Nissan X-Trail: ಪವರ್‌ಫುಲ್ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು ಭಾರತದಲ್ಲಿ ಅನಾವರಣ

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಎಕ್ಸ್-ಟ್ರಯಲ್ ಎಸ್ ಯುವಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ.

Nissan X-Trail: ಪವರ್‌ಫುಲ್ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು ಭಾರತದಲ್ಲಿ ಅನಾವರಣ
ನಿಸ್ಸಾನ್ ಎಕ್ಸ್-ಟ್ರಯಲ್
Praveen Sannamani

Updated on: Jul 17, 2024 | 10:37 PM

ಭಾರತದಲ್ಲಿ ಹೊಸ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ನಿಸ್ಸಾನ್ ಇಂಡಿಯಾ (Nissan India) ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಕ್ಸ್-ಟ್ರಯಲ್ (X-Trail) ಎಸ್ ಯುವಿ ಬಿಡುಗಡೆ ಮಾಡುತ್ತಿದೆ. ಹೊಸ ಕಾರು ಬಿಡುಗಡೆಗೂ ಮುನ್ನ ಇದೀಗ ಅಧಿಕೃತವಾಗಿ ಅನಾವರಣಗೊಳಿಸಿದ್ದು, ಹೊಸ ಕಾರು ಹಲವಾರು ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೊಸ ಎಕ್ಸ್-ಟ್ರಯಲ್ ಕಾರನ್ನು ಮೊದಲ ಬಾರಿಗೆ 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ನಿಸ್ಸಾನ್ ಕಂಪನಿ ಇದೀಗ ಅಧಿಕೃತ ಬಿಡುಗಡೆ ಮಾಡುತ್ತಿದ್ದು, ಇದು ಆರಂಭಿಕ ಐಷಾರಾಮಿ ಎಸ್ ಯುವಿ ಆವೃತ್ತಿಯಾಗಿ ಮಾರಾಟವಾಗಲಿದೆ. ಹೊಸ ಎಕ್ಸ್-ಟ್ರಯಲ್ ಕಾರು ಈಗಾಗಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಸಾಕಷ್ಟು ಬೇಡಿಕೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಎಕ್ಸ್-ಟ್ರಯಲ್ ಕಾರು ಭಾರತದಲ್ಲಿ ಸಂಪೂರ್ಣವಾಗಿ ಆಮದು (ಸಿಬಿಯು) ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಇದು ವಾರ್ಷಿಕವಾಗಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುತ್ತದೆ. ಸಿಬಿಯು ಆಮದು ನೀತಿ ಅಡಿಯಲ್ಲಿ ಸದ್ಯ ಭಾರತದಲ್ಲಿರುವ ವಿದೇಶಿ ಕಾರು ಉತ್ಪಾದನಾ ಕಂಪನಿಗಳು ಯಾವುದೇ ಹೆಚ್ಚುವರಿ ತೆರಿಗೆಗಳಲ್ಲಿದೆ ವಾರ್ಷಿಕವಾಗಿ 2500 ಕಾರುಗಳನ್ನು ಆಮದು ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ನಿಸ್ಸಾನ್ ಕೂಡಾ ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ತನ್ನ ಬಹುಬೇಡಿಕೆಯ ಎಕ್ಸ್-ಟ್ರಯಲ್ ಮಾದರಿಯನ್ನು ಭಾರತಕ್ಕೂ ಪರಿಚಯಿಸಲು ಮುಂದಾಗಿದೆ.

ಸದ್ಯಕ್ಕೆ ಆಮದು ನೀತಿಯಡಿ ಅವಕಾಶವಿರುವ ಯುನಿಟ್ ಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧಿಸಿರುವ ನಿಸ್ಸಾನ್ ಕಂಪನಿಯು ಹೊಸ ಕಾರನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೊದಲು ಹೊಸ ಕಾರನ್ನು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ನಿಸ್ಸಾನ್ ಇದೀಗ ಹೊಸ ಕಾರನ್ನು ಸದ್ಯಕ್ಕೆ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೊಸ ಕಾರಿನ ಪೆಟ್ರೋಲ್ ಮಾದರಿಗಳ ಬೇಡಿಕೆ ಆಧರಿಸಿ ಹೈಬ್ರಿಡ್ ಆವೃತ್ತಿ ಕೂಡಾ ಬಿಡುಗಡೆಯಾಗಲಿದೆ.

ಹೊಸ ಕಾರಿನಲ್ಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 12ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದ್ದು, ಇದು ಪ್ಯಾಡಲ್ ಶಿಫ್ಟರ್ ಜೊತೆಗೆ ಶಿಫ್ಟ್ ಬೈ ವೈರ್ ಪ್ರೇರಿತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳ ಆಯ್ಕೆಯೊಂದಿಗೆ ಗರಿಷ್ಠ 163 ಹಾರ್ಸ್ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ. ಇದರೊಂದಿಗೆ ಹೊಸ ಕಾರು ಆಲ್ ವ್ಹೀಲ್ ಡ್ರೈವ್ ಮತ್ತು ಫ್ರಂಟ್ ವ್ಹೀಲ್ ಡ್ರೈವ್ ಆಯ್ಕೆಯೊಂದಿಗೆ ಐಶಾರಾಮಿ ಕಾರು ಚಾಲನಾ ಅನುಭವ ನೀಡಲಿದ್ದು, ಇದು 7 ಸೀಟರ್ ಮತ್ತು 5 ಸೀಟರ್ ಆಯ್ಕೆಗಳೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಜೊತೆಗೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು ತನ್ನ ಬಲಿಷ್ಠ ವಿನ್ಯಾಸದೊಂದಿಗೆ ಡ್ಯುಯಲ್ ಪೇನ್ ಸನ್ ರೂಫ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 12 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, 8 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಕೀ ಲೆಸ್ ಎಂಟ್ರಿ ಫುಶ್ ಬಟನ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 7 ಏರ್ ಬ್ಯಾಗ್ ಗಳು, ಆಟೋ ವೈಪ್ಸ್, ಎಬಿಎಸ್ ಜೊತೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯಗಳಿವೆ.

ಈ ಮೂಲಕ ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 40 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದ್ದು, ಇದು ಹ್ಯುಂಡೈ ಟುಸಾನ್, ಜೀಪ್ ಮೆರೆಡಿಯನ್, ಸಿಟ್ರನ್ ಸಿ5 ಏರ್ ಕ್ರಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ. ಇದರೊಂದಿಗೆ ಹೊಸ ಕಾರು ದುಬಾರಿ ಬೆಲೆ ಹೊಂದಿರುವ ಟೊಯೊಟಾ ಫಾರ್ಚೂನ್ ಕಾರು ಖರೀದಿಗೂ ಪರ್ಯಾಯ ಆವೃತ್ತಿಯಾಗಲಿದ್ದು, ಇದು 4,680 ಎಂಎಂ ಉದ್ದಳತೆಯೊಂದಿಗೆ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಒದಗಿಸುತ್ತದೆ.

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Follow Us