ಭಾರತದಲ್ಲಿ ಮಾರಾಟಗೊಳ್ಳುವ ಹೊಸ ಕಾರುಗಳಲ್ಲಿ(New Cars) ಇದೀಗ ಗ್ರಾಹಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕ್ರ್ಯಾಶ್ ಟೆಸ್ಟ್(Crash Test) ಫಲಿತಾಂಶವು ಕಾರು ಖರೀದಿದಾರರಿಗೆ ಸಾಕಷ್ಟು ಸಹಕಾರಿಯಾಗುತ್ತಿದೆ. ಇದೇ ಕಾರಣಕ್ಕೆ 2022ರ ಹಲವು ಕಾರುಗಳು ಗ್ರಾಹಕರ ಬೇಡಿಕೆಯೆಂತೆ ಹೆಚ್ಚಿನ ಸುರಕ್ಷತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೊಸ ಕಾರುಗಳಲ್ಲಿ ಗ್ರಾಹಕರು ಸುರಕ್ಷತೆಗೆ ಗಮನಹರಿಸುತ್ತಿರುವುದರಿಂದ ಕಾರು ಉತ್ಪಾದನಾ ಕಂಪನಿಗಳು ಸಹ ಗುಣಮಟ್ಟದ ಕಾರುಗಳ ಉತ್ಪಾದನೆ ಮಾಡುತ್ತಿದ್ದು, ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತಗಳಲ್ಲಿನ ಪ್ರಾಣಹಾನಿ ತಡೆಗಾಗಿ ಕೇಂದ್ರ ಸಾರಿಗೆ ಇಲಾಖೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ಹೊಸ ಕಾರುಗಳಲ್ಲಿನ ಸುರಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದ್ದು, ಸುರಕ್ಷಾ ಫೀಚರ್ಸ್(Safety Features) ಗುಣಮಟ್ಟದ ಪರೀಕ್ಷಿಸಲು ಕ್ರ್ಯಾಶ್ ಟೆಸ್ಟಿಂಗ್ ಸಾಕಷ್ಟು ಅನುಕೂಲಕರವಾಗಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಈ ವರ್ಷ ಬಿಡುಗಡೆಯಾದ ಹಲವು ಹೊಸ ಕಾರುಗಳು ಉತ್ತಮ ರೇಟಿಂಗ್ಸ್ ಪಡೆದುಕೊಂಡಿವೆ. ಭಾರತದಲ್ಲಿ ಸದ್ಯ ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಕಾರುಗಳತ್ತ ಗ್ರಾಹಕರು ಮುಖ ಮಾಡುತ್ತಿದ್ದು, ಇವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.
ಮಹೀಂದ್ರಾ ಸ್ಕಾರ್ಪಿಯೋ ಎನ್
ಅತ್ಯುತ್ತಮ ಸುರಕ್ಷಾ ಸೌಲಭ್ಯ ಹೊಂದಿರುವ ಪಟ್ಟಿಯಲ್ಲಿ ಸದ್ಯ ಮಹೀಂದ್ರಾ ಸ್ಕಾರ್ಪಿಯೋ ಎನ್ ಅಗ್ರಸ್ಥಾನದಲ್ಲಿದೆ. ಹೊಸ ಸ್ಕಾರ್ಪಿಯೋ ಎನ್ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 34 ಅಂಕಗಳಿಗೆ 29.25 ಮತ್ತು ಮಕ್ಕಳ ಸುರಕ್ಷತೆಯಲ್ಲಿ 48 ಅಂಕಗಳಿಗೆ 28.94 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಇದು ಒಟ್ಟಾರೆ ಸುರಕ್ಷಾ ಫೀಚರ್ಸ್ ಮತ್ತು ಕಾರ್ಯಕ್ಷಮತೆ ಆಧರಿಸಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಸದ್ಯ ಕನಿಷ್ಠ 3 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದುವುದು ಕಡ್ಡಾಯವಾಗಿದ್ದು, ಇದರಲ್ಲಿ 3 ಸ್ಟಾರ್ ರೇಟಿಂಗ್ಸ್ ಗಿಂತಲೂ ಕಡಿಮೆ ರೇಟಿಂಗ್ಸ್ ಹೊಂದಿದ್ದಲ್ಲಿ ಅಂತಹ ಕಾರುಗಳನ್ನು ಕಳಪೆ ಕಾರು ಎಂದು ಕರೆಯಲಾಗುತ್ತದೆ.
ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗುನ್
ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗುನ್ ಕೂಡಾ ಅಗ್ರಸ್ಥಾನದಲ್ಲಿವೆ. ಈ ಎರಡು ಕಾರು ಮಾದರಿಗಳು ಒಂದೇ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣಗೊಂಡಿದ್ದು, ಸುರಕ್ಷತೆಯಲ್ಲೂ ಗ್ರಾಹಕರನ್ನು ಸೆಳೆಯುತ್ತಿವೆ. ಕ್ರ್ಯಾಶ್ ಟೆಸ್ಟಿಂಗ್ ಈ ಹೊಸ ಕಾರುಗಳು ಗರಿಷ್ಠ 71.64 ಅಂಕಗಳೊಂದಿಗೆ ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿವೆ. ಹೊಸ ಕಾರುಗಳು ಪ್ರೀಮಿಯಂ ಫೀಚರ್ಸ್ ಜೊತೆಗೆ ಪ್ರಯಾಣಿಕರ ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದ್ದು, ಈ ಎರಡು ಕಾರುಗಳಲ್ಲೂ ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ 40ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ. ಕುಶಾಕ್ ಮತ್ತು ಟೈಗುನ್ ಕಾರುಗಳಲ್ಲಿ ಮಲ್ಟಿ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳಿವೆ.
ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್
ಸುರಕ್ಷಿತ ಕಾರು ಪಟ್ಟಿಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್ ಕೂಡಾ ಪ್ರಮುಖವಾಗಿದ್ದು, ಈ ವರ್ಷದ ಆರಂಭದಲ್ಲಿ ಕ್ರ್ಯಾಶ್ ಟೆಸ್ಟ್ ಎದುರಿಸಿದ ಈ ಎರಡು ಕಾರುಗಳು 5 ಸ್ಟಾರ್ ರೇಟಿಂಗ್ಸ್ ನಲ್ಲಿ 4 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿವೆ. ಈ ಹೊಸ ಕಾರು ಮಾದರಿಗಳು ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಒಂದೇ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣ ಮಾಡುತ್ತಿದ್ದು, ಬಜೆಟ್ ಬೆಲೆಯಲ್ಲೂ ಈ ಕಾರುಗಳು ಸುರಕ್ಷತೆಯಲ್ಲಿ ಗಮನಸೆಳೆಯುತ್ತಿವೆ.
ಟೊಯೊಟಾ ಅರ್ಬನ್ ಕ್ರೂಸರ್
ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಕೂಡಾ ಉತ್ತಮವಾಗಿದ್ದು, ಇದು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ. ಇದರೊಂದಿಗೆ ಗ್ಲೋಬಲ್ ಎನ್ ಸಿಎಪಿ ಇತ್ತೀಚೆಗ ತನ್ನ ಹೊಸ ಪ್ರೋಟೋಕಾಲ್ ನಲ್ಲಿ ಕ್ರ್ಯಾಶ್ ಟೆಸ್ಟಿಂಗ್ ಮಾನದಂಡಗಳನ್ನು ಬದಲಾವಣೆಗೊಳಿಸಿದ್ದು, ಹೊಸ ಮಾನದಂಡಗಳ ಪ್ರಕಾರ ಗರಿಷ್ಠ ರೇಟಿಂಗ್ಸ್ ಪಡೆದುಕೊಳ್ಳುವ ಕಾರುಗಳು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಪೆಡೆಸ್ಟ್ರೆನ್ ಪ್ರೊಟೆಕ್ಷನ್, ಪೋಲ್ ಸೈಡ್ ಇಂಪ್ಯಾಕ್ಟ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಸೌಲಭ್ಯಗಳಲ್ಲಿ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಬೇಕು. ಆಗ ಮಾತ್ರವೇ ಹೊಸ ಕಾರಿಗೆ ಗರಿಷ್ಠ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಲಿದ್ದು, ಹೊಸ ಮಾನದಂಡಗಳ ಪ್ರಕಾರ ಹೊಸ ಕಾರುಗಳು ಉತ್ತಮ ರೇಟಿಂಗ್ಸ್ ಪಡೆದುಕೊಳ್ಳುತ್ತಿವೆ.
Published On - 8:07 pm, Mon, 26 December 22