ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ (Hosadurga) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಂದಿನ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಕಾರ್ಯಕರ್ತರು, ಮುಖಂಡರಲ್ಲಿ ಚರ್ಚೆ ಆರಂಭವಾಗಿದೆ. ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ (Gulihatti Shekhar) ಇಂದಿಗೂ ಮುಂಚೂಣಿ ನಾಯಕ ಎಂದೇ ರಾಜ್ಯಮಟ್ಟದಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಖನಿಜ ನಿಗಮ ಅಧ್ಯಕ್ಷ ಎಸ್.ಲಿಂಗಮೂರ್ತಿ (S Lingamurthy) ಸಹ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಇಬ್ಬರ ನಡುವೆ ಪರಸ್ಪರ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಬಿಜೆಪಿ ವಲಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಬಹಿರಂಗವಾಗಿಯೇ ಕೇಳಿ ಬರುತ್ತಿವೆ. ಈ ಮಾತುಗಳಿಗೆ ಉದಾಹರಣೆ ಎನಿಸುವಂಥ ಘಟನೆಯೊಂದು ಸೋಮವಾರ ನಡೆಯಿತು. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭಾಗವಹಿಸಿದ್ದ ಸಭೆಗೆ ಖನಿಜ ನಿಗಮ ಅಧ್ಯಕ್ಷ ಎಸ್.ಲಿಂಗಮೂರ್ತಿ ಅವರನ್ನೂ ಆಹ್ವಾನಿಸಲಾಗಿತ್ತು. ಈ ಆಹ್ವಾನವೇ ಒಂದು ವಿವಾದವಾಗಿ ಮಾರ್ಪಟ್ಟಿದ್ದು ವಿಪರ್ಯಾಸ.
ಹೊಸದುರ್ಗದಲ್ಲಿ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಎಸ್.ಲಿಂಗಮೂರ್ತಿ ಅವರನ್ನೂ ಆಹ್ವಾನಿಸಿದ್ದಕ್ಕೆ ಶಾಸಕ ಗೂಳಿಹಟ್ಟಿ ಶೇಖರ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ಬಳಿ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಸ್ಪಷ್ಟನೆ ನೀಡಿದರು. ಹೊಸದುರ್ಗದಲ್ಲಿ ಕ್ರೀಡಾ ಮಳಿಗೆ ಉದ್ಘಾಟನೆ ವಿಚಾರ ಹಿನ್ನೆಲೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಇಒಗೆ ಕರೆ ಮಾಡಿ ಪ್ರಶ್ನಿಸಿದೆ. ತ್ರೈಮಾಸಿಕ ಸಭೆ ನಡೆಯುತ್ತಿದೆ ಬನ್ನಿ ಎಂದು ಕರೆದರು. ಅವರ ಆಹ್ವಾನದ ಮೇರೆಗೆ ಸಭೆಗೆ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಕ್ರೀಡಾ ಮಳಿಗೆ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಪಡಿಸಿದ್ದು ಏಕೆ ಎಂದು ಲಿಂಗಮೂರ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಶ್ನಿಸಿದಾಗ ಎಲ್ಲರೂ ಸೈಲೆಂಟಾಗ್ತೀರಿ. ಇದೇನು ನಾಟಕ ಮಾಡ್ತೀರಾ? ಅವಮಾನಿಸ ಬೇಕು ಅಂತ್ಲೇ ಇಲ್ಲಿಗೆ ಕರೆಸಿಕೊಂಡಿದ್ದಾರಾ ಎಂದು ಬೇಸರ ವ್ಯಕ್ತಪಡಿಸುತ್ತಲೇ ಸಭೆಯಿಂದ ಹೊರಗೆ ನಡೆದರು.
ಈ ಹಿಂದೆ ಲಿಂಗಮೂರ್ತಿ ತಮ್ಮನ್ನು ತಾವು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಕರೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದ ಶಾಸಕ ಗೂಳಿಹಟ್ಟಿ ಶೇಖರ್, 2023ರಲ್ಲಿಯೂ ತಾವೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದರು. ಮುಂದಿನ ವಿಧಾನಸಭಾ ಚುನಾವಣೆಗಾಗಿ ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ.
ಇತ್ತೀಚೆಗಷ್ಟೇ ಪತ್ರಿಕಾಹೇಳಿಕೆ ನೀಡಿದ್ದ ಲಿಂಗಮೂರ್ತಿ, ‘ಪಕ್ಷವು ಸಾಮಾಜಿಕ ನ್ಯಾಯದ ಅಡಿಯಲ್ಲಿ ನನಗೆ ಟಿಕೆಟ್ ನೀಡಬೇಕು. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ’ ಎಂದು ಘೋಷಿಸಿದ್ದರು.
ಇದನ್ನೂ ಓದಿ: ಚರ್ಚ್ ಎದುರು ನಿಂತು ಮತಾಂತರದ ಬಗ್ಗೆ ಪ್ರಶ್ನಿಸಿದ ಶಾಸಕ ಗೂಳಿಹಟ್ಟಿ ಶೇಖರ್
Published On - 6:40 pm, Mon, 17 January 22