ಪೀಣ್ಯ ಮೇಲ್ಸೇತುವೆ ಮೇಲೆ ಮುಂದಿನ ವರ್ಷ ಏಪ್ರಿಲ್​ ವರೆಗೂ ಭಾರೀ ವಾಹನಗಳಿಗಿಲ್ಲ ಸಂಚಾರ ಭಾಗ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Nov 09, 2023 | 3:07 PM

Bengaluru Peenya flyover: ಬೆಂಗಳೂರಿನ ಪೀಣ್ಯ ಮೇಲ್ಸೇತುವೆಗೆ ಹಿಡಿದಿದ್ದ ಗ್ರಹಣ ಇನ್ನಷ್ಟು ತಿಂಗಳು ಮುಂದುವರೆಯಲಿದೆ. ಕೇಬಲ ಅಳವಡಿಕೆ ಭರದಿಂದ ಸಾಗಿದ್ದು, ಮುಂದಿನ ವರ್ಷ ಏಪ್ರಿಲ್​ಗೆ ಕಾಮಗಾರಿ ಮುಗಿಯಲಿದೆ. ಬಳಿಕ ಫ್ಲೈಓವರ್​ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ದೊರೆಯಲಿದೆ.

ಪೀಣ್ಯ ಮೇಲ್ಸೇತುವೆ ಮೇಲೆ ಮುಂದಿನ ವರ್ಷ ಏಪ್ರಿಲ್​ ವರೆಗೂ ಭಾರೀ ವಾಹನಗಳಿಗಿಲ್ಲ ಸಂಚಾರ ಭಾಗ್ಯ
Follow us on

ಬೆಂಗಳೂರು, (ನವೆಂಬರ್ 09): ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಪೀಣ್ಯ ಮೇಲ್ಸೇತುವೆ(Peenya flyover) ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಸದ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಹೊಸ ವರ್ಷ ಅಂದರೆ  2024 ಜನವರಿಯಲ್ಲಿ ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎನ್ನಲಾಗಿತ್ತು. ಆದ್ರೆ, ಎಲ್ಲ ಕೇಬಲ್‌ಗಳ ಅಳವಡಿಕೆ ಪ್ರಕ್ರಿಯೆ ಮುಂದುವರೆದಿದೆ. ಹೀಗಾಗಿ 2024 ಏಪ್ರಿಲ್​ನಲ್ಲಿ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿದುಬಂದಿದೆ.

ಈಗಿರುವ 1,243 ಕೇಬಲ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು, 2023ರ ಜನವರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 38.5 ಕೋಟಿ ರೂ. ದುರಸ್ತಿ ಕಾರ್ಯಕ್ಕಾಗಿ ಟೆಂಡರ್ ನೀಡಿತ್ತು.ಆದ್ರೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಕಾರಣ ಜುಲೈನಲ್ಲಿ ಮಾತ್ರ ಕೆಲಸ ಪ್ರಾರಂಭವಾಗಿದೆ.

ಗುತ್ತಿಗೆದಾರರಿಗೆ ಮೇ 2024ರ ಗಡುವು ನೀಡಲಾಗಿದ್ದು, ಏಪ್ರಿಲ್ ವೇಳೆಗೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಭಾರೀ ವಾಹನಗಳು ಸೇರಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೂ ಅವಕಾಶ ಸಿಗಲಿದೆ ಎಂದು ಬೆಂಗಳೂರು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಹೇಳಿದ್ದಾರೆ.

ಪೀಣ್ಯ ಭಾಗದಲ್ಲಿ ಬರುವ ಈ ಮೇಲ್ಸೇತುವೆ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದಿಂದ ಪಾರ್ಲೆಜಿ ಫ್ಯಾಕ್ಟರಿವರೆಗೂ 5ಕಿ.ಮೀ. ಉದ್ದವಿದ್ದು, ಇದು ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಅಷ್ಟೇ ಅಲ್ಲ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ.

8ನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103ನೇ ಪಿಲ್ಲರ್ ನಡುವಿನ 5 ಕೇಬಲ್ ಬಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ 2021 ಡಿಸಿಎಂಬರ್​ 25ರಂದು ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ನಿಷೇಧಿಸಿತ್ತು. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ತಜ್ಞರು ಪರಿಶೀಲನೆ ನಡೆಸಿ ಹೆಚ್ಚು ಟೈರ್ ಹೊಂದಿರುವ ಭಾರೀ ವಾಹನಗಳು (ಮಲ್ಟಿ ವ್ಹೀಲ್ ವೆಹಿಕಲ್ಸ್) ಸಂಚರಿಸಿದ್ದರಿಂದ ಕೇಬಲ್‌ಗಳು ಬಾಗಿವೆ ಎಂದು ವರದಿ ನೀಡಿದ್ದರು.

ಬಳಿಕ 2022ರ ಫೆಬ್ರವರಿ 26ರಿಂದ ಲಘು ವಾಹಗಳಿಗೆ ಮಾತ್ರ ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿತ್ತು. ಬಳಿಕ ಐಐಎಸ್ಸಿಯ ತಜ್ಞ ಡಾ.ಚಂದ್ರ ಕಿಶನ್ ನೇತೃತ್ವದ ತಂಡವು, ಮೇಲ್ಸೇತುವೆಯ ಕ್ಷಮತೆ ಬಗ್ಗೆ ಲೋಡ್ ಟೆಸ್ಟ್, ಕೆಮಿಕಲ್ ಅನಾಲಿಸಿಸ್ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿ ಎನ್‌ಎಚ್ ಎಐಗೆ ಮಧ್ಯಂತರ ವರದಿ ನೀಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ