ಗದಗ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 10ರವರೆಗೆ ಭಾರಿ ಮಳೆಯಾಗಲಿದೆ (Karnataka Rains) ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಅದರಂತೆ ಇಂದು (ಏಪ್ರಿಲ್ 7) ಗದಗ ಜಿಲ್ಲೆ (Gadag Rain), ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು (Bagalkote Rain), ಕೊಪ್ಪಳ ಜಿಲ್ಲೆಯಲ್ಲಿ ಮೊದಲ ವರ್ಷಧಾರೆಯಾಗಿದೆ (Koppal Rain). ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮೋಡ ಮುಸುಕಿದ ವಾತಾವರಣ ಇದ್ದು, ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಸಿಡಿಲು ಸಹಿತ ಮಳೆಯಾಗಿದೆ. ಈ ವೇಳೆ ಜಮೀನಿನಲ್ಲಿ ಕುರಿಗಳನ್ನು ಕಾಯುತ್ತಿದ್ದ ಇಬ್ಬರು ಯುವಕರಿಗೆ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶರಣಪ್ಪ ಪುರದ (20), ದೇವರಾಜ್ ಬಾಡಗಿ (16) ಮೃತಪಟ್ಟವರು.
ಘಟನೆಯಲ್ಲಿ 12 ವರ್ಷದ ಸುನೀಲ್ ಪುರದ ಎಂಬ ಬಾಲಕನಿಗೂ ಗಾಯಗಳಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ನಾಲ್ಕು ಕುರಿಗಳು, ಒಂದು ಆಡು ಕೂಡ ಸಾವನ್ನಪ್ಪಿವೆ. ಸದ್ಯ ಮೃತರಾಗಿರುವ ಶರಣಪ್ಪ ಹಾಗೂ ದೇವರಾಜ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗದಗ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ ಹಾಗೂ ಕಂದಾಯ ನಿರೀಕ್ಷಕ ಜಿ ಭಜಂತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ ಆರಂಭವಾಗಿರುವುದರಿಂದ ಬಿಸಿಲಿನ ಝಳಕ್ಕೆ ಕಂಗಾಲಾದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಗುಡುಗು ಸಿಡಿಲು ಸಹಿತವಾಗಿ ಆಲಿಕಲ್ಲು ಮಳೆಯಾಗಿದ್ದು. ಮುಂಡರಗಿ ತಾಲೂಕಿನ ಗೊಮ್ಮಗೊಳ್ಳ ಗ್ರಾಮದಲ್ಲಿ ಭಾರೀ ಮಳೆಯಾಗಿದೆ. ಮಾತ್ರವಲ್ಲದೆ, ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆಯಿಂದ ರೈತರು ಹೈರಾಣಾಗಿದ್ದಾರೆ.
ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ
ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗಿದ್ದು, ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಇಬ್ಬರು ಮಹಿಳೆಯರು ದುರ್ಮರಣ ಹೊಂದಿದ್ದಾರೆ. ಯಂಕುಬಾಯಿ ಕುಲಕರ್ಣಿ (29), ಶಾರದಾ ಪತ್ತಾರ (61) ಮೃತಪಟ್ಟವರಾಗಿದ್ದಾರೆ. ಜಾಲಿಹಾಳ ಗ್ರಾಮದಲ್ಲಿ ನಿನ್ನೆ ರಾತ್ರಿ 11.30ರ ಸುಮಾರಿಗೆ ಮನೆಗೆ ಸಿಡಿಲು ಬಡಿದಿದ್ದು, ಕ್ಷಣಾರ್ಧದಲ್ಲೇ ಮೇಲ್ಛಾವಣಿ ಕುಸಿದು ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಶವಗಳನ್ನು ಹೊರತೆಗೆದಿದ್ದು, ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದಿದೆ. ಅಲ್ಲದೆ, ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಪ್ಪಳ: ಜಿಲ್ಲೆಯಲ್ಲಿ ಈ ವರ್ಷದ ಮೊದಲ ವರ್ಷಧಾರೆಯಾಗಿದ್ದು, ಜೋರಾದ ಗಾಳಿಯೊಂದಿಗೆ ಮಳೆ ಆರಂಭವಾಗಿದೆ. ಬೆಳಿಗ್ಗೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿತ್ತು. ಸದ್ಯ ಕಳೆದ ಅರ್ಧಗಂಟೆಯಿಂದ ಗಾಳಿ ಮಳೆಯಾಗುತ್ತಿದ್ದು, ಬಿಸಿಲಿಂದ ಕಂಗೆಟ್ಟ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಅಲ್ಲದೆ, ಬಿಸಿಲಿಗೆ ಕಾದು ಕೆಂಡವಾಗಿದ್ದ ಭೂಮಿಯೂ ತಂಪಗಾಗುವಂತೆ ಮಾಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Fri, 7 April 23