ಮಧ್ಯಪ್ರದೇಶ ವಿಧಾನಸಭಾ ಚುನಾವಣಾ 2023 ಪ್ರಚಾರ ಅಂತಿಮ ಹಂತವನ್ನು ತಲುಪಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರ ಬುಧವಾರ ಅಂತ್ಯಗೊಳ್ಳಲಿದ್ದು, ಇದೇ ತಿಂಗಳ 17 ರಂದು ಚುನಾವಣೆ ನಡೆಯಲಿದೆ. ಅದರಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದೋರ್‌ನಲ್ಲಿ ಬೃಹತ್ ರೋಡ್‌ಶೋ ನಡೆಸಿದರು.
ಈ ಸಂದರ್ಭದಲ್ಲಿ ಇಂದೋರ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಸ್ಥಳೀಯರು ಮೋದಿ ಮೇಲೆ ಹೂಮಳೆಗೈದರು. ಮೋದಿಯವರ ರೋಡ್ ಶೋ ಕಿಲೋಮೀಟರ್ ಗಟ್ಟಲೆ ಸಾಗಿತು. ದಾರಿಯುದ್ದಕ್ಕೂ ಮೋದಿ ಮೋದಿ ಎಂಬ ಜಯಘೋಷಗಳು ಮೊಳಗಿದವು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರಧಾನಿ ತಿರುಗೇಟು ನೀಡಿದರು. ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಬಿರುಗಾಳಿ ಬೀಸಲಿದ್ದು, 150 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಅವರು, ಕಾಂಗ್ರೆಸ್ ಪಕ್ಷ ತನ್ನ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡುತ್ತಿದೆಯೇ ಹೊರತು ಜನರ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿ ಹೂಡಿಕೆದಾರರನ್ನು ಓಡಿಸಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಮಧ್ಯಪ್ರದೇಶ ಚುನಾವಣೆಯಲ್ಲಿ ಈ ಬಾರಿ ದಾಖಲೆಗಳು ಸೃಷ್ಟಿಯಾಗಲಿವೆ ಅಂತಾನೂ ಹೇಳಿದರು. ಬಿಜೆಪಿ ಮೇಲೆ ಜನರ ನಂಬಿಕೆ ಅಪಾರವಾಗಿದ್ದು, ಅವರ ಆಶೀರ್ವಾದವಿದೆ. ದೆಹಲಿಯಲ್ಲಿ ಕುಳಿತು ಲೆಕ್ಕಾಚಾರ ಮಾಡುತ್ತಿರುವವರಿಗೆ (ಕಾಂಗ್ರೆಸ್ ನಾಯಕರು) ಇದು ಅರ್ಥವಾಗುತ್ತಿಲ್ಲ ಎಂದರು.
ಪ್ರಧಾನಿ ಮೋದಿಯವರ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಜನರು ಬೀದಿಗಿಳಿದಿದ್ದರು. ಸಣ್ಣ ಮಕ್ಕಳು ತಂದೆಯ ಹೆಗಲಮೇಲೇರಿ ಮೋದಿ ಅವರನ್ನು ನೋಡಿ ಸಂತೋಷಗೊಂಡರು. ರಸ್ತೆ ಇಕ್ಕೆಲಗಳಲ್ಲಿ ಮಾತ್ರವಲ್ಲದೆ ಕಟ್ಟಡದ ಮೇಲೆಲ್ಲಾ ಜನರು ನಿಂತು ನೆಚ್ಚಿನ ನಾಯಕನ ಮೇಲೆ ಹೂವನ್ನು ಸುರಿದರು.
ಮಧ್ಯಪ್ರದೇಶದ 230 ವಿಧಾನಸಭಾ ಸ್ಥಾನಗಳಿಗೆ ನ.17 ರಂದು ಮತದಾನ ನಡೆಯಲಿದೆ. ಒಂದೇ ಹಂತದಲ್ಲಿ ಈ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.