ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯು ಮಾಲಿನ್ಯ ಉತ್ಪಾದನೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೊಸ ವಾಹನಗಳಲ್ಲಿನ ಮಾಲಿನ್ಯ ಹೊರಸೂಸುವಿಕೆಯನ್ನು ಸುಧಾರಿಸಲು ರಿಯಲ್ ಡ್ರೈವಿಂಗ್ ಎಮಿಷನ್(Real Driving Emissions) ಜಾರಿಗೆ ತರಲಾಗುತ್ತಿದೆ. ಹೊಸ ಮಾಲಿನ್ಯ ನಿಯಂತ್ರಣ ನಿಯಮವನ್ನು ಕೇಂದ್ರ ಸರ್ಕಾರವು 2023ರ ಏಪ್ರಿಲ್ 1 ರಿಂದ ಜಾರಿಗೆ ತರಲು ನಿರ್ಧರಿಸಿದ್ದು, ಇದು ಮಾಲಿನ್ಯ ಹೊರಸೂಸುವಿಕೆಯನ್ನು ಸಾಕಷ್ಟು ಸುಧಾರಿಸಲಿದೆ.
ಏನಿದು ರಿಯಲ್ ಡ್ರೈವಿಂಗ್ ಎಮಿಷನ್?
ಹೊಸ ವಾಹನಗಳಿಂದ ಹೊರಸೂಸುವ ಮಾಲಿನ್ಯವನ್ನು ಸುಧಾರಿಸಲು ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಫೈಡ್ ಪ್ರೊಪಲ್ಷನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದ್ದು, ಇದು ಮಾಲಿನ್ಯ ತಡೆಗೆ ಒಂದು ರೀತಿಯಲ್ಲಿ ಉಪಯಕ್ತವಾದರೆ ಇನ್ನೊಂದಡೆ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ.
ದುಬಾರಿಯಾಗಲಿದೆ ಡೀಸೆಲ್ ಕಾರುಗಳ ಉತ್ಪಾದನೆ
ಹೊಸ ರಿಯಲ್ ಡ್ರೈವಿಂಗ್ ಎಮಿಷನ್ ಜಾರಿಗೆ ಬಂದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಡೀಸೆಲ್ ಕಾರುಗಳು ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸಬೇಕಿದ್ದು, ಹೊಸ ಮಾನದಂಡ ಪೂರೈಸಲು ಡೀಸೆಲ್ ಎಂಜಿನ್ ಕಾರುಗಳಲ್ಲಿ ಸಾಕಷ್ಟು ಬದಲಾವಣೆ ಅಗತ್ಯವಿದೆ. ಒಂದು ವೇಳೆ ಹೊಸ ಬದಲಾವಣೆಯನ್ನು ಅಳವಡಿಸಿಕೊಂಡು ಮಾರಾಟ ಮುಂದುವರಿಸುವುದಾದರೇ ಹೆಚ್ಚಿನ ಮಟ್ಟದ ಬೆಲೆ ಏರಿಕೆ ಪಡೆದುಕೊಳ್ಳಲಿದ್ದು, ಇದು ಸಣ್ಣ ಕಾರುಗಳಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸುವುದು ಕಷ್ಟವಾಗಲಿದೆ.
ಒಂದು ವೇಳೆ ರಿಯಲ್ ಡ್ರೈವಿಂಗ್ ಎಮಿಷನ್ ಮಾನದಂಡ ಪೂರೈಸುವ ಮಧ್ಯಮ ಕ್ರಮಾಂಕದ ಡೀಸೆಲ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತಲೂ ಹೆಚ್ಚುವರಿಯಾಗಿ ರೂ. 2 ಲಕ್ಷದಿಂದ ರೂ. 2.50 ಲಕ್ಷದಷ್ಟು ದುಬಾರಿಯಾಗಬಹುದಾಗಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ಡೀಸೆಲ್ ಕಾರುಗಳ ಬದಲಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್ ಜಿ ಮಾದರಿಗಳತ್ತ ಮುಖಮಾಡಿವೆ.
ಹೊಸ ನಿಯಮ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಸಂಪೂರ್ಣವಾಗಿ ಪರಿಸರ ಸ್ನೇಹಿ ಕಾರು ಮಾದರಿಗಳತ್ತ ಗಮನಹರಿಸಿದ್ದು, ಶೀಘ್ರದಲ್ಲಿಯೇ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮತ್ತಷ್ಟು ಡೀಸೆಲ್ ಕಾರು ಮಾದರಿಗಳ ಮಾರಾಟವು ಸಹ ಸ್ಥಗಿತಗೊಳ್ಳುವ ಸನೀಹದಲ್ಲಿವೆ.
ಹೊಸ ಎಮಿಷನ್ ಮಾನದಂಡಗಳನ್ನು ಪೂರೈಸಲು ಮಧ್ಯಮ ಕ್ರಮಾಂಕದ ಕಾರು ಉತ್ಪಾದನಾ ಕಂಪನಿಗಳು ಮಾತ್ರವಲ್ಲ ಐಷಾರಾಮಿ ಕಾರು ಉತ್ಪಾದನಾ ಕಂಪನಿಯು ಸಹ ಹಿಂದೇಟು ಹಾಕುತ್ತಿದ್ದು, ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಿಗೆ ಒತ್ತು ನೀಡುತ್ತಿವೆ. ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಸದ್ಯ ಸಿಎನ್ ಜಿ ಮಾದರಿಗಳ ಮಾರಾಟವು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಡೀಸೆಲ್ ಕಾರುಗಳ ಮಾರಾಟವು ನಿಧಾನವಾಗಿ ಐಷಾರಾಮಿ ಕಾರು ಮಾದರಿಗಳಲ್ಲೂ ಕಡಿಮೆಯಾಗಲಿವೆ.
ಹೊಸ ರಿಯಲ್ ಡ್ರೈವಿಂಗ್ ಎಮಿಷನ್ ನಿಂದಾಗಿ ಮುಂಬರುವ ಕೆಲವೇ ದಿನಗಳಲ್ಲಿ ಹ್ಯುಂಡೈ ಮತ್ತು ಹೋಂಡಾ ಕಂಪನಿಗಳು ತಮ್ಮ ಪ್ರಮುಖ ಕಾರುಗಳ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸುವ ಯೋಜನೆಯಲ್ಲಿದೆ. ಡೀಸೆಲ್ ಕಾರುಗಳ ಸ್ಥಗಿತಗೊಳಿಸುತ್ತಿರುವುದಾಗಿ ಹೋಂಡಾ ಕಾರ್ಸ್ ಕಂಪನಿಯು ಈಗಾಗಲೇ ಅಧಿಕೃತವಾಗಿಯೇ ಹೇಳಿಕೊಂಡಿದ್ದು, ಇನ್ಮುಂದೆ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಮಾತ್ರ ಖರೀದಿಗೆ ಲಭ್ಯವಿರಲಿವೆ.
Published On - 5:56 pm, Sat, 26 November 22