ಈ ಬಾರಿ ಬೇಸಿಗೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿಗಳಿಗಿಲ್ಲ ನೀರಿನ ತೊಂದರೆ

| Updated By: Skanda

Updated on: Mar 11, 2021 | 6:44 PM

ನಿತ್ಯ ಒಂದೂವರೆ ಲಕ್ಷ ನೀರು ಅವಶ್ಯಕತೆ ಇದ್ದು, ಉದ್ಯಾನವನದ 11 ಕೊಳವೆ ಬಾವಿಗಳಿಂದ ಅಗತ್ಯ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಈ ಬಾರಿ ಉತ್ತಮವಾಗಿ ಮಳೆಯಾದ್ದರಿಂದ ಉದ್ಯಾನವನದ ವ್ಯಾಪ್ತಿಯ ಕೆರೆಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದು ಸದ್ಯ ನೀರಿನ ಹಾಹಾಕಾರ ಇಲ್ಲ.

ಈ ಬಾರಿ ಬೇಸಿಗೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿಗಳಿಗಿಲ್ಲ ನೀರಿನ ತೊಂದರೆ
ನೀರಿನಲ್ಲಿ ಆಟವಾಡುತ್ತಿರುವ ಆನೆಗಳು
Follow us on

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನ ದೇಶದಲ್ಲೇ ಪ್ರಖ್ಯಾತಿ ಗಳಿಸಿದೆ. ದೇಶ ವಿದೇಶ ಸೇರಿದಂತೆ ಲಕ್ಷಾಂತರ ಮಂದಿ ಪ್ರವಾಸಿಗರು ಬನ್ನೇರುಘಟ್ಟಕ್ಕೆ ಭೇಟಿ ನೀಡುತ್ತಾರೆ. ಅಪರೂಪದ ವನ್ಯಜೀವಿ ಸಂಕುಲವನ್ನು ಹತ್ತಿರದಿಂದ ಕಂಡು ಖುಷಿಪಡುತ್ತಾರೆ. ಇಂತಹ ಜೀವ ಸಂಕುಲ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಿಸುತ್ತಿತ್ತು. ಆದರೆ ಈ ಬಾರಿ ಅಧಿಕಾರಿಗಳ ಮುಂಜಾಗ್ರತಾ ಕ್ರಮಗಳಿಂದ ಬೇಸಿಗೆಯಲ್ಲಿ ನೀರಿಗೆ ಯಾವುದೇ ಬರ ಕಂಡುಬರುತ್ತಿಲ್ಲ.

ಬೆಂಗಳೂರು ನಗರಕ್ಕೆ ಅಣತಿ ದೂರದಲ್ಲಿರುವ ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುವ ಏಕೈಕ ಪ್ರವಾಸಿ ತಾಣ ಬನ್ನೇರುಘಟ್ಟ ಜೈವಿಕ ಉದ್ಯಾನವನ. ಸುಮಾರು 160ಕ್ಕೂ ಹೆಚ್ಚು ವಿವಿಧ ಪ್ರಭೇದದ ವನ್ಯಜೀವಿಗಳನ್ನು ಒಳಗೊಂಡಿರುವ ಬನ್ನೇರುಘಟ್ಟ ಜೈವಿಕ ಉದ್ಯಾವನದಲ್ಲಿ ಬೇಸಿಗೆ ಬಂತು ಎಂದರೆ ನೀರಿಗೆ ಹಾಹಾಕಾರ ಉಂಟಾಗುತ್ತಿತ್ತು. ಉದ್ಯಾನವನದಲ್ಲಿ ಹೆಚ್ಚು ನೀರಿನ ಅವಶ್ಯಕತೆ ಇರುವ ನೀರು ಕುದುರೆ, ಮೊಸಳೆ, ಬಾತುಕೋಳಿ, ನೀರುಕೋಳಿ ಮತ್ತು ಆನೆಗಳು ನೀರಿನ ಬರ ಎದುರಿಸುತ್ತಿದ್ದವು. ಆದರೆ ಈ ಬಾರಿ ಉದ್ಯಾವನದ ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಬಿರು ಬೇಸಿಗೆಯಲ್ಲೂ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ.

ನಿತ್ಯ ಒಂದೂವರೆ ಲಕ್ಷ ನೀರು ಅವಶ್ಯಕತೆ ಇದ್ದು, ಉದ್ಯಾನವನದ 11 ಕೊಳವೆ ಬಾವಿಗಳಿಂದ ಅಗತ್ಯ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಈ ಬಾರಿ ಉತ್ತಮವಾಗಿ ಮಳೆಯಾದ್ದರಿಂದ ಉದ್ಯಾನವನದ ವ್ಯಾಪ್ತಿಯ ಕೆರೆಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿದೆ. ಈ ಕಾರಣದಿಂದಾಗಿ ಸದ್ಯ ನೀರಿನ ಹಾಹಾಕಾರ ಇಲ್ಲ. ಬೆಂಕಿ ಅವಘಡದಂತಹ ತುರ್ತು ಸಂದರ್ಭಗಳಲ್ಲಿನ ಕಾರ್ಯಾಚರಣೆಗೆ ನಾಲ್ಕು ಟ್ಯಾಂಕರ್​ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಉದ್ಯಾನವನದ ಪ್ರಾಣಿಗಳಿಗೆ ಸಮರ್ಪಕ ನೀರು ಸರಬರಾಜಿಗೂ ಬಳಕೆ ಮಾಡಲಾಗುತ್ತದೆ ಎಂದು ಉದ್ಯಾನವನದ ಸಹಾಯಕ ನಿರ್ದೇಶಕ ಡಾ.ಕೆ.ಎಸ್.ಉಮಾಶಂಕರ್ ತಿಳಿಸಿದ್ದಾರೆ.

ನೀರಿನಲ್ಲಿ ಮಲಗಿರುವ ಪ್ರಾಣಿಗಳು

ಜಿಂಕೆಗಳ ಗುಂಪು

ಹಕ್ಕಿಗೆ ನೀರು ಕೊಡಲಾಗುತ್ತಿದೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದ್ದು, ಉಳಿದ ಪ್ರಾಣಿಗಳಿಗೆ ಸಮರ್ಪಕವಾಗಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಕೆಲವು ಕಡೆ ನೀರು ಬೇರೆ ಬಣ್ಣಕ್ಕೆ ತಿರುಗಿದ್ದು, ಸ್ವಚ್ಚತೆ ಬಗ್ಗೆ ಸ್ವಲ್ಪ ಗಮನ ಕೊಡಬೇಕಾಗಿದೆ. ಜೊತೆಗೆ ಬಿಸಿಲ ಬೇಗೆಯಿಂದ ಪ್ರಾಣಿಗಳನ್ನು ಪಾರು ಮಾಡಲು ಅಗತ್ಯ ವ್ಯವಸ್ಥೆ ಸಹ ಕಲ್ಪಿಸಿದ್ದಾರೆ. ಬೇಸಿಗೆಯಿಂದಾಗಿ ಮರ ಗಿಡಗಳಲ್ಲಿ ಎಲೆಗಳು ಉದುರಿದ್ದು, ಹಸಿರು ಮಾಯವಾಗಿದೆ. ಉಳಿದಂತೆ ಬನ್ನೇರುಘಟ್ಟ ಜೈವಿಕ ಉದ್ಯಾವನ ಪ್ರವಾಸಿಗರನ್ನು ರಂಜಿಸುತ್ತದೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.

ಇದನ್ನೂ ಓದಿ
ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸೀಮಂತ: ಪ್ರಾಣಿ ಪ್ರೀತಿ ಮೆರೆದ ಚಿತ್ರದುರ್ಗ ಕುಟುಂಬ

ಉಡುಪಿಯಲ್ಲೊಂದು ಚಿಕ್ಕ ಪ್ರಾಣಿ ಸಂಗ್ರಹಾಲಯ: ಮಾಜಿ ಸೈನಿಕನ ಮನೆಯಲ್ಲಿದೆ ಅಪರೂಪ ತಳಿಯ ಶ್ವಾನಗಳು