ಸಿದ್ಧರಾಮಯ್ಯ ಮನೆಗೆ ಮಾರಿ ಪರರಿಗೆ ಉಪಕಾರಿ: ಹರಿಪ್ರಸಾದ್​ಗೆ ಈಶ್ವರಾನಂದಪುರಿ ಶ್ರೀ ತಿರುಗೇಟು

| Updated By: ರಮೇಶ್ ಬಿ. ಜವಳಗೇರಾ

Updated on: Sep 12, 2023 | 10:07 AM

ಮೊನ್ನೆ ಮೊನ್ನೆಯಷ್ಟೇ ಸಿದ್ದರಾಮಯ್ಯ ಅವರ ಹೆಸರೆತ್ತದೇ ಕಾಂಗ್ರೆಸ್ ಹಿರಿಯ ಬಿ.ಕೆ.ಹರಿಪ್ರಸಾದ್ ಪರೋಕ್ಷವಾಗಿ ನಡೆಸಿದ ವಾಗ್ದಾಳಿ ಇದೀಗ ಕೈ ಪಾಳಯದಲ್ಲಿ ಕಂಪನ ಎಬ್ಬಿಸಿದೆ. ಸಿದ್ದರಾಮಯ್ಯ ಆಪ್ತ ಬಣದ ಕಣ್ಣು ಕೆಂಪಾಗಿಸಿದ್ದು ಬಿ.ಕೆ.ಹರಿಪ್ರಸಾದ್ ವಿರುದ್ಧ ಸಿದ್ದರಾಮಯ್ಯ ಆಪ್ತರು ತಿರುಗಿ ಬಿದ್ದಿದ್ದಾರೆ. ಅದರಲ್ಲೂ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಶ್ರೀ ಹರಿಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ, (ಸೆಪ್ಟೆಂಬರ್ 12): ಸಿದ್ದರಾಮಯ್ಯ (Siddaramaiah) ಅವರ ಹೆಸರೆತ್ತದೇ ಪರೋಕ್ಷವಾಗಿಯೇ ಅವರ ವಿರುದ್ಧ ಕಾಂಗ್ರೆಸ್(Congress) ಹಿರಿಯ ಬಿ.ಕೆ.ಹರಿಪ್ರಸಾದ್ (BK Hariprasad) ಬಹಿರಂಗ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್​ನಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಹರಿಪ್ರಸಾದ್ ಅವರ ಹೇಳಿಕೆಗಳು ಸಿದ್ದರಾಮಯ್ಯನವರ ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಇದೇ ವಿಚಾರವಾಗಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ (Kaginele Eshwarananda Swamiji) ಹರಿಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದ ನಾಗೇನಹಳ್ಳಿಯಲ್ಲಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಈಶ್ವರಾನಂದಪುರಿ ಶ್ರೀ, ದೊಡ್ಡ ನಾಯಕನಿಗೆ ಇಷ್ಟೊಂದು ಹೊಟ್ಟೆಕಿಚ್ಚು ಇರಬಾರದು. ಸಿದ್ಧರಾಮಯ್ಯ ಕುರುಬರನ್ನೇ ಬೆಳೆಸಿದ್ದಾರೆ ಎಂದಿದ್ದಾರೆ ಹರಿಪ್ರಸಾದ್ ಪ್ರಬುದ್ಧ ರಾಜಕಾರಣಿ ಹಾಗೇ ಮಾತಾಡಬಾರದಿತ್ತು. ಸಿದ್ಧರಾಮಯ್ಯ ಸಂಪುಟದಲ್ಲಿ ಬಹಳ ಜನ ಕುರುವರು ಮಂತ್ರಿಗಳಾಗಿರಲಿಲ್ಲ. ಸಿಎಂ ಸಿದ್ಧರಾಮಯ್ಯ ಜಾತಿ ರಾಜಕಾರಣ ಮಾಡಲಿಲ್ಲ. ಸಣ್ಣ ಸಮುದಾಯಗಳಿಗೂ ಸಿದ್ಧರಾಮಯ್ಯ ಅವಕಾಶ ನೀಡಿದರು. ಬಡವರು, ಹಿಂದುಳಿದವರು, ದಲಿತರು, ಮಹಿಳೆಯರ ಪರ‌ ಧ್ವನಿ ಆದರು. ಹರಿಪ್ರಸಾದ್ ಜನರಿಗೆ ತಪ್ಪು ಸಂದೇಶ ರವಾನಿಸಿದ್ದು, ಈ ಬಗ್ಗೆ ನಾವು ಮಾತಾಡದಿದ್ದರೆ ಜನರಿಗೆ ಸತ್ಯ ಗೊತ್ತಾಗುವುದಿಲ್ಲ. ಸಿದ್ಧರಾಮಯ್ಯ ಮನೆಗೆ ಮಾರಿ ಪರರಿಗೆ ಉಪಕಾರಿ ಎಂದು ಹರಿಪ್ರಸಾದ್​ಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಹೊಗೆಯಾಡುತ್ತಿರುವ ಭಿನ್ನಮತ; ಬಿಕೆ ಹರಿಪ್ರಸಾದ್​ಗೆ ಸಚಿವ ಎಂಬಿ ಪಾಟೀಲ್ ತಿರುಗೇಟು

. ಹರಿಪ್ರಸಾದ್ ನಿವೇನೂ ಸಾಧನೆ ಮಾಡಲು ಆಗುವುದಿಲ್ಲ. ಸಿದ್ಧರಾಮಯ್ಯ ಕೋಟ್ಯಂತರ ಜನರ ಮನಸ್ಸಿನಲ್ಲಿದ್ದಾರೆ. ಒಕ್ಕಲಿಗ, ಲಿಂಗಾಯತರು ಸಿಎಂ ಆದಾಗಿನ ಸಂಪುಟ ನೋಡಿ. ಆಯಾ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಿದ್ದರು. ಸಿದ್ಧರಾಮಯ್ಯ ಎಲ್ಲಾ ಸಮುದಾಯಗಳಿಗೂ ಸ್ಥಾನ ನೀಡಿದ್ದಾರೆ ಎಂದರು.

ಹರಿಪ್ರಸಾದ್ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿದ್ದಾರೆ. ಈಗ ಅವರು ಹಿಂದುಳುದ ಸಮಾಜದ ನಾಯಕರಾಗಲು ಹೊರಟಿದ್ದಾರೆ, ಹರಿಪ್ರಸಾದ್ ಎಂದೂ ಹಿಂದುಳಿದ ಸಮುದಾಯಗಳ ಪರ ಮತಾಡಿದವರಲ್ಲ. ಸಿದ್ಧರಾಮಯ್ಯ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿದ್ದರು. ಆಗ ಡಿಸಿಎಂ ಸ್ಥಾನದಿಂದ ತೆಗೆದು ಹಾಕುವುದಾಗಿ ದೇವೇಗೌಡರು ಹೇಳಿದ್ದರು. ಆದ್ರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಳ್ಳದೆ ಅಹಿಂದ ಸಮಾವೇಶ ಮಾಡಿದ್ದರು. ಅಹಿಂದ ಸಮಾವೇಶದಿಂದ ಡಿಸಿಎಂ ಸ್ಥಾನ ಕಳೆದುಕೊಂಡರು ಎಂದು ಹೇಳುವ ಮೂಲಕ ಸೂಕ್ಷ್ಮವಾಗಿ ಹರಿಪ್ರಸಾದ್​ಗೆ ತಿವಿದರು.

ಸಿದ್ಧರಾಮಯ್ಯ ಅಧಿಕಾರಕ್ಕಾಗಿ ಅಲ್ಲ ಜನರಿಗಾಗಿ ರಾಜಕಾರಣ ಮಾಡುತ್ತಾರೆ. ಹಿಂದುಳಿದ ಸಮುದಾಯದ ಜನ ಜಾಗೃತರಾಗಬೇಕು. ಹಿಂದುಳಿದ ಸಮಾಜದ ಜನ ಉಪಕಾರ ಸ್ಮರಣೆ ಮಾಡಲ್ಲ, ಮರೆಯುತ್ತಾರೆ. ಅಧಿಕಾರ‌ ಹಂಚಿಕೊಳ್ಳಲು ಎಲ್ಲರೂ ಬರುತ್ತಾರೆ. ಅಧಿಕಾರ‌ ಕೊಟ್ಟವನನ್ನು ಮುಂದುವರೆಸಲು ಪ್ರಯತ್ನಿಸಲ್ಲ. ಇದು ಹಿಂದುಳಿದ ಸಮಾಜದಲ್ಲಿರುವ ಒಂದು ದೋಷ. ಎಲ್ಲಾ ಸಮುದಾಯಗಳು ಮುಂದೆ ಬರಲಿ, ಅವಕಾಶ ಸಿಗಲಿ ಎಂದು ಹೇಳಿದರು.

ಸಿದ್ಧರಾಮಯ್ಯ 2ನೇ ಸಲ ಸಿಎಂ ಆಗಿದ್ದಾರೆ. ಹೈಕಮಾಂಡ್ ಹಾಗೂ 135 ಜನ ಶಾಸಕರು ಸೇರಿ ಅವರನ್ನು ಸಿಎಂ ಮಾಡಿದ್ದಾರೆ. ನಿಮ್ಮನ್ನೇಕೆ ಸಿಎಂ ಮಾಡಲಿಲ್ಲ ಎಂದು ಹರಿಪ್ರಸಾದ್​ಗೆ ಪ್ರಶ್ನಿಸಿದ ಸ್ವಾಮೀಜಿ, ಸಿದ್ಧರಾಮಯ್ಯ ಮುಖ ನೋಡಿ ರಾಜ್ಯದ ಜನ ಮತ ಹಾಕಿದ್ದಾರೆ. ನಿಮ್ಮನ್ನು ನೋಡಿ ಯಾರೂ ಮತ ಹಾಕಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ