
ಪತ್ನಿ ಆರತಿ ಅವರಿಂದ ವಿಚ್ಛೇದನ ಪಡೆಯುವವರೆಗೂ ಚಿತ್ರರಂಗದಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ತಮಿಳು ನಟ ಜಯಂ ರವಿ (Jayam Ravi), ಈಗ ಚಿತ್ರಪ್ರೇಮಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಿನಿಮಾ ಯೂನಿಮ್ಯಾಟಿಕ್ ಯೂನಿವರ್ಸ್ (LCU) ಸೇರುವ ಮೂಲಕ ಜಯಂ ರವಿ ಚಿತ್ರರಂಗಕ್ಕೆ ಭರ್ಜರಿ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಲೋಕೇಶ್ ಕನಕರಾಜ್ ಪ್ರಸ್ತುತಪಡಿಸುತ್ತಿರುವ ‘ಬೆಂಜ್’ (Benz) ಚಿತ್ರಕ್ಕೆ ಜಯಂ ರವಿ (ರವಿ ಮೋಹನ್) ಆಯ್ಕೆಯಾಗಿದ್ದಾರೆ.
ಜಯಂ ರವಿ ಅವರು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ನ ಭಾಗವಾಗಿರುವುದು ಈ ಮೂಲಕ ಖಚಿತವಾಗಿದೆ. ಸ್ವತಃ ನಿರ್ದೇಶಕ ಲೋಕೇಶ್ ಕನಕರಾಜ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ‘ನಮ್ಮ ಯೂನಿವರ್ಸ್ಗೆ ಸುಸ್ವಾಗತ ರವಿ ಸರ್’ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಕೂಡಲೇ ಜನರಿಗೆ ರವಿ ಮೋಹನ್ ಅವರ ವೈಯಕ್ತಿಕ ವಿಷಯ ನೆನಪಾಗಿದೆ.
ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಜಯಂ ರವಿ, ತಮ್ಮ ವೈಯಕ್ತಿಕ ಜೀವನದ ಏರುಪೇರುಗಳಿಂದ ಬೇಸತ್ತು ಕಠಿಣ ನಿರ್ಧಾರ ಪ್ರಕಟಿಸಿದ್ದರು. ‘ನನ್ನ ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ನನ್ನ ಯಾವುದೇ ಸಿನಿಮಾಗಳು ತೆರೆಗೆ ಬರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ನಟಿಸಲು ಸಾಧ್ಯವಾಗುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಎದುರಿಸುತ್ತಿರುವ ಸೈಬರ್ ಬುಲ್ಲಿಂಗ್ ಮತ್ತು ನಿಂದನೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನನ್ನ ವೈಯಕ್ತಿಕ ಜೀವನ ಸರಿಯಾಗುವವರೆಗೂ ಕ್ಯಾಮೆರಾ ಮುಂದೆ ನಿಲ್ಲಲ್ಲ’ ಎಂದು ಭಾವುಕರಾಗಿದ್ದರು.
ಅಲ್ಲದೇ, ‘ನನ್ನ ನಿರ್ಧಾರದಿಂದ ಯಾರಿಗೂ ತೊಂದರೆಯಾಗಬಾರದು. ನಿರ್ಮಾಪಕರಿಂದ ಪಡೆದ ಹಣವನ್ನು ಹಿಂತಿರುಗಿಸಿಯಾದರೂ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ’ ಎಂದಿದ್ದರು. ಆದರೆ ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಲೋಕೇಶ್ ಕನಕರಾಜ್ ಅವರಂತಹ ದೊಡ್ಡ ನಿರ್ದೇಶಕನ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ರವಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಈ ನಡುವೆ ಜಯಂ ರವಿ ಅವರೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಸಂಬಂಧದ ವದಂತಿಗಳು ಇತ್ತೀಚೆಗೆ ಜೋರಾಗಿದ್ದವು. 2025ರಲ್ಲಿ ಇಬ್ಬರೂ ಒಂದೇ ರೀತಿಯ ಉಡುಪು ಧರಿಸಿ ಮದುವೆಯೊಂದರಲ್ಲಿ ಭಾಗವಹಿಸಿದ್ದರು. ಆದರೆ ಇತ್ತೀಚೆಗಷ್ಟೇ ಕೆನಿಶಾ, ‘ನಾನು ಈ ಕಥೆಯೊಳಗೆ ಪ್ರೀತಿಯಿಂದ ಬಂದೆ, ಆದರೆ ಈಗ ಮೌನವಾಗಿ ಹೊರನಡೆಯುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಜಯಂ ರವಿ ಜೊತೆಗಿನ ಬ್ರೇಕ್ಅಪ್ ಮುನ್ಸೂಚನೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.