ಬಳ್ಳಾರಿ: ಖಾಸಗಿ ಕಂಪನಿಗಳದ್ದು ಏನಿದ್ರೂ ಲಾಭದ ಲೆಕ್ಕಾಚಾರ. ಏನಾದ್ರೂ ಲಾಭವಿದ್ರೆ ಮಾತ್ರ ಮುಂದುವರಿತಾರೇ. ಇನ್ನು ಸರ್ಕಾರಿ ಅಧಿಕಾರಿಗಳದ್ದೋ ನಿದ್ರಾಚಾರ. ಪರಿಣಾಮ ಅವಕಾಶವಾದಿ ಖಾಸಗಿ ಕಂಪನಿಗಳು ಮತ್ತು ನಿರ್ಲಕ್ಷ್ಯದ ಸರ್ಕಾರಿ ಅಧಿಕಾರಿಗಳ ನಡುವೆ ಸಿಲುಕಿದ ಬಳ್ಳಾರಿಯ ಬಡವರ ಗೋಳು ಮಾತ್ರ ಹೇಳತೀರದ್ದು.
ಹೌದು, 2009ರಲ್ಲಿ ರಾಜ್ಯದಲ್ಲಿ ಕಂಡು ಕೇಳದಂಥ ಪ್ರವಾಹಕ್ಕೆ ಇಡೀ ಉತ್ತರ ಕರ್ನಾಟಕವೇ ತತ್ತರಿಸಿ ಹೋಗಿತ್ತು. ಗ್ರಾಮಕ್ಕೆ ಗ್ರಾಮಗಳೇ ಕೊಚ್ಚಿ ಹೋಗಿದ್ದವು. ಗಣಿನಾಡು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗ್ರಾಮಗಳಲ್ಲಂತೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಪರಿಣಾಮ ಆಗಿನ ಸರ್ಕಾರ ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಯ್ತು. ಈ ವೇಳೆ ಹೊಸದಾಗಿ ಮನೆಗಳ ನಿರ್ಮಾಣ ಮಾಡಿಕೊಡಲು ಗಣಿ ಮಾಲೀಕರು ಮುಂದಾದ್ರು. ಆದ್ರೆ ಗಣಿಗಾರಿಕೆ ಸ್ಥಗಿತವಾಗಿದ್ದೇ ತಡ, ಗಣಿಮಾಲೀಕರು ಮನೆ ನಿರ್ಮಾಣ ಕಾರ್ಯವನ್ನ ಅರ್ಧಕ್ಕೆ ಕೈ ಬಿಟ್ರು. ಇತ್ತ ಸರ್ಕಾರ ಕೂಡ ಸಂತ್ರಸ್ತರನ್ನ ಸಂಪೂರ್ಣ ಮರೆತುಬಿಟ್ಟಿತು.
2009ರಲ್ಲಿ ಹಚ್ಚೊಳ್ಳಿ ಗ್ರಾಮ ಮುಳುಗಡೆ
2009 ರಲ್ಲಿ ಪ್ರವಾಹದಿಂದ ಹಚ್ಚೊಳ್ಳಿ ಗ್ರಾಮ ಮುಳುಗಡೆಯಾಗಿತ್ತು. ಆಗಿನ ಸರ್ಕಾರ ಈ ಗ್ರಾಮವನ್ನ ಸ್ಥಳಾಂತರ ಮಾಡ್ಬೇಕು ಅನ್ನೋ ದೃಷ್ಟಿಯಿಂದ ಸ್ವಲ್ಪ ದೂರದಲ್ಲಿ ಹೊಸ ಗ್ರಾಮ ನಿರ್ಮಾಣ ಮಾಡಲು ಮುಂದಾಯ್ತು. ಈ ವೇಳೆ ನೆರೆ ಸಂತ್ರಸ್ತರ ನೆರವಿಗೆ ಗಣಿ ಮಾಲೀಕರು ಮುಂದಾದ್ರು. ಹಚ್ಚೊಳ್ಳಿ ಗ್ರಾಮದಲ್ಲಿ ಹೊಸ ಮನೆಗಳ ನಿರ್ಮಾಣದ ಜವಾಬ್ದಾರಿಯನ್ನ ಗಣಿ ಮಾಲೀಕರು ವಹಿಸಿಕೊಂಡ್ರು. ಮನೆಗಳ ನಿರ್ಮಾಣ ಕಾರ್ಯ ಕೂಡ ಆರಂಭವಾಯ್ತು. ಆದ್ರೆ 2011 ರಲ್ಲಿ ಗಣಿಗಾರಿಕೆ ಸ್ಥಗಿತವಾಗಿದ್ದ ಕಡ, ಗಣಿ ಮಾಲೀಕರು ಮನೆಗಳನ್ನ ನಿರ್ಮಾಣ ಮಾಡುವ ಕಾರ್ಯವನ್ನೂ ಅಷ್ಟಕ್ಕೆ ಕೈಬಿಟ್ಟರು.
ಸರ್ಕಾರ ಮನೆ ಕಟ್ಟಿಸಿದ್ರೂ, ಹಂಚಿಕೆ ಮಾಡದ ಅಧಿಕಾರಿಗಳು
ಆಗ ಜಿಲ್ಲಾಡಳಿತ ಸ್ಲಂ ಬೋರ್ಡ್ ಸಹಯೋಗದೊಂದಿಗೆ 598 ಮನೆಗಳನ್ನ ನಿರ್ಮಾಣ ಮಾಡಿತು. ಆದ್ರೆ ಈ ಗ್ರಾಮದ ಒಬ್ಬರೇ ಒಬ್ಬರು ಫಲಾನುಭವಿಗೆ ಈ ಮನೆಗಳನ್ನ ಹಂಚಿಕೆ ಮಾಡಿಲ್ಲ. ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿಲ್ಲ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇದುವರೆಗೆ ಮನೆಗಳು ಹಂಚಿಕೆ ಮಾಡಿಲ್ಲ. ಇದರಿಂದಾಗಿ ಇವತ್ತಿಗೂ ಗ್ರಾಮದ ಫಲಾನುಭವಿಗಳು ಸೂರಿಗಾಗಿ ಜಾತಕ ಪಕ್ಷದಂತೆ ಕಾಯುತ್ತಿದ್ದಾರೆ.
ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಮನೆಗಳು
ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಮನೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಯಾವುದೇ ರೀತಿ ವಾಸಕ್ಕೆ ಯೋಗ್ಯವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಚಾವಣಿ ಕುಸಿಯುವ ಮಟ್ಟಕ್ಕೆ ತಲುಪಿದೆ. ಮನೆಯ ಕಿಡಕಿಗಳು ಬಾಗಿಲುಗಳನ್ನ ಕಿತ್ತುಕೊಂಡು ಹೋಗಲಾಗಿದೆ. ಮನೆಗೆ ಹಾಕಿದ ಬಂಡೆಗಳನ್ನ ಕೂಡ ತೆಗೆದುಕೊಂಡು ಹೋಗಲಾಗಿದೆ. ಈಡೀ ಹೊಸ ಗ್ರಾಮದ ತುಂಬೆಲ್ಲಾ ಜಾಲಿ ಗಿಡಗಳು ಬೆಳೆದು ನಿಂತಿವೆ. ಜೊತೆಗೆ ಇದು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ರಸ್ತೆಗಳಿಲ್ಲ, ಚರಂಡಿಗಳಿಲ್ಲ. ಹೀಗಾಗಿ ಈ ಗ್ರಾಮದ ಕೆಲ ಜನರು ಕಳೆದ ಹತ್ತು ವರ್ಷಗಳಿಂದಲೂ ಶೆಡ್ ಗಳಲ್ಲಿಯೇ ವಾಸ ಮಾಡುತ್ತಿದ್ದಾರೆ.
ಕೋಟಿ ಖರ್ಚು ಮಾಡಿಯೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು
ಕೋಟಿ ಖರ್ಚು ಮಾಡಿ ಅರ್ಧಕ್ಕೆ ಬಿಟ್ಟ ಮನೆಗಳನ್ನ ನಂತರ ಸರ್ಕಾರ ಮತ್ತಷ್ಟು ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿದೆ. ಆದ್ರೆ ಸಮರ್ಪಕವಾಗಿ ಮನೆಗಳನ್ನ ನಿರ್ಮಿಸಿ, ಮೂಲಭೂತ ಸೌಕರ್ಯ ಕಲ್ಪಿಸಿ ಈ ವೇಳೆಗಾಗಲೇ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಆದ್ರೆ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ದಶಕ ಕಳೆದ್ರೂ ಮನೆಗಳು ಹಂಚಿಕೆಯಾಗದೇ ಪಾಳು ಬಿದ್ದಿವೆ. ಇದಕ್ಕೆ ಬಡವರ ದುರಂತ ಅಗಬೇಕಾ ಅಥವಾ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿ ಅನ್ನಬೇಕಾ ಅನ್ನೋದು ಸಂತ್ರಸ್ತರ ನೋವು.-ಬಸವರಾಜ ಹರನಹಳ್ಳಿ
Published On - 11:44 am, Wed, 24 June 20