ಜಮೀರ್ ಅಹ್ಮದ್ ಹೇಳಿಕೆ: ವಿಧಾನಸಭೆಯಲ್ಲಿ ವಿಪಕ್ಷ- ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ, ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ

| Updated By: Rakesh Nayak Manchi

Updated on: Dec 11, 2023 | 1:28 PM

ಕರ್ನಾಟಕದಲ್ಲಿ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೈದರಾಬಾದ್​ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿ ಕೆಂಡವಾಗಿರುವ ವಿಪಕ್ಷ ಬಿಜೆಪಿ ನಾಯಕರು ಇಂದು ಬೆಳಗಾವಿ ಅಧಿವೇಶನದಲ್ಲಿ ಸಚಿವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದು, ಆಡಳಿತ ಪಕ್ಷ ಹಾಗೂ ವಿಪಕ್ಷ ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಜಮೀರ್ ಅಹ್ಮದ್ ಹೇಳಿಕೆ: ವಿಧಾನಸಭೆಯಲ್ಲಿ ವಿಪಕ್ಷ- ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ, ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ
ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ
Follow us on

ವಿಧಾನಸಭೆ, ಡಿ.11: ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ವಿರುದ್ಧ ಕೆರಳಿ ಕೆಂಡವಾಗಿರುವ ವಿಪಕ್ಷ ಬಿಜೆಪಿ ನಾಯಕರು ಇಂದು ಬೆಳಗಾವಿ ಅಧಿವೇಶನದಲ್ಲಿ (Belagavi Session) ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆದಿದ್ದು, ಸ್ಪೀಕರ್ ಯುಟಿ ಖಾದರ್ (UT Khader) ಅವರು ಅಧಿವೇಶನವನ್ನು ಮುಂದೂಡಿ ಸಂಧಾನಸ ಸಭೆ ನಡೆಸಿದರು.

ವಿಧಾನಸಭೆಯಲ್ಲಿ ಗದ್ದಲ ಉಂಟಾದ ಹಿನ್ನೆಲೆ ಸ್ಪೀಕರ್ ಕಚೇರಿಯಲ್ಲಿ ಯುಟಿ ಖಾದರ್ ಅವರು ಸಂಧಾನ ಸಭೆ ನಡೆಸಿದರು. ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಅಶೋಕ್, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಅರಗ ಜ್ಞಾನೇಂದ್ರ ಮತ್ತಿತರರು ಭಾಗಿಯಾದರು.

ಸ್ಪೀಕರ್ ಸಂಧಾನ ಸಭೆಯಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಜಮೀರ್ ಅಹ್ಮದ್ ಖಾನ್ ವರ್ತನೆ ಗುರಿಯಾಗಿಸಿ ಬಿಜೆಪಿ ನಾಯಕರು ಪಶ್ನೆ ಮಾಡಿದರು. ಏನ್ರಿ ನಾವು ಕೈ ಕಟ್ಟಿ ನಿಲ್ಲಬೇಕಾ? ಅದು ಸ್ಪೀಕರ್ ಪೀಠ ಅಲ್ವಾ? ಏನಂದ್ರಿ ನೀವು? ಬಿಜೆಪಿಗರು ಕೈ ಕಟ್ಟಿ ನಿಲ್ಲಬೇಕು ಅಂತಾ ಚುನಾವಣಾ ಭಾಷಣದಲ್ಲಿ ಹೇಳುತ್ತೀರಾ? ಇದನ್ನ ನಾವು ಒಪ್ಪಿಕೊಳ್ಳಬೇಕಾ ಎಂದು ಮಲ್ಲೇಶ್ವರ ಶಾಸಕ ಸಿಎನ್ ಅಶ್ವತ್ ನಾರಾಯಣ್ ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ಇದನ್ನೂ ಓದಿ: Belagavi Session: ಇಂದಿನಿಂದ ಮತ್ತಷ್ಟು ಕಾವೇರಲಿದೆ ಬೆಳಗಾವಿ ಅಧಿವೇಶನ, ವಿಪಕ್ಷ ತಂತ್ರ, ತಿರುಗೇಟಿಗೆ ಸರ್ಕಾರ ಪ್ರತಿತಂತ್ರ

ಅಶ್ವಥ್ ನಾರಾಯಣ್​ಗೆ ಪ್ರತಿಯಾಗಿ ಜಮೀರ್ ಕೂಡ ಏರು ಧ್ವನಿಯಲ್ಲೇ ಪ್ರಶ್ನೆ ಮಾಡಿದರು. ನಾನೇನು ಸ್ಪೀಕರ್ ಸ್ಥಾನದ ಬಗ್ಗೆ ಅಗೌರವವಾಗಿ ಮಾತಾಡಿಲ್ಲ. ನಾನು ರಾಜಕೀಯ ಮಾಡುತ್ತಿಲ್ಲ. ನೀವು ರಾಜಕೀಯ ಮಾಡುತ್ತಿರುವುದು ಎಂದರು. ಈ ವೇಳೆ ಸಭೆಯಲ್ಲಿ ಗಲಾಟೆ ಇನ್ನಷ್ಟು ಜೋರಾಯಿತು. ಬಳಿಕ ಮಧ್ಯಪ್ರವೇಶಿಸಿದ ಸ್ಪೀಕರ್, ಉಭಯ ಪಕ್ಷದ ನಾಯಕರನ್ನ ಸಮಾಧಾನ ಪಡಿಸುತ್ತಿದ್ದಾರೆ.

ವಿಧಾನಸಭೆಯಲ್ಲಿ ಏನಾಯ್ತು?

ಪ್ರಶ್ನೋತ್ತರ ಕಲಾಪದ ವೇಳೆ ಹಡಗಲಿ ಶಾಸಕ ಕೃಷ್ಣಾ ನಾಯ್ಕ್ ಪ್ರಶ್ನೆಗೆ ಸಚಿವ ಜಮೀರ್ ಅಹಮದ್ ಖಾನ್ ಉತ್ತರಿಸಲು ಮುಂದಾದಾಗ ವಿಪಕ್ಷ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ತೆಲಂಗಾಣ ಚುನಾವಣಾ ಪ್ರಚಾರದ ವೇಳೆಯ ಹೇಳಿಕೆ ಪ್ರಸ್ತಾಪಿಸಿ ಸದನದಲ್ಲಿ ಉತ್ತರ ನೀಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ನಾವೇನು ಗುಲಾಮರಾ ಎಂದು ವಿಪಕ್ಷ ನಾಯಕ ಅಶೋಕ್ ಪ್ರಶ್ನಿಸಿದರು. ಸಚಿವ ಜಮೀರ್ ಅಹಮದ್ ಅವರನ್ನು ಸದನಕ್ಕೆ ಪ್ರವೇಶಿಸಲು ಬಿಟ್ಟದ್ದು ಯಾಕೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದರು. ಆಡಳಿತ ಮತ್ತು ವಿಪಕ್ಷದ ನಡುವೆ ತೀವ್ರ ಮಾತಿನ ಸಮರ ನಡೆಯಿತು.

ಗದ್ದಲದ ನಡುವೆ ಎದ್ದು ನಿಂತು ಮಾತಾಡಲು ಮುಂದಾದ ಜಮೀರ್ ಅಹಮದ್ ಅವರ ಕೈಯನ್ನು ಹಿಡಿದೆಳೆದು ಕೂರಿಸಿದ ಸಚಿವ ಶಿವಾನಂದ ಪಾಟೀಲ್, ಮಾತನಾಡದಂತೆ ಸೂಚಿಸಿದರು. ಮಾತಿನ ಸಮರ ನಡೆಯುತ್ತಿದ್ದರೂ ಜಮೀರ್ ಅಹಮದ್ ವಿಚಾರದಲ್ಲಿ ಜೆಡಿಎಸ್ ಸದಸ್ಯರು ಬಿಜೆಪಿ ಜೊತೆ ಕೈ ಜೋಡಿಸದೇ ಮೌನವಾಗಿ ಕುಳಿತಿದ್ದರು.

ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಲ್ಪಟ್ಟ ಬಳಿಕವೂ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಮುಂದುವರಿಯಿತು. ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು.

ಜಮೀರ್ ವಜಾಗೊಳಿಸುವಂತೆ ವಿಪಕ್ಷ ಬಿಜೆಪಿ ಪಟ್ಟು

ಸಚಿವ ಜಮೀರ್ ವಜಾಗೊಳಿಸುವಂತೆ ವಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದು, ವಿಧಾನಸಭೆಯ ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ನಡೆಸಿದರು. ಸದನದ ಬಾವಿಯಲ್ಲಿ ಜಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಯಿತು. ಇದರ ನಡುವೆ ತಮ್ಮ ಹೇಳಿಕೆಯನ್ನು ಜಮೀರ್ ಸಮರ್ಥಿಸಿಕೊಂಡರು. ಜಮೀರ್ ನೆರವಿಗೆ ಹೆಚ್.ಕೆ.ಪಾಟೀಲ್, ಕೃಷ್ಣ ಭೈರೇಗೌಡ ಬಂದರು.

ಜಮೀರ್ ರಾಜೀನಾಮೆಗೆ ಅಶೋಕ್ ಒತ್ತಾಯ

ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು. ಇದು ಭಾರತ, ಹಿಂದೂಸ್ಥಾನ. ಒಂದು ಧರ್ಮದ ಪರವಾಗಿ ಜಮೀರ್ ಮಾತನಾಡಬಾರದು. ನಮ್ಮನ್ನು ಕೀಳರಿಮೆಯಿಂದ ನೋಡಲು ಅವರಿಗೆ ಅವಕಾಶ ಯಾರು ಕೊಟ್ಟರು? ಜಮೀರ್ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಜಮೀರ್ ಅಹಮದ್ ಕೋಮುವಾದಿ ಎಂದು ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ರಾಜ್ಯದ ಹೊರಗೆ ನೀಡಿದ ಹೇಳಿಕೆಗೆ ತಾನು ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ. ಪ್ರಶ್ನೋತ್ತರ ಹಾಗೂ ಉತ್ತರ ಕರ್ನಾಟಕ ಮತ್ತು ಬರ ಚರ್ಚೆಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Mon, 11 December 23