ಬೆಂಗಳೂರು: ಕರ್ನಾಟಕದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಡ್ಡಾಯವಾಗಿ ಧ್ಯಾನದ ಅಭ್ಯಾಸ ಮಾಡಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಸೂಚಿಸಿದ್ದಾರೆ. ಮಕ್ಕಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನ (Meditation) ಮಾಡಿಸುವುದು ಅಗತ್ಯವಾಗಿರುತ್ತದೆ ಎಂದು ಸಚಿವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಧ್ಯಾನದ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಈಗಾಗಲೇ ಧ್ಯಾನವನ್ನು ಮಾಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕೋರಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ‘ವಿದ್ಯಾರ್ಥಿಗಳಿಗೆ ಪ್ರತಿದಿನ ನಿಯಮಿತವಾಗಿ ಧ್ಯಾನ ಮಾಡಿಸುವುದು ಸೂಕ್ತವಾಗಿರುತ್ತದೆ. ರಾಜ್ಯದಲ್ಲಿನ ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ’ ಎಂದು ಅವರು ಸುತ್ತೋಲೆಯಲ್ಲಿ ಹೇಳಿದ್ದಾರೆ.
ಇದು ಯೋಗ, ಪ್ರಾಣಾಯಾಮವನ್ನು ಒಳಗೊಂಡಿರುತ್ತದೆಯೇ ಅಥವಾ ಕೇವಲ ಧ್ಯಾನ ಮಾತ್ರವೇ ಎನ್ನುವ ಬಗ್ಗೆ ಸುತ್ತೋಲೆಯಲ್ಲಿ ಸ್ಪಷ್ಟ ಸೂಚನೆ ಇಲ್ಲ. ಬಹುಶಃ ಇದನ್ನು ಸ್ಥಳೀಯ ಮಟ್ಟದಲ್ಲಿ ನಿರ್ಧರಿಸಬಹುದು ಎಂದು ಹೇಳಲಾಗುತ್ತಿದೆ. ಧ್ಯಾನದಲ್ಲಿ ಹಲವು ರೀತಿಗಳಿದ್ದು ಶಿಕ್ಷಣ ಸಚಿವರು ಯಾವ ರೀತಿಯ ಧ್ಯಾನದ ಬಗ್ಗೆ ಹೇಳುತ್ತಿದ್ದಾರೆ ಎನ್ನುವ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ಶೀಘ್ರ ಸರ್ಕಾರಿ ಆದೇಶದಲ್ಲಿ ಸ್ಪಷ್ಟ ಮಾಹಿತಿ ಸಿಗಬಹುದು ಎಂದು ಹೇಳಲಾಗುತ್ತಿದೆ.
ಅರೇಬಿಕ್ ಶಾಲೆಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಶಿಕ್ಷಣ ಸಚಿವ ಸೂಚನೆ
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200 ಅರೇಬಿಕ್ ಶಾಲೆಗಳ (ಮದರಸಾ) ಸ್ಥಿತಿಗತಿ ಹಾಗೂ ಕಾರ್ಯನಿರ್ವಹಣೆ ಕುರಿತು ಶೀಘ್ರ ವರದಿ ಸಲ್ಲಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದಾರೆ. ಈ ಕುರಿತು ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಅರೇಬಿಕ್ ಶಾಲೆಗಳನ್ನು ನಿಯಮಗಳಿಗೆ ಅನುಸಾರವಾಗಿ ನಡೆಸುತ್ತಿಲ್ಲ. ಭಾಷೆ ಮತ್ತು ವಿಜ್ಞಾನದ ಕಲಿಕೆಯೂ ಸಮರ್ಪಕ ರೀತಿಯಲ್ಲಿ ಇಲ್ಲ. ಈ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಗ್ರವಾಗಿ ಪರಿಶೀಲಿಸುವಂತೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ಮದರಸಾಗಳಲ್ಲಿ ಕೆಲವೇ ಶಾಲೆಗಳು ಇಲಾಖೆಗಳು ಸೂಚಿಸಿರುವ ಪಠ್ಯಕ್ರಮ ಅನುಸರಿಸುತ್ತಿವೆ. ಆದರೆ ಬಹುತೇಕ ಶಾಲೆಗಳು ಶಿಕ್ಷಣ ಇಲಾಖೆ ಸೂಚನೆಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಗ್ರ ಪರಿಶೀಲನೆಯ ನಂತರ ವಾಸ್ತವ ಚಿತ್ರಣ ಏನೆಂದು ಸ್ಪಷ್ಟವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಕರ್ನಾಟಕದಲ್ಲಿ 106 ಅನುದಾನಿತ ಹಾಗೂ 80 ಅನುದಾನರಹಿತ ಅರೇಬಿಕ್ ಶಾಲೆಗಳಿವೆ. ಈ ಶಾಲೆಗಳಲ್ಲಿ ಎಷ್ಟರಮಟ್ಟಿಗೆ ಇಲಾಖೆಯ ಸೂಚನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎನ್ನುವುದನ್ನು ಸಮೀಕ್ಷೆಯ ವೇಳೆ ಪರಿಶೀಲಿಸಲಾಗುವುದು’ ಎಂದು ಅವರು ವಿವರಿಸಿದ್ದಾರೆ.
‘ಕರ್ನಾಟಕದ ಹಲವು ಅರೇಬಿಕ್ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್ನಂಥ ಭಾಷೆಗಳು ಹಾಗೂ ಗಣಿತ-ವಿಜ್ಞಾನದ ಬೋಧನೆ-ಕಲಿಕೆ ಸಮರ್ಪಕ ರೀತಿಯಲ್ಲಿ ಇಲ್ಲ ಎಂಬ ಅನುಮಾನವನ್ನು ಹಲವು ವ್ಯಕ್ತಪಡಿಸಿದ್ದಾರೆ. ಅರೇಬಿಕ್ ಶಾಲೆಗಳಿಗೆ ಪ್ರತಿವರ್ಷ ಸುಮಾರು 27 ಸಾವಿರ ಮಕ್ಕಳು ದಾಖಲಾಗುತ್ತಾರೆ. ದಾಖಲೆಗಳಲ್ಲಿ ಕಾಣಿಸುವ ಈ ದಾಖಲಾತಿ ಸಂಖ್ಯೆಗೂ, ವಾಸ್ತವವಾಗಿ ಶಾಲೆಗಳಿಗೆ ಹಾಜರಾಗುವ ಮಕ್ಕಳ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಶಿಕ್ಷಣವು ಎಲ್ಲ ಮಕ್ಕಳ ಹಕ್ಕಾಗಿದೆ. ಧರ್ಮದ ಕಾರಣಕ್ಕೆ ಯಾವುದೇ ಮಗು ಉತ್ತಮ ಶಿಕ್ಷಣದಿಂದ ವಂಚಿತವಾಗಬಾರದು’ ಎಂದು ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
Published On - 11:55 am, Thu, 3 November 22