Toyota Innova Hycross: ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಇನೋವಾ ಹೈಕ್ರಾಸ್

|

Updated on: Mar 04, 2023 | 9:35 PM

ಟೊಯೊಟಾ ಇಂಡಿಯಾ ಕಂಪನಿಯು ಹೊಸ ಇನೋವಾ ಹೈಕ್ರಾಸ್ ಎಂಪಿವಿ ಕಾರು ಬಿಡುಗಡೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಹೊಸ ಕಾರು ಮೊದಲ ಬಾರಿಗೆ ಬೆಲೆ ಏರಿಕೆ ಪಡೆದುಕೊಂಡಿದೆ.

ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ(Toyota) ಕಂಪನಿಯು ಇನೋವಾ ಹೈಕ್ರಾಸ್(Innova Hycross) ಎಂಪಿವಿ ಕಾರಿನ ಬೆಲೆ ಏರಿಕೆ ಮಾಡಿದ್ದು, ಹೊಸ ಕಾರು ಮಾದರಿಯು ಬೆಲೆ ಏರಿಕೆಯೊಂದಿಗೆ ಹೊಸದಾಗಿ ವಿಎಕ್ಸ್(ಒ) ವೆರಿಯೆಂಟ್ ಪಡೆದುಕೊಂಡಿದೆ. ಹೊಸ ದರ ಪಟ್ಟಿಯಲ್ಲಿ ಇನೋವಾ ಹೈಕ್ರಾಸ್ ಮಾದರಿಯು ರೂ. 25 ಸಾವಿರದಿಂದ ರೂ. 75 ಸಾವಿರದಷ್ಟು ದುಬಾರಿಯಾಗಿದ್ದು, ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಹೊಸದಾಗಿ ವಿಎಕ್ಸ್(ಒ) ವೆರಿಯೆಂಟ್ ರೂ. 26.78 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಬೆಲೆ ಏರಿಕೆ ಮತ್ತು ಹೊಸ ವೆರಿಯೆಂಟ್ ಬಿಡುಗಡೆಯ ನಂತರ ಇನೋವಾ ಹೈಕ್ರಾಸ್ ಮಾದರಿಯು ಇದೀಗ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 18.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 29.72 ಲಕ್ಷ ಬೆಲೆ ಹೊಂದಿದೆ. ಇದರೊಂದಿಗೆ ವಿಎಕ್ಸ್(ಒ) ವೆರಿಯೆಂಟ್ ವಿಎಕ್ಸ್8 ಮತ್ತು ಜೆಡ್ಎಕ್ಸ್ ವೆರಿಯೆಂಟ್ ಗಳ ನಡುವಿನ ಸ್ಥಾನದಲ್ಲಿ ಬಿಡುಗಡೆಗೊಂಡಿದ್ದು, ಹೊಸ ವೆರಿಯೆಂಟ್ 7 ಸೀಟರ್ ಮತ್ತು 8 ಸೀಟರ್ ಮಾದರಿಗಳನ್ನ ಹೊಂದಿದೆ.

ವೆರಿಯೆಂಟ್ ಮತ್ತು ಎಂಜಿನ್ ಆಯ್ಕೆ

ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಯು G, GX, VX, ZX ಮತ್ತು ZX (O) ಎನ್ನುವ ಐದು ವೆರಿಯೆಂಟ್ ಹೊಂದಿದ್ದು, ಇದು ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಹೊಸ ಕಾರಿನಲ್ಲಿ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಲಭ್ಯವಿದ್ದು, ಪ್ರತಿಯೊಂದು ವೆರಿಯೆಂಟ್ ಗಳು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿವೆ. ಇದರಲ್ಲಿ ಹೈಬ್ರಿಡ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 23 ಕಿ.ಮೀ ಮೈಲೇಜ್ ನೀಡಲಿದ್ದು, ಹೊಸ ಕಾರಿನ ಕಾಯುವಿಕೆ ಅವಧಿಯನ್ನ 8 ತಿಂಗಳಿನಿಂದ 12ಕ್ಕೆ ತಿಂಗಳಕ್ಕೆ ನಿಗದಿಪಡಿಸಲಾಗಿದೆ.

ಸುರಕ್ಷತೆ ಮತ್ತು ವೈಶಿಷ್ಟ್ಯತೆಗಳು

ಟೊಯೊಟಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಎಂಪಿವಿ ಮಾದರಿಯಾಗಿದ್ದರೂ ಹೊಸ ಕಾರು ಎಸ್ ಯುವಿ ಲುಕ್ ಹೊಂದಿದೆ. ಜೊತೆಗೆ ಎಲೆಕ್ಟ್ರಿಕ್ ಸನ್‌ರೂಫ್‌, 360 ಡಿಗ್ರಿ ಕ್ಯಾಮೆರಾ, ಪ್ಲೊಟರಿಂಗ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಟ್ರೀರಿಂಗ್ ಮೌಂಟೆಡ್ ಕಂಟ್ರೋಲ್, ವೈರ್ ಲೇಸ್ ಚಾರ್ಜರ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಂ, 6 ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯಗಳಿದ್ದು, ಈ ಮೂಲಕ ಹೊಸ ಕಾರು ಕಿಯಾ ಕಾರ್ನಿವಾಲ್ ಮಾದರಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

 

ಈ ಹೆಚ್ಚಿನ ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 3:51 pm, Fri, 3 March 23