ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, ಇದರಲ್ಲಿ ಮ್ಯಾನುವಲ್ ಮಾದರಿಯು 24.8 ಕಿ.ಮೀ ಮೈಲೇಜ್ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಯು 25.75 ಕಿ.ಮೀ ಮೈಲೇಜ್ ನೀಡುತ್ತದೆ. ಹೀಗಾಗಿ ಸಿಎನ್‌ಜಿ ಮಾದರಿಯ ಮೈಲೇಜ್ ಕೂಡಾ ಈ ಬಾರಿ ಹೆಚ್ಚಳ ನೀರಿಕ್ಷೆಯಿದ್ದು, ಇದು ತನ್ನ ವಿಭಾಗದಲ್ಲಿಯೇ ಹೆಚ್ಚು ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಇನ್ನು 2005ರಲ್ಲಿ ಮೊದಲ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿದ್ದ ಸ್ವಿಫ್ಟ್ ಕಾರು 2013ರಲ್ಲಿ ಎರಡನೇ ತಲೆಮಾರಿನ ವೈಶಿಷ್ಟ್ಯತೆ ಮತ್ತು 2018ರಲ್ಲಿ ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿತ್ತು. ಈ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿ ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, 30 ಲಕ್ಷ ಗ್ರಾಹಕರು ತನ್ನದಾಗಿಸಿಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಆಕರ್ಷಕ ಬೆಲೆ, ಸ್ಪೋರ್ಟಿಯಾಗಿರುವ ವಿನ್ಯಾಸ, ಅತ್ಯುತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ ಸ್ವಿಫ್ಟ್ ಕಾರು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳೊಂದಿಗೆ ಮಾರಾಟಗೊಳ್ಳುತ್ತಿದೆ. ಇದೀಗ ಮಾರುಕಟ್ಟೆಯಲ್ಲಿರುವ ಹೊಸ ಸ್ವಿಫ್ಟ್ ಆವೃತ್ತಿಯು ಈ ಹಿಂದೆಂದಿಗಿಂತಲೂ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ(ಆಪ್ಷನ್), ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್ ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಜೊತೆಗೆ ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಸಾಕಷ್ಟು ಬದಲಾವಣೆಗೊಳಿಸಲಾದ ಆಕರ್ಷಕ ವಿನ್ಯಾಸ ಹೊಂದಿದ್ದು, ಒಳಭಾಗದಲ್ಲೂ ಕೂಡಾ ಹಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಸೇರಿದಂತೆ ಎಲ್ಇಡಿ ಹೆಡ್ ಲೈಟ್ಸ್, 9 ಇಂಚಿನ ಫ್ಲೋಟರಿಂಗ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಪ್ರೀಮಿಯಂ ಆಗಿರುವ ಫ್ರಾಬ್ರಿಕ್ ಆಸನಗಳು, ವೈರ್ ಲೆಸ್ ಚಾರ್ಜಿಂಗ್, ಆಟೋ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ವಿವಿಧ ಸೌಲಭ್ಯಗಳು ಗಮನಸೆಳೆಯುತ್ತಿವೆ. ಹಾಗೆಯೇ ಸುರಕ್ಷತೆಗಾಗಿ ಆರು ಏರ್ ಬ್ಯಾಗ್ ಗಳು, ಐಸೋಫಿಕ್ಸ್ ಆ್ಯಂಕರ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Follow Us