ನನ್ನ ಹೇಳೀಕೆ ತಿರುಚಿದ್ದೀರಿ: ಪವನ್ ಕಲ್ಯಾಣ್​ಗೆ ಪ್ರಕಾಶ್ ರೈ ತಿರುಗೇಟು

|

Updated on: Sep 24, 2024 | 6:13 PM

Prakash Raj-Pawan Kalyan: ಪ್ರಕಾಶ್ ರೈ ವಿರುದ್ಧ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಾಗಲೇ ನೋವಿನಲ್ಲಿರುವ ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡಬೇಡಿ ಎಂದಿದ್ದರು. ಪವನ್​ರ ಹೇಳಿಕೆಗೆ ಪ್ರಕಾಶ ರೈ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಹೇಳೀಕೆ ತಿರುಚಿದ್ದೀರಿ: ಪವನ್ ಕಲ್ಯಾಣ್​ಗೆ ಪ್ರಕಾಶ್ ರೈ ತಿರುಗೇಟು
Follow us on

ತಿರುಪತಿ ಲಡ್ಡು ಮಾಡಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿರುವ ಪ್ರಕರಣ ತೀವ್ರವಾಗಿ ಚರ್ಚೆಯಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಯಾರೇ ಆಗಲಿ ಶಿಕ್ಷೆಗೆ ಒಳಪಡುತ್ತಾರೆ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಪವನ್ ಕಲ್ಯಾಣ್, ‘ಸನಾತನ ಧರ್ಮ ರಕ್ಷಣಾ ಬೋರ್ಡ್’ ಅನ್ನು ರಾಷ್ಟ್ರಮಟ್ಟದಲ್ಲಿ ಸ್ಥಾಪನೆ ಮಾಡಬೇಕೆಂದು ಸಹ ಹೇಳಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಪ್ರಕಾಶ್ ರೈ, ‘ಆತಂಕವನ್ನು ಹೆಚ್ಚು ಮಾಡಬೇಡಿ, ದೇಶದಲ್ಲಿ ಈಗಿರುವ ಕೋಮು ಗಲಭೆ ಸಾಕು’ ಎಂದಿದ್ದರು.

ಇಂದು ಮಾಧ್ಯಮಗಳ ಬಳಿ ಇದೇ ವಿಷಯ ಮಾತನಾಡುತ್ತಾ, ಪ್ರಕಾಶ್ ರೈ ಹೆಸರು ಉಲ್ಲೇಖಿಸಿದ ಪವನ್ ಕಲ್ಯಾಣ್, ‘ಪ್ರಕಾಶ್ ರೈ ಅವರೇ ನೀವು ಪಾಠ ಕಲಿಯಬೇಕಿದೆ. ನಿಮ್ಮ ಬಗ್ಗೆ ಗೌರವ ಇದೆ. ಆದರೆ ಪ್ರಕಾಶ್ ರೈ ಮಾತ್ರವಲ್ಲ ಜಾತ್ಯಾತೀತರು ಎಂದು ಹೇಳಿಕೊಳ್ಳುವ ಎಲ್ಲರೂ ಪಾಠ ಕಲಿಯಬೇಕಿದೆ. ಜಾತ್ಯಾತೀತತೆಯ ಹೆಸರಲ್ಲಿ ನೀವು ಹದ್ದುಗಳನ್ನು ಮೀರುತ್ತಿದ್ದೀರಿ. ನಾವು ತೀವ್ರ ನೋವಿನಲ್ಲಿದ್ದೀವಿ. ನಮ್ಮ ಭಾವನೆಗಳ ಬಗ್ಗೆ ಅಪಹಾಸ್ಯ ಮಾಡಬೇಡಿ. ಈಗಾಗಲೇ ನಾವು ತೀವ್ರ ನೋವಿನಲ್ಲಿದ್ದೇವೆ. ಇದು ತಮಾಷೆಯ ವಿಷಯ ಅಲ್ಲ. ಇದು ಸಾಕು, ಸನಾತನ ಧರ್ಮದ ಬಗ್ಗೆ ಮಾತನಾಡುವ ಮುಂಚೆ ಸಾವಿರ ಬಾರಿ ಯೋಚಿಸಿ, ಅಯ್ಯಪ್ಪ ಸ್ವಾಮಿಯ ಬಗ್ಗೆ ಮಾತನಾಡುತ್ತೀರಿ, ಗಣೇಶನ ಬಗ್ಗೆ ಜೋಕುಗಳು ಮಾಡುತ್ತೀರಿ. ಇದೇ ರೀತಿ ಇಸ್ಲಾಂ ಬಗ್ಗೆ ಮಾತನಾಡಬಲ್ಲಿರಾ? ಏಸು ಬಗ್ಗೆ ಮಾತನಾಡಬಲ್ಲಿರಾ?’ ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ:‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ, ‘ಪವನ್ ಕಲ್ಯಾಣ್ ಅವರೇ ಈಗಷ್ಟೆ ನಾನು ನಿಮ್ಮ ಪ್ರೆಸ್ ಮೀಟ್ ವಿಡಿಯೋ ನೋಡಿದೆ. ನಾನು ಹೇಳಿದ್ದೇನು? ನೀವು ಅದನ್ನು ಹೇಗೆ ಅಪಾರ್ಥ ಮಾಡಿಕೊಂಡು ತಿರುಚುತ್ತಿದ್ದೀರಿ. ನಾನೀಗ ಶೂಟಿಂಗ್​ಗಾಗಿ ವಿದೇಶಕ್ಕೆ ಬಂದಿದ್ದೀನಿ. 30ನೇ ತಾರೀಖಿನ ನಂತರ ಭಾರತಕ್ಕೆ ಬಂದು ನಿಮ್ಮ ಪ್ರತಿ ಮಾತಿಗೂ ಉತ್ತರ ಕೊಡುತ್ತೇನೆ. ಅಲ್ಲಿಯವರೆಗೆ ಸಾಧ್ಯವಾದರೆ ನಾನು ಮಾಡಿದ ಟ್ವೀಟ್ ಏನೆಂಬುದನ್ನು ದಯವಿಟ್ಟು ಇನ್ನೊಮ್ಮೆ ಗಮನಿಸಿ’ ಎಂದಿದ್ದಾರೆ ಪ್ರಕಾಶ್ ರೈ.

ಪವನ್ ಕಲ್ಯಾಣ್​ರ ‘ಸನಾತನ ಧರ್ಮ ರಕ್ಷಣಾ ಬೋರ್ಡ್’ ಸ್ಥಾಪನೆಯ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದ ಪ್ರಕಾಶ್ ರೈ, ‘ನೀವು ಡಿಸಿಎಂ ಆಗಿರುವ ರಾಜ್ಯದಲ್ಲಿಯೇ ಈ ಘಟನೆ (ಲಡ್ಡು ವಿವಾದ) ನಡೆದಿದೆ. ಕೂಡಲೇ ತನಿಖೆ ನಡೆಸಿ, ಯಾರು ತಪ್ಪಿತಸ್ಥರೋ ಅವರ ವಿರುದ್ಧ ಕ್ರಮ ಜರುಗಿಸಿ. ಏಕೆ ನೀವು ಆತಂಕವನ್ನು ಹರಡುತ್ತಿದ್ದೀರಿ, ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡುತ್ತಿದ್ದೀರಿ? ಕೇಂದ್ರದಲ್ಲಿರುವ ನಿಮ್ಮ ಗೆಳೆಯರ ಕೃಪೆಯಿಂದ, ಈಗ ದೇಶದಲ್ಲಿ ಇರುವ ಕೋಮುವೈಷಮ್ಯವೇ ಸಾಕಾಗಿದೆ’ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ