ದಾವಣಗೆರೆ, ಅಕ್ಟೋಬರ್ 06: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿರುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿಕೆ ಸರ್ಕಾರದಲ್ಲಿ ಕಿಚ್ಚು ಹಚ್ಚಿದೆ. ಲೋಕಸಭೆ ಚುನಾವಣೆ ಹೊತ್ತಲ್ಲೇ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ. ಸದ್ಯ ಈ ವಿಚಾರವಾಗಿ ಯಾವ ಹೈಕಮಾಂಡ್ನಿಂದಲೂ ನನಗೆ ನೋಟಿಸ್ ಬಂದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜೊತೆ ನಾನು ಮಾತನಾಡಿರುವುದನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಡಿಸೆಂಬರ್ 23, 24ರಂದು ಲಿಂಗಾಯತ ಮಹಾ ಅಧಿವೇಶನ ನಡೆಯುತ್ತೆ. ಲಿಂಗಾಯತ ಮಹಾ ಅಧಿವೇಶನ ಶಕ್ತಿ ಪ್ರದರ್ಶನವಲ್ಲ. 10 ಲಕ್ಷಕ್ಕೂ ಹೆಚ್ಚು ಜನರು ಸೇರಿದರೆ ಅದು ಶಕ್ತಿ ಪ್ರದರ್ಶನ ಆಗಲಿದೆ. ಸಮುದಾಯದ ಅಧಿಕಾರಗಳ ಪಟ್ಟಿ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಬೇಡಿ. ಜಾತಿ ಸಮೀಕ್ಷೆ ಬಗ್ಗೆ ಕೇಳಿದ್ದಕ್ಕೆ ಯಾವ ಜಾತಿ ಸಮೀಕ್ಷೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲೇ ತುಂಬಿ ತುಳುಕುತ್ತಿದ್ದಾರೆ ಲಿಂಗಾಯತ ಅಧಿಕಾರಿಗಳು: ಪಟ್ಟಿ ವೈರಲ್
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಇಂದು ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನದ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿರುವ ವಿಚಾರ ಚರ್ಚೆ ಆಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಕೇವಲ ಸಚಿವ ಈಶ್ವರ ಖಂಡ್ರೆ ಮಾತ್ರ ಮಾತನಾಡಿದ್ದು, ಶಾಸಕ ಶಾಮನೂರ ಶಿವಶಂಕರಪ್ಪ ಮೌನಕ್ಕೆ ಶರಣಾಗಿದ್ದರು. ನಂತರ ಶಾಮನೂರ ಅವರ ಹೇಳಿಕೆಗೆ ಮಾಧ್ಯಮ ಪ್ರತಿನಿಧಿಗಳು ಮುಂದಾಗಿದ್ದು, ಆದರೆ ಹೇಳಿಕೆ ನೀಡಲು ನಿರಾಕರಿಸಿದ್ದರು.
ಲಿಂಗಾಯತ ಅಧಿಕಾರಿಗಳಿಗೆ ಮನ್ನಣೆ ನೀಡುತ್ತಿಲ್ಲ. ಆಯಾಕಟ್ಟಿನ ಪ್ರಮುಖ ಹುದ್ದೆಗಳಿಗೆ ಬೇರೆ-ಬೇರೆ ಸಮುದಾಯದ ಅಧಿಕಾರಿಗಳನ್ನೇ ಕೂರಿಸಲಾಗಿದೆ. ಇದರಿಂದಿಗೆ ಲಿಂಗಾಯತ ಅಧಿಕಾರಿಗಳನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿದ್ದರಾಂಯ್ಯನವರ ಅಭಿಮಾನಿಗಳು ಶಮನೂರು ಜಿಲ್ಲೆಯಲ್ಲಿ ಎಷ್ಟು ಲಿಂಗಾಯತ ಅಧಿಕಾರಿಗಳು ಯಾವೆಲ್ಲ ಹುದ್ದೆಯಲ್ಲಿ ಇದ್ದಾರೆ ಎನ್ನುವ ಪಟ್ಟಿ ಬಿಡುಗಡೆ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.