ಧಾರವಾಡ ಅಂದಕೂಡಲೇ ಎಲ್ಲರ ಮನದಲ್ಲಿ ಬರೋದು ಪೇಢಾ. ಈ ಧಾರವಾಡ ಪೇಢಾದ ಸ್ವಾದಿಷ್ಟಕ್ಕೆ ಮರುಳಾಗದವರೇ ಇಲ್ಲ. ಅದರ ಸ್ವಾದಿಷ್ಟಕ್ಕೆ ಕಾರಣವಾಗಿರೋದೇ ಧಾರವಾಡದ ಎಮ್ಮೆಯ ಹಾಲು. ಈಗ ಧಾರವಾಡ ಪೇಢಾದಂತೆಯೇ ಧಾರವಾಡದ ಎಮ್ಮೆಗೂ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ರಾಷ್ಟ್ರಮಟ್ಟದಲ್ಲಿ ದೇಸೀ ತಳಿಯ ಸ್ಥಾನಮಾನ ನೀಡಲಾಗಿದೆ.
ಧಾರವಾಡಿ ಎಮ್ಮೆ – ದೇಶದ 18ನೇ ತಳಿಯಾಗಿ ಘೋಷಣೆ
ದೇಶದಲ್ಲಿ ಈವರೆಗೆ 17 ದೇಸಿ ಎಮ್ಮೆ ತಳಿಗಳನ್ನು ಗುರುತಿಸಲಾಗಿತ್ತು. ಇವೆಲ್ಲವೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ, ವಿಶ್ವ ಮಟ್ಟದಲ್ಲಿಯೂ ಹೆಸರು ಮಾಡಿದ್ದವು. ಇವುಗಳ ಪೈಕಿ ಕರ್ನಾಟಕದ ಒಂದೂ ತಳಿ ಇರಲಿಲ್ಲ. ಆದರೆ ಈಗ ಕರ್ನಾಟಕದಿಂದ ಧಾರವಾಡ ಭಾಗದ ದೇಸಿ ಎಮ್ಮೆ ತಳಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಧಾರವಾಡದ ಎಮ್ಮೆ 18ನೇ ದೇಸಿ ಎಮ್ಮೆ ತಳಿಯಾಗಿ ಘೋಷಣೆಯಾಗಿದೆ. ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಸಾಧನ ಬ್ಯೂರೋ ಸೆ.3 ರಂದು ಧಾರವಾಡ ಎಮ್ಮೆ ತಳಿಗೆ (ಇಂಡಿಯಾಬಫೆಲೊ_0800ಧಾರವಾಡಿ_01018 INDIA_BUFFALO_0800_DHARWADI_01018) ಎಂಬ ನೋಂದಣಿ ಸಂಖ್ಯೆ ನೀಡಿದೆ. ಈ ನೋಂದಣಿ ಸಂಖ್ಯೆಯ ಮೂಲಕ ಇನ್ನು ಮುಂದೆ ಧಾರವಾಡದ ಎಮ್ಮೆ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ ವಿಶ್ವಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತಾಗಿದೆ. ಇದು ಧಾರವಾಡ ಎಮ್ಮೆ ತಳಿಯ ಅಭಿವೃದ್ದಿ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ನಾಂದಿ ಆಗಲಿದೆ. ಇದರಿಂದಾಗಿ ಮತ್ತೊಂದು ಲಾಭವೆಂದರೆ ಈ ಕಾರ್ಯಕ್ಕಾಗಿ ಅನುದಾನವೂ ಸಿಗಲಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಅಧ್ಯಯನ
ಧಾರವಾಡದ ಎಮ್ಮೆಗಳಿಗೆ (Dharwari buffaloes) ಅದರದ್ದೇ ಆದ ವಿಶೇಷತೆಗಳಿವೆ. ಅವು ನೀಡುವ ಹಾಲಿನ ಪ್ರಮಾಣ ಮತ್ತು ಗುಣಮಟ್ಟ ಸಾಕಷ್ಟು ಹೆಸರುವಾಸಿ. ಇದೇ ಕಾರಣಕ್ಕೆ ಧಾರವಾಡ ವಿಶ್ವವಿದ್ಯಾಲಯ 2014 ರಿಂದ ಧಾರವಾಡ ಎಮ್ಮೆ ಬಗ್ಗೆ ಅಧ್ಯಯನ ಆರಂಭಿಸಿತು. ಕೃಷಿ ವಿವಿಯ ಪಶು ವಿಜ್ಞಾನ ವಿಭಾಗವು 2017 ರ ಡಿಸೆಂಬರ್ ವರೆಗೆ ಅಧ್ಯಯನ ನಡೆಸಿತು. `ಧಾರವಾಡ ಎಮ್ಮೆ ತಳಿಯ ಗುಣಲಕ್ಷಣಗಳ ಸಂಶೋಧನಾ ಯೋಜನೆ’ ಅಡಿ ಸಂಶೋಧನೆ ಕೈಗೊಳ್ಳಲಾಯಿತು. ಬಳಿಕ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು. ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯಾದ ಪಶು ವಂಶವಾಹಿ ಸಂಪನ್ಮೂಲ ಸಂರಕ್ಷಣೆಯ ರಾಷ್ಟ್ರೀಯ ಸಂಸ್ಥೆ (ಎನ್‌ಬಿಎಆರ್‌ಜಿ) ಸಂಸ್ಥೆ ಹಾಗೂ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಈ ಸಂಶೋಧನೆಯಾಗಿದ್ದು, ಇದಕ್ಕಾಗಿ ಸಂಸ್ಥೆಯು 29 ಲಕ್ಷ ರೂಪಾಯಿ ಅನುದಾನವನ್ನು ಕೂಡ ಒದಗಿಸಿತ್ತು.
ಸಂಶೋಧನೆಗೆ 14 ಜಿಲ್ಲೆಗಳಲ್ಲಿ ಎಮ್ಮೆಗಳ ಆಯ್ಕೆ
ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಈ ಎಮ್ಮೆ ತಳಿಗಳಿದ್ದು, ಈ ಪೈಕಿ ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಆಯ್ದ ಒಟ್ಟು 64 ಹಳ್ಳಿಗಳಲ್ಲಿ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ವಿ.ಎಸ್.ಕುಲಕರ್ಣಿ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿತ್ತು. ಒಟ್ಟು 3937 ಜನ ರೈತರಲ್ಲಿನ 10,650 ಧಾರವಾಡ ಎಮ್ಮೆಗಳ ಬಗ್ಗೆ ಸತತ ಮೂರು ವರ್ಷಗಳ ಕಾಲ ಅಧ್ಯಯನ ಕೈಗೊಂಡು, ಅಂತಿಮ ವರದಿ ಸಿದ್ದಪಡಿಸಲಾಗಿತ್ತು. ಬಳಿಕ 2020 ರಲ್ಲಿ ತಳಿಯ ನೋಂದಣಿಯಾಗಿ ಕೃಷಿ ವಿವಿಯಿಂದ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಅಧ್ಯಯನದ ವರದಿ ಆಧರಿಸಿ ಇದೇ ಆ.16 ರಂದು ಅಂತಿಮವಾಗಿ ಚರ್ಚಿಸಿ ತೀರ್ಮಾನಿಸಲಾಗಿತ್ತು. ಇದೀಗ ಸೆ.3 ರಂದು ತಳಿ ನೋಂದಣಿ ಆಗಿರುವ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ.
ಅಧ್ಯಯನದ ವರದಿಯಲ್ಲಿ ಏನಿತ್ತು?:
2012ರ ಜಾನುವಾರು ಗಣತಿ ಪ್ರಕಾರ ಈ ನಾಲ್ಕು ಜಿಲ್ಲೆಗಳಲ್ಲಿ 12 ಲಕ್ಷ 5 ಸಾವಿರದಷ್ಟು ಎಮ್ಮೆಗಳಿದ್ದು, ಈ ಪೈಕಿ ಶೇ.80 ರಷ್ಟು ಧಾರವಾಡ ಎಮ್ಮೆಗಳೇ ಇವೆ. ಇದು ಅಧ್ಯಯನದ ವೇಳೆ ಕಂಡು ಬಂದಿದೆ. ಎಮ್ಮೆಗಳ ಅಳತೆ, ಆಕಾರ, ಗುಣಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗಿದ್ದು, ಎಮ್ಮೆಗಳ ಹಾಲಿನ ಉತ್ಪಾದನೆ, ಸಂತಾನೋತ್ಪತ್ತಿಯ ಸಾಮರ್ಥ್ಯದ ಪರೀಕ್ಷೆಯನ್ನು ಕೂಡ ಮಾಡಲಾಗಿದೆ. ಅಲ್ಲದೇ ರಕ್ತದ ಮಾದರಿ ತೆಗೆದುಕೊಂಡು ಅವುಗಳ ಡಿಎನ್‌ಎ ಕುರಿತಂತೆಯೂ ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ. ಇನ್ನು ಎಮ್ಮೆಗಳ ಅರ್ಧ ಚಂದ್ರಾಕೃತಿಯ ಕೋಡು, ಕರೀ ಬಣ್ಣದ ಚರ್ಮ ಇರುವ ಎಮ್ಮೆಗಳು ಹೆಚ್ಚಾಗಿರುವುದು ತಿಳಿದು ಬಂದಿದೆ.
ಇದಲ್ಲದೇ ಒಂದು ಎಮ್ಮೆ ಒಂದು ಬಾರಿ ಕರು ಹಾಕಿದ ನಂತರ ಮತ್ತೆ ಗರ್ಭ ಧರಿಸುವವರೆಗೆ (ಒಂದು ಸೂಲಿನಲ್ಲಿ) 980 ಲೀಟರ್ ಹಾಲು ಕೊಡುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಎಮ್ಮೆಗಳು ವರ್ಷದ 335 ದಿನಗಳ ಕಾಲ ಹಾಲು ಕೊಡುವ ಸಾಮರ್ಥ್ಯ ಹೊಂದಿದೆ. ಈ ಹಾಲಿನಲ್ಲಿ ಶೇ.7 ರಷ್ಟು ಕೊಬ್ಬಿನಾಂಶ ಇದೆ. ಇನ್ನು ಕೊಬ್ಬುರಹಿತ ಉತ್ಪನ್ನದಲ್ಲಿ ಶೇ. 9.5 ರಷ್ಟು ಪೋಷಕಾಂಶಗಳಿರುತ್ತವೆ. ಈ ಧಾರವಾಡ ಎಮ್ಮೆ ತಳಿಗಳ ಗುಣಮಟ್ಟಕ್ಕೆ ಕೋಣವೇ ಮುಖ್ಯ ಆಗಲಿದ್ದು, ಗುಣಮಟ್ಟದ ಕೋಣಗಳನ್ನು ಸಿದ್ದಪಡಿಸಿ, ಅವುಗಳ ವೀರ್ಯ ಸಂಗ್ರಹಿಸುವ ಕಾರ್ಯ ಆಗಬೇಕಾಗಿದೆ.
ಇನ್ನು ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 6 ದಶಕಗಳ ಬಳಿಕವೂ ಧಾರವಾಡಿ ಎಮ್ಮೆ ತಳಿ ಶುದ್ಧತೆ ಕಾಪಾಡಿಕೊಂಡಿರುವುದು ಕೂಡ ವಿಶೇಷವೇ. ಇದೀಗ ದೇಸಿ ತಳಿಯ ಘೋಷಣೆಯಾಗಿದ್ದರಿಂದ ಈ ತಳಿ ಅಭಿವೃದ್ದಿ, ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ಸಿಗಲಿದೆ. ಅದರಲ್ಲೂ ಈ ತಳಿಯ ಉತ್ತಮ ವೀರ್ಯದಿಂದ ಜನಿಸುವ ಎಮ್ಮೆಗಳು ಮತ್ತಷ್ಟು ಗುಣಮಟ್ಟದಿಂದ ಕೂಡಿರಲು ಸಾಧ್ಯವಾಗಲಿದ್ದು, ಇದರಿಂದ ಈ ತಳಿ ಆದಷ್ಟು ಬೇಗನೇ ಹೆಸರು ಮಾಡಲಿದೆ.
ಧಾರವಾಡಿ ಎಮ್ಮೆಗಳಿಗೆ ಜವಾರಿ ಎಮ್ಮೆ ಅಂತಾನೂ ಕರೆಯುತ್ತಾರೆ:
ಧಾರವಾಡ ಎಮ್ಮೆಗಳನ್ನು ಜವಾರಿ ಎಮ್ಮೆ ಅಂತಲೂ ಕರೆಯಲಾಗುತ್ತದೆ. ಅಲ್ಲದೇ ಇವುಗಳಿಗೆ ವಿವಿಧ ಕಡೆಗಳಲ್ಲಿ ಮುಂಡರಗಿ ಎಮ್ಮೆ, ಹೊಯ್ಸಳ ಎಮ್ಮೆ, ಬಾದಾಮಿ ಎಮ್ಮೆ ಹೆಸರಿನಲ್ಲೂ ಕರೆಯಲಾಗುತ್ತದೆ. ಇನ್ನು ಧಾರವಾಡ ಪೇಢಾ, ಬೆಳಗಾವಿಯ ಕುಂದಾ ಪ್ರಸಿದ್ಧಿಯಾಗಲು ಮೂಲ ಕಾರಣ ಈ ಎಮ್ಮೆಗಳ ಹಾಲು. ಸುಮಾರು 150 ವರ್ಷಗಳಿಂದಲೂ ಈ ಎಮ್ಮೆಗಳ ಹಾಲನ್ನೇ ಬಳಸಿಕೊಂಡು ಧಾರವಾಡ ಪೇಢಾ, ಬೆಳಗಾವಿ ಕುಂದಾ ಸೇರಿದಂತೆ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇವುಗಳ ಹಾಲಿನ ವಿಶೇಷತೆಯಿಂದಲೇ ಉತ್ಪನ್ನಗಳು ರುಚಿಯಾಗಿರುತ್ತವೆ ಅನ್ನುವುದು ಕೂಡ ಗಮನಿಸಬೇಕಾದ ಸಂಗತಿ. ಇತ್ತೀಚಿಗಷ್ಟೇ ಧಾರವಾಡದ ಪೇಢಾಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಶನ್(Geographical Indication) ಕೋಡ್ ಸಿಕ್ಕಿತ್ತು. ಅದರ ಬೆನ್ನಲ್ಲೇ ಇದೀಗ ರಾಷ್ಟ್ರಮಟ್ಟದಲ್ಲಿ ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ ಸಿಕ್ಕಿದ್ದು ಸ್ಥಳೀಯರಿಗೆ ಸಂತಸ ತಂದಿದೆ.
ಐತಿಹಾಸಿಕ ಸಾಧನೆ – ಡಾ. ವಿಶ್ವನಾಥ ಕುಲಕರ್ಣಿ
ಇನ್ನು ಈ ಬಗ್ಗೆ ಟಿವಿ-ಡಿಜಿಟಲ್ ಜೊತೆಗೆ ಮಾತನಾಡಿದ ಕೃಷಿ ವಿವಿಯ ಪ್ರಾಣಿ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ವಿಶ್ವನಾಥ ಕುಲಕರ್ಣಿ, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಎಮ್ಮೆಗಳಿವೆ. ಆದರೆ ಇದುವರೆಗೂ ಯಾವುದೇ ತಳಿಗೆ ಈ ಸ್ಥಾನಮಾನ ಸಿಕ್ಕಿರಲಿಲ್ಲ. ಇದೀಗ ದೇಶದ 18ನೇ ಎಮ್ಮೆ ತಳಿಯಾಗಿ ಧಾರವಾಡ ಎಮ್ಮೆ ಘೋಷಣೆಯಾಗಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಎಮ್ಮೆ ತಳಿಯಾಗಿದೆ. ಇದೊಂದು ಐತಿಹಾಸಿಕ ಸಾಧನೆ ಆಗಿದ್ದು, ನಮಗೆಲ್ಲಾ ಸಾಕಷ್ಟು ಖುಷಿ ತಂದಿದೆ ಎನ್ನುತ್ತಾರೆ.
ನಮ್ಮ ಎಮ್ಮೆ, ನಮ್ಮ ಹೆಮ್ಮೆ – ವಿಶಾಲ ಗೌಳಿ
ನಮ್ಮ ಗೌಳಿ ಸಮುದಾಯದವರು ಅನೇಕ ವರ್ಷಗಳಿಂದ ಈ ತಳಿಯ ಎಮ್ಮೆಯನ್ನು ಸಾಕಿಕೊಂಡು ಬಂದಿದ್ದಾರೆ. ಈಗಲೂ ಅನೇಕರು ಇದೇ ಎಮ್ಮೆಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ತಳಿಯ ಎಮ್ಮೆಗಳನ್ನು ಸಾಕಲು ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇಲ್ಲ. ಆದರೆ ಅವುಗಳು ನಮಗೆ ಮಾಡುವ ಉಪಕಾರ ಮಾತ್ರ ದೊಡ್ಡದು. ಇಂಥ ನಮ್ಮೂರಿನ ಎಮ್ಮೆಗಳಿಗೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದ್ದು ಸಂತಸದ ಸಂಗತಿ. ನಮ್ಮ ಎಮ್ಮೆ, ನಮ್ಮ ಹೆಮ್ಮೆ ಅನ್ನುತ್ತಾರೆ ಎಮ್ಮೆ ಸಾಕಾಣಿಕೆ ಮಾಡಿರುವ ವಿಶಾಲ ಗೌಳಿ.
-ನರಸಿಂಹಮೂರ್ತಿ ಪ್ಯಾಟಿ
(Dharwari buffalo gets national recognition)