ಬೆಂಗಳೂರು: ಬಿಎಲ್ ಸಂತೋಷ್ (BL Santhosh) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದ ಪ್ರಕರಣ ಸಂಬಂಧ ಮೈಸೂರು ನಗರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಲಿಂಗಾಯತರ ವಿರುದ್ಧ ಸಂತೋಷ್ ಹೇಳಿಕೆ ನೀಡಿದ ರೀತಿ ಸುದ್ದಿ ಪತ್ರಿಕಾ ವರದಿ ಸೃಷ್ಟಿ ಮಾಡಿದ್ದ ದಿಲೀಪ್ ಗೌಡ ಬಂಧಿತ ಆರೋಪಿಯಾಗಿದ್ದಾನೆ. ವೈರಲ್ ಪೋಸ್ಟ್ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು ದಿಲೀಪ್ನನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಬೆಂಗಳೂರಿನ ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಬೈರಪ್ಪ ಹರೀಶ್ ಕುಮಾರ್, ಹೇಮಂತ್ ಕುಮಾರ್, ದಿನೇಶ್ ಅಮಿನ್ ಮಟ್ಟು, ಬಿಂದು ಗೌಡ, ದಿಲೀಪ್ ಗೌಡ ವಿರುದ್ಧ ಬಿಜೆಪಿ ಕಾನೂನು ಘಟಕದ ಯಶವಂತ ಅವರು ದೂರು ನೀಡಿದ್ದಾರೆ.
ವೈರಲ್ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ ಬಿಎಲ್ ಸಂತೋಷ್, ಇದು ಫೋಟೋಶಾಪ್ನಲ್ಲಿ ತಿರುಚಲಾದ ವರದಿ ಎಂದು ಹೇಳಿದ್ದಾರೆ. ಕಾಂಗ್ರೆಸ್ಗೆ ಚರ್ಚಿಸಲು ಯಾವುದೇ ವಿಚಾರಗಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಯಿಂದ ದಿಕ್ಕೆಟ್ಟ ಕಾಂಗ್ರೆಸ್ ನಾಯಕರಲ್ಲಿ ವಿಚಾರಗಳಿಗೂ ಕೊರತೆಯಿದೆ. ಕಾಂಗ್ರೆಸ್ನ ನಾಯಕರು ಮತ್ತು ಉಸ್ತುವಾರಿಗಳು ಫೋಟೋಶಾಪ್ ಕೂಲಿಗಳಾಗಿ ಹೋಗಿದ್ದಾರೆ. ಅವರ ಟ್ರೋಲ್ ಸೈನ್ಯ ಸಹ ಅಂತಹದ್ದೇ ನಕಾರಾತ್ಮಕ ಮನಸ್ಥಿತಿಯನ್ನು ಹೊಂದಿದೆ ಎಂದು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಜಾಹೀರಾತು: ಡಿಕೆ ಶಿವಕುಮಾರ್ಗೆ ನೋಟಿಸ್
ವೈರಲ್ ಪೋಸ್ಟ್ನಲ್ಲೇನಿದೆ?
ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ರಾಜ್ಯ, ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಬಿಎಲ್ ಸಂತೋಷ್ ಹೇಳಿಕೆ ಎಂದು ಹೇಳಲಾಗಿರುವ ಪತ್ರಿಕಾ ವರದಿ ವೈರಲ್ ಆಗುತ್ತಿದೆ. “ಬಿಜೆಪಿ ನಂಬಿಕೆ ಇಟ್ಟಿರುವುದು ಹಿಂದುತ್ವದ ಆಧಾರದ ಮೇಲೆ ಹೊರತು ಯಾವುದೊ ನಾಯಕನ ಜಾತಿಯ ಮೇಲಲ್ಲ. ಕಾರ್ಯಕರ್ತರು ಹಿಂದುತ್ವದ ಮೇಲೆ ನಂಬಿಕೆ ಇಡಬೇಕೇ ಹೊರತು ಯಾವುದೋ ವ್ಯಕ್ತಿಯ ಮೇಲಲ್ಲ” ಎಂದು ಹೇಳಿದ್ದಾಗಿ ವರಿದಿಯಲ್ಲಿದೆ. ರಾಜ್ಯದಲ್ಲಿ ಲಿಂಗಾಯತರ ಮತಗಳು ಕೈತಪ್ಪಿ ಹೋದರೆ ಪಕ್ಷಕ್ಕೆ ಭಾರಿ ಹೊಡೆತ ಎಂದು ಸಭೆಯಲ್ಲಿ ದನಿ ಎತ್ತಿದ ಕಾರ್ಯಕರ್ತರ ಮಾತಿಗೆ ಸಿಡಿಮಿಡಿಗೊಂಡು ಉತ್ತರಿಸಿ ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂದು ಹೇಳಿದ್ದಾಗಿ ವರದಿಯಲ್ಲಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Sat, 6 May 23