ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಆಗುತ್ತಿರುವಂತೆಯೇ ನಾನಾ ವಲಯಗಳಲ್ಲಿ ಬದಲಾವಣೆ ಕೂಡ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಡಿಜಿಟಲ್ ಪೇಮೆಂಟ್ (ಪಾವತಿ) ಕೂಡ ಹೊರತಲ್ಲ. ಡಿಜಿಟಲ್ ಪಾವತಿ ಎಂಬುದು ಸಂಪೂರ್ಣವಾಗಿ ಹೊಸ ಚಿಂತನೆ ಅಂತೇನೂ ಅಲ್ಲ. ಆದರೆ ಕೋವಿಡ್- 19 ಎಂಬ ಜಾಗತಿಕ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಭಾರತದಲ್ಲಿ ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್ಗಳು, ಮೊಬೈಲ್ ಬ್ಯಾಂಕಿಂಗ್ ಮುಂತಾದವುಗಳ ಮೂಲಕ ಪಾವತಿ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳುವುದರ ವೇಗ ಹೆಚ್ಚಾಯಿತು. ಇದಕ್ಕೆ ಬಹಳ ಅನುಕೂಲಕರವಾದ ಮತ್ತು ದೊಡ್ಡ ಮಟ್ಟದಲ್ಲಿ ಸುರಕ್ಷಿತ ದಾರಿಯಿರುವ ಕಾರಣ ಇದನ್ನೇ ಆರಿಸಿಕೊಳ್ಳಬಹುದು. ಆದರೆ ಆನ್ಲೈನ್ ಪಾವತಿ ವೇಳೆ ಸೈಬರ್ ಭದ್ರತೆ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಸುರಕ್ಷಿತವಾಗಿ ಡಿಜಿಟಲ್ ಪೇಮೆಂಟ್ ಮಾಡುವ 5 ಟಿಪ್ಸ್ಗಳು ಇಲ್ಲಿವೆ.
ಕಾರ್ಡ್ ಮಾಹಿತಿ ಸಂಗ್ರಹಿಸುವುದನ್ನು ತಪ್ಪಿಸಿ
ಇದು ಬಹಳ ಬೇಸಿಕ್ ವಿಷಯ ಅಂತ ನಿಮಗೆ ಅನ್ನಿಸಬಹುದು. ಆದರೆ ಆನ್ಲೈನ್ನಲ್ಲಿ ನೀವು ಖರೀದಿ ಮಾಡುವಾಗ ನಿಮ್ಮ ಡೆಬಿಟ್/ಕ್ರೆಡಿಟ್ ಮಾಹಿತಿಗಳು ಸೇವ್ (ಸಂಗ್ರಹ) ಆಗಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಬೇಗ ಪಾವತಿ ಆಗಿಬಿಡಲಿ, ಪದೇ ಪದೇ ಮಾಹಿತಿಯನ್ನು ಆರಂಭದಿಂದ ಭರ್ತಿ ಮಾಡುವ ಅಗತ್ಯ ಇಲ್ಲದಿರಲಿ ಎಂಬ ಕಾರಣಕ್ಕೆ ನಮ್ಮಲ್ಲಿ ಹಲವರು ಕಾರ್ಡ್ಗಳ ಮಾಹಿತಿಯನ್ನು ಸಂಗ್ರಹಿಸಲು ಬಯಸುತ್ತೇವೆ. ಆದರೆ ಆನ್ಲೈನ್ನಲ್ಲಿ ಖರೀದಿ ಮಾಡಿದ ಮೇಲೆ ನಿಮ್ಮ ಕಾರ್ಡ್ ಮಾಹಿತಿಯನ್ನು ಅಳಿಸುವುದು ಉತ್ತಮ. ಆಗ ಮಾಹಿತಿ ಕಳುವಿನ ಸಾಧ್ಯತೆ ಕಡಿಮೆ ಇರುತ್ತದೆ.
ವಹಿವಾಟಿಗೆ ಖಾಸಗಿ ವಿಂಡೋ ಬಳಸಿ
ಅನುಮಾನಾಸ್ಪದವಾದ ಅಪ್ಲಿಕೇಷನ್ಗಳು ಮತ್ತು ವೆಬ್ಸೈಟ್ಗಳಿಂದ ಡಿಜಿಟಲ್ ಪಾವತಿ ಮಾಡಬಾರದು ಹಾಗೂ ಆ್ಯಪ್ ಸ್ಟೋರ್ಗಳಲ್ಲಿ ಸಲಹೆ ನೀಡುವ ನಂಬಲರ್ಹವಾದ ಅಧಿಕೃತ ಅಪ್ಲಿಕೇಷನ್ಗಳನ್ನೇ ಬಳಸಬೇಕು. ಖಾಸಗಿ ಅಥವಾ ವರ್ಚುವಲ್ ಬ್ರೌಸರ್ ಬಳಸುವುದು ಉತ್ತಮ. HTTPS:// ಹೀಗೆ ಆರಂಭವಾಗುವುದರೊಂದಿಗೆ ವಹಿವಾಟು ನಡೆಸುವುದರಿಂದ ಹಣಕಾಸು ವಹಿವಾಟಿನ ಸುರಕ್ಷತೆ ಹೆಚ್ಚಾಗುತ್ತದೆ. ಸುರಕ್ಷಿತ ಆನ್ಲೈನ್ ಬ್ಯಾಂಕಿಂಗ್ಗಾಗಿ ಮತ್ತು ಕುಕೀಸ್ ತಡೆಯುವುದಕ್ಕೆ ಹಾಗೂ ಕ್ರೆಡೆನ್ಷಿಯಲ್ ಸಂಗ್ರಹ ಆಗದಿರಲಿ ಎಂದೇ ಅವುಗಳನ್ನು ರೂಪಿಸಲಾಗಿದೆ. ಇನ್ನು ವಹಿವಾಟು ಮುಗಿಸಿದ ಮೇಲೆ ಕಡ್ಡಾಯವಾಗಿ ಲಾಗ್ಔಟ್ ಆಗಬೇಕು.
ಪಾಸ್ವರ್ಡ್ ಹಂಚಿಕೊಳ್ಳಬೇಡಿ
ಇದು ಸಾಮಾನ್ಯವಾದ ಸಲಹೆ. ಆದರೆ ಆರ್ಥಿಕ ವಹಿವಾಟಿನ ಸುರಕ್ಷತೆಯ ಭಾಗದಲ್ಲಿ ಒಂದು. ಇಂಟರ್ನೆಟ್ ಬ್ಯಾಂಕಿಂಗ್ ಖಾತೆಯ ಪಾಸ್ವರ್ಡ್ಗಳು ಹೆಚ್ಚು ಬಲಿಷ್ಠವಾಗಿರಬೇಕು. ಯಾರ ಜತೆಗೂ ಇದನ್ನೂ ಹಂಚಿಕೊಳ್ಳಬಾರದು. ನಿಯಮಿತವಾಗಿ ಪಾಸ್ವರ್ಡ್ ಬದಲಾವಣೆ ಮಾಡಬೇಕು. ನಿಮ್ಮ ಎಟಿಎಂ PIN ಅಥವಾ ಪಾಸ್ವರ್ಡ್ ಕೇಳಿಕೊಂಡು ಯಾರಾದರೂ ಫೋನ್ ಮಾಡಿದಲ್ಲಿ ಆ ಬಗ್ಗೆ ಬ್ಯಾಂಕ್ಗೆ ಮಾಹಿತಿ ನೀಡಬೇಕು. ಒನ್ ಟೈನ್ ಪಾಸ್ವರ್ಡ್ (ಒಟಿಪಿ) ಬಳಸಿಯೇ ವಹಿವಾಟು ಮಾಡುವುದು ಹೆಚ್ಚು ಸುರಕ್ಷಿತ. ವರ್ಚುವಲ್ ಕೀ ಬೋರ್ಡ್ ಬಳಸಿ ಮಾಹಿತಿ ಟೈಪ್ ಮಾಡುವುದು ಕೂಡ ಸುರಕ್ಷತಾ ವಿಧಾನ ಅನುಸರಿಸುವ ಮಾರ್ಗ.
ಸಾರ್ವಜನಿಕ ಕಂಪ್ಯೂಟರ್ಗಳು/ವೈ-ಫೈ ನೆಟ್ವರ್ಕ್ಗಳನ್ನು ಬಳಸಬೇಡಿ
ಆನ್ಲೈನ್ ವಹಿವಾಟುಗಳನ್ನು ಮಾಡುವಾಗ ಸಾರ್ವಜನಿಕ ಸಾಧನಗಳು ಅಥವಾ ವೈ- ಫೈ ನೆಟ್ವರ್ಕ್ಗಳನ್ನು ಬಳಸದಿರುವುದು ಉತ್ತಮ. ಏಕೆಂದರೆ ಅವುಗಳ ಮೇಲೆ ಸೈಬರ್ ದಾಳಿ, ಕಳುವು ಮತ್ತು ಇತರ ವಂಚನೆ ಚಟುವಟಿಕೆಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜತೆಗೆ ದೃಢೀಕೃತವಾದ ಮತ್ತು ಗೌರವಾನ್ವಿತ ವೆಬ್ಸೈಟ್ಗಳನ್ನೇ ಬಳಸುವುದು ಸಹ ಅಷ್ಟೇ ಮುಖ್ಯ. ಆನ್ಲೈನ್ ವಹಿವಾಟುಗಳಿಗೆ ನಂಬಿಕಸ್ತ ವೆಬ್ಸೈಟ್ಗಳು ಉನ್ನತ ಮಟ್ಟದ ಸುರಕ್ಷತೆಯನ್ನು ಒದಗಿಸುತ್ತವೆ.
ವಂಚಕ ಅಪ್ಲಿಕೇಷನ್ಗಳಿಂದ ಎಚ್ಚರಿಕೆಯಿಂದ ಇರಬೇಕು
ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್ಗಳಲ್ಲಿ ನಂಬಿಕೆಗೆ ಅರ್ಹವಲ್ಲದ ಅಪ್ಲಿಕೇಕ್ಷನ್ಗಳನ್ನು ಹಲವಾರು ಇರುತ್ತವೆ. ಅದೃಷ್ಟ ಏನೆಂದರೆ, ನೆಗೆಟಿವ್ ರಿವ್ಯೂವ್ ಮೂಲಕ ಅವುಗಳನ್ನು ಪತ್ತೆ ಹಚ್ಚಬಹುದು. ಕಡಿಮೆ ಸಂಖ್ಯೆಯ ಡೌನ್ಲೋಡ್ಗಳು ಮತ್ತು ವೆರಿಫೈಡ್ ಬ್ಯಾಡ್ಜ್ ಇಲ್ಲದಿರುವುದು ಸಹ ಅಂಥ ಆ್ಯಪ್ಗಳಿಂದ ದೂರ ಇರುವುದಕ್ಕೆ ಎಚ್ಚರಿಕೆ ಎಂದು ಭಾವಿಸಬೇಕಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಅಥವಾ ಮೊಬೈಲ್ ವ್ಯಾಲೆಟ್ ಅಪ್ಲಿಕೇಷನ್ ಆಗಿದ್ದರೂ ಅದು ನಂಬಿಕೆಗೆ ಅರ್ಹವಾಗಿಯೇ ಇರಬೇಕು. ಇನ್ಸ್ಟಾಲ್ ಮಾಡಿಕೊಳ್ಳುವ ವೇಳೆ ಆ್ಯಪ್ನಿಂದ ಕ್ಯಾಮೆರಾ, ಫೋನ್ ಕಾಂಟ್ಯಾಕ್ಟ್ಗಳು, ಎಸ್ಸೆಮ್ಮೆಸ್ ಓದುವುದಕ್ಕೆ ಸೇರಿ ಮುಂತಾದವುಕ್ಕೆ ಅನುಮತಿ ಕೇಳಿದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು ಅಥವಾ ಬಳಸುವುದಕ್ಕೆ ಅವಕಾಶ ನಿರಾಕರಿಸಬೇಕು.
ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು