ಬೆಂಗಳೂರು: ಪರೀಕ್ಷೆ ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟ. ಉನ್ನತ ಶಿಕ್ಷಣಕ್ಕೆ ಟರ್ನಿಂಗ್ ಪಾಯಿಂಟ್. ಇದೀಗ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ (Karnataka 2nd PUC Exams) ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಕೊಂಚ ಢವಢವ ಶುರುವಾಗಿದೆ. ಅದ್ಯಾವುದನ್ನೂ ಟೆನ್ಷನ್ ಮಾಡಿಕೊಳ್ಳದೇ ವಿದ್ಯಾರ್ಥಿಗಳು ಕೂಲ್ ಆಗಿ ಪರೀಕ್ಷೆ ಬರೆಯಿರಿ. ಹಾಲ್ ಟಿಕೆಟ್, ಪೆನ್, ಪೆನ್ಸಿಲ್ ಇತ್ಯಾದಿ ಅವಶ್ಯ ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಹೋಗಿ, ಆಲ್ ದಿ ಬೆಸ್ಟ್. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿದೆ. ಆದರೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಕಡ್ಡಾಯವಾಗಿ ಪಾಲಿಸಬೇಕಾಗಿದ್ದು, ಹಿಜಾಬ್ ಧರಿಸಿ ಬಂದರೆ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಕಳೆದ ವರ್ಷದ ನಿಯಮವೇ ಈ ಬಾರಿಯೂ ಜಾರಿಯಲ್ಲಿರಲಿದೆ. ರಾಜ್ಯದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಒಟ್ಟು 5,716 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ಬಾರಿ 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ. ಕಳೆದ ವರ್ಷದ ನಿಯಮ ಈ ಬಾರಿಯೂ ಮುಂದುವರಿಯಲಿದ್ದು, ಒಂದೊಮ್ಮೆ ಹಿಜಾಬ್ ಧರಿಸಿ ಬಂದರೆ ಅಂತಹ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಸಮವಸ್ತ್ರ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಕಳೆದ ವರ್ಷ ಹಿಜಾಬ್ಗೆ ಪಟ್ಟು ಹಿಡಿದಿದ್ದ 6 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿರಲಿಲ್ಲ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ 1109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತದಳ, 525 ತಾಲೂಕು ಜಾಗೃತ ದಳ ಹಾಗೂ 2373 ವಿಶೇಷ ಜಾಗೃತದಳ ನಿಯೋಜನೆ ಮಾಡಲಾಗುತ್ತದೆ.
ಇದನ್ನೂ ಓದಿ: 2nd PUC Exam: ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಪ್ರಶ್ನೆಪತ್ರಿಕೆ ಮಾದರಿ ಬದಲಾವಣೆ, ಪರೀಕ್ಷೆ ಸರಳೀಕರಣ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ 20 ಅಂಕಗಳ ಬಹುಆಯ್ಕೆ ಪ್ರಶ್ನೆಗಳು ಇರಲಿವೆ. ಈ ಹಿಂದೆ 5 ಅಥವಾ 6 ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಈ ಬಾರಿ 20 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಇರಲಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಗ್ರೇಸ್ ಮಾರ್ಕ್ಸ್ಗೆ ಸಂಬಂಧಿಸಿಯೂ ತಿದ್ದುಪಡಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದರು. ಅಲ್ಲದೆ, ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳ ವಾರ್ಷಿಕ ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದರೆ ಚಿಂತಿಸಬೇಕಿಲ್ಲ. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಉಚಿತವಾಗಿ ಪ್ರಯಾಣ ಮಾಡಬಹುದು.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 am, Thu, 9 March 23