ಬೆಂಗಳೂರು: ಮಹಾಮಾರಿ ಕೊರೊನಾ ಕಣ್ಣಿಗೆ ಕಾಣಿಸದೆ ಇಡೀ ದೇಶವನ್ನು ಅವರಿಸಿದೆ. ಸೋಂಕು ಜನರ ದೇಹ ಸೇರಿ ಬಲಿ ತೆಗೆದುಕೊಳ್ಳುತ್ತಿದೆ. ಆದರೆ ಕೊರೊನಾ ವೈರಸ್ನಿಂದ ಭಯಪಡುವ ಅಗತ್ಯವಿಲ್ಲ. ಸರಿಯಾದ ಪ್ರೋಟೀನ್ ಯುಕ್ತ ಹಾಗೂ ಕೆಲವು ಕ್ರಮಗಳನ್ನು ಅನುಸರಿಸಿದರೆ ಸಾಕು. ಕೊರೊನಾದಿಂದ ಪಾರಾಗಬಹುದು ಎಂಬ ಸಂಗತಿಯನ್ನು ಗಿರಿಜಾ ಹೆಗಡೆ ವಿವರಿಸಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಚೇತರಿಕೆ ಕಂಡು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಗಿರಿಜಾ ಹೆಗಡೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. ಅದರಲ್ಲಿ ಅವರು ಹೋಂ ಕ್ವಾರಂಟೈನ್ನಲ್ಲಿ ಮಾಡಿಕೊಳ್ಳಬೇಕಾದ ತಯಾರಿ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ರೋಗಿಯ ಆರೈಕೆಯ ಬಗ್ಗೆ ತಿಳಿಸಿದ್ದಾರೆ.
ಈ ವಿಡಿಯೋದಲ್ಲಿ ಕೊರೊನಾ ಸೋಂಕಿತರು ಮತ್ತು ಸೋಂಕಿತರನ್ನು ಆರೈಕೆ ಮಾಡುವವರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕೆಂದು ಗಿರಿಜಾ ಹೆಗಡೆ ತಿಳಿಸಿದ್ದಾರೆ. ಯಾರಿಗಾದರೂ ಕೊರೊನಾ ಸೋಂಕಿರುವುದು ದೃಢವಾದಾಗ ಯಾವುದಕ್ಕೂ ಭಯಪಡದೆ ಮೊದಲು ಧೈರ್ಯವಾಗಿರಬೇಕು. ಆ ಧೈರ್ಯದಿಂದಲೇ ಮನೆಯವರಿಗೆ ಸೋಂಕು ತಗುಲಿರುವ ವಿಚಾರವನ್ನು ತಿಳಿಸಬೇಕೆಂದಿದ್ದಾರೆ.
ಕೊರೊನಾ ಸೋಂಕಿತರು ಸುಖಾಸುಮ್ಮನೆ ಓಡಾತ್ತಿರಬಾರದು. ಎರೆಡೆರೆಡು ಮಾಸ್ಕ್ಗಳನ್ನು ಧರಿಸಿ ಕುಳಿತ ಜಾಗದಲ್ಲೆ ಕುಳಿತುಕೊಳ್ಳಬೇಕು. ಅಲ್ಲಲ್ಲಿ ಓಡಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕೊರೊನಾ ಸೋಂಕಿತರು ಬಹು ಮುಖ್ಯವಾಗಿ ವೃದ್ಧರು, ಬಾಣಂತಿಯರು, ಗರ್ಭಿಣಿಯರಿಂದ ದೂರವಿರಬೇಕು. ಸೋಂಕಿತರಿಂದ ಮೊದಲು ವೃದ್ಧರು, ಬಾಣಂತಿಯರು, ಗರ್ಭಿಣಿಯರು, ಮಕ್ಕಳನ್ನು ಮನೆಯ ಬೇರೆ ಕಡೆ ಬಿಡಬೇಕು. ಆ ಬಳಿಕ ಮನೆಯಲ್ಲಿ ಯಾರು ಹೆಚ್ಚು ಆರೋಗ್ಯದಿಂದ ಇದ್ದಾರೋ ಅಂದರೆ ಹೆಚ್ಚು ಇಮ್ಯುನಿಟಿ ಪವರ್ ಯಾರು ಹೊಂದಿದ್ದಾರೋ ಅಂತವರು ಸೋಂಕಿತರ ಆರೈಕೆಯನ್ನು ಮಾಡಬೇಕು ಎಂದು ತಿಳಿಸಿದರು.
ಆರೈಕೆ ಮಾಡುವವರ ಜವಾಬ್ದಾರಿಗಳು
ಸೋಂಕು ತಗುಲಿದೆ ಎಂದು ಗೊತ್ತಾದಾಗ ಮೊದಲು ಮೆಡಿಕಲ್ಗೆ ಹೋಗಿ ಆಕ್ಸಿ ಮೀಟರ್, ಥರ್ಮಾಮೀಟರ್ ಮತ್ತು ಅಗತ್ಯವಿರುವ ಮೆಡಿಸಿನ್, ಸ್ಯಾನಿಟೈಸರ್ ಮತ್ತು ಸ್ಟೀಮರ್, ಡೆಟಾಲ್ ಲಿಕ್ವಿಡ್, ಡೆಟಾಲ್ ಸೋಪನ್ನು ತರಬೇಕು. ಇದಕ್ಕೂ ಮೊದಲು ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಬಿಡಬೇಕು. ಆ ಕೊಠಡಿಯಲ್ಲಿ ಗಾಳಿ, ಬೆಳಕು ಚೆನ್ನಾಗಿರಬೇಕು.
ದೊಡ್ಡ ಡ್ರಂನಲ್ಲಿ ಕುಡಿಯುವ ನೀರು, ಎರಡು ಲೋಟ ಇಡಬೇಕು. ಇದರ ಜೊತೆಗೆ ಊಟ ಮಾಡಲು ತಟ್ಟೆ (ಒಂದು ಚಿಕ್ಕದು ಮತ್ತು ಒಂದು ದೊಡ್ಡದು), ಎರಡು ಚಮಚಗಳ ಜೊತೆ ಒಂದು ಚಾಕನ್ನು ಮತ್ತು ವಾಶಿಂಗ್ ಸ್ಕ್ರಬ್ನ ಇಡಬೇಕು. ಕಾರಣ ಊಟ ಮಾಡಿದ ತಟ್ಟೆ, ಲೋಟವನ್ನು ಸೋಂಕಿತ ವ್ಯಕ್ತಿಯೇ ತೊಳೆದುಕೊಳ್ಳಬೇಕು. ಇದರ ಜೊತೆಗೆ ಬಟ್ಟೆಯನ್ನು ತೊಳೆದುಕೊಳ್ಳಲು ಬಟ್ಟೆ ಸೋಪು, ಡೆಟಾಲ್ ಲಿಕ್ವಿಡ್, ವಾಟರ್ ಹೀಟರ್, ಬಟ್ಟೆ ಒಣಿಸುವ ಸ್ಟಾಂಡ್, ಸ್ವಲ್ವ ಟಿಶ್ಯೂ ಪೇಪರ್, ಒಂದು ಡಸ್ಟ್ಬಿನ್ನ ಸೋಂಕಿತ ವ್ಯಕ್ತಿಯ ರೂಮಿನಲ್ಲಿ ಇಡಬೇಕು. ಇದರ ಜೊತೆಗೆ ಸೋಂಕಿತ ವ್ಯಕ್ತಿಗೆ ದಿನ ಬಳಕೆಗಾಗಿ ಕಾಟನ್ ಬಟ್ಟೆಗಳನ್ನು, ಎರಡು ತೆಳ್ಳಗಿನ ಟವೇಲ್ಗಳು, 4 ರಿಂದ 5 ಹ್ಯಾಂಡ್ ಕರ್ಚೀಫ್ ಇಡಬೇಕು. ಇದರೊಂದಿಗೆ ಮೆಡಿಕಲ್ನಿಂದ ತರಿಸಿದ ಎಲ್ಲಾ ವಸ್ತುಗಳನ್ನು ರೂಮಿನಲ್ಲಿ ಇಡಬೇಕು ಎಂದು ತಿಳಿಸಿದರು.
ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ಮತ್ತು ಒಆರ್ಎಸ್ 4 ರಿಂದ 5 ಪ್ಯಾಕೇಟ್, ತುಂಡು ಮಾಡಿದ ಬೆಲ್ಲ, ನಿಂಬೆಹಣ್ಣು, ಜೇನುತುಪ್ಪ, ಬ್ರೆಡ್ ಆ್ಯಂಡ್ ಜಾಮ್, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕೊಠಡಿಯಲ್ಲಿ ಇರಿಸಬೇಕು. ಒಣ ಹಣ್ಣುಗಳು ವ್ಯಕ್ತಿಗೆ ಸುಸ್ತಾದಾಗ ತಿನ್ನಬಹುದು. ಇದರಿಂದ ಶಕ್ತಿ ಮೈಗೂಡುತ್ತದೆ. ಸೋಂಕಿತ ವ್ಯಕ್ತಿಗೆ ದೇವರ ಬಗ್ಗೆ ನಂಬಿಕೆಯಿದ್ದರೆ ದೇವರ ಫೋಟೋ, ಒಂದು ಪುಸ್ತಕ, ಒಂದು ಪೆನ್ನು, ಅಗತ್ಯವಿದ್ದರೆ ಲ್ಯಾಪ್ಟಾಪ್, ಮೊಬೈಲ್ನ ಸೋಂಕಿತ ವ್ಯಕ್ತಿ ಇರುವ ಕೊಠಡಿಯಲ್ಲಿ ಇಡಬೇಕು. ಈ ಎಲ್ಲಾ ತಯಾರಿಯನ್ನು ಕೊರೊನಾ ದೃಢವಾಗಿ 30 ನಿಮಿಷದ ಒಳಗೆ ಮಾಡಬೇಕು ಎಂದು ಗಿರಿಜಾ ಹೆಗಡೆ ಹೇಳಿದರು.
ಸೋಂಕಿತರ ಜವಾಬ್ದಾರಿ
ಈ ಮೇಲಿನ ಎಲ್ಲ ಕೆಲಸಗಳು ಆರೈಕೆ ಮಾಡುವವರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದ ಗಿರಿಜಾ ಹೆಗಡೆ ಇದರ ಜೊತೆಗೆ ಸೋಂಕಿತರ ಜವಾಬ್ದಾರಿಗಳೇನು ಎಂದು ತಿಳಿಸಿದ್ದಾರೆ. ಮೊದಲು ಸೋಂಕಿತ ವ್ಯಕ್ತಿ ಧೈರ್ಯವಾಗಿರಬೇಕು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಂಕಿತ ವ್ಯಕ್ತಿ ಆಕ್ಸಿಮೀಟರ್ನಿಂದ ಸ್ಯಾಚುರೇಶನ್ ಲೆವೆಲ್ನ ಪರೀಕ್ಷಿಸಿಕೊಳ್ಳಬೇಕು. ಪ್ರತಿ ಅರ್ಧಗಂಟೆಗೂ ಈ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿರಬೇಕು. ಕೊಠಡಿಯ ಕಿಟಕಿಗಳನ್ನು ತೆಗೆದುಕೊಂಡು ಒಳ್ಳೆಯ ಗಾಳಿ, ಬೆಳಕಿನ ಮಧ್ಯೆ ಮಲಗಬೇಕು. ಸರಿಯಾದ ಸಮಯಕ್ಕೆ ಕೊಟ್ಟಿರುವ ಔಷಧಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಕೆಮ್ಮು ಬಂದಾಗ ಟಿಶ್ಯೂ ಪೇಪರ್ನ ಬಾಯಿಗೆ ಅಡ್ಡವಾಗಿ ಹಿಡಿದು ಕೆಮ್ಮಬೇಕು. ಕಫ ಬಂದಾಗ ಎದ್ದು ಹೋಗಲು ಆಗದೆ ಇದ್ದಾಗ ಟಿಶ್ಯೂ ಪೇಪರ್ಗೆ ಉಗಿದು ಅದನ್ನು ಪ್ಲಾಸ್ಟಿಕ್ ಕವರ್ ಒಳಗೆ ಹಾಕಿ ಡಸ್ಟ್ಬಿನ್ಗೆ ಹಾಕಬೇಕು. ಕೆಮ್ಮು, ಜ್ವರ, ಕಫ 8 ರಿಂದ 9 ದಿನಕ್ಕೆ ಜಾಸ್ತಿಯಾಗುತ್ತದೆ. ಆದರೆ ಹೆದರುವ ಅಗತ್ಯವಿಲ್ಲ. ಆದರೆ ಆಕ್ಸಿಜನ್ ಲೆವೆಲ್ ಕಡಿಮೆಯಾದಾಗ ಮಾತ್ರ ವೈದ್ಯರ ನೆರವು ಹೋಗಬೇಕು. ಅರ್ಧ, ಒಂದು ಗಂಟೆಗೆ ಸ್ಟೀಮ್ನ ತೆಗೆದುಕೊಳ್ಳುತ್ತಿರಬೇಕು. ಹೆಚ್ಚಾಗಿ ಜ್ಯೂಸ್ ಕುಡಿಯುತ್ತಿರಬೇಕು. ಬಿಸಿ ಬಿಸಿ ಊಟ ನೀಡಿದ ತಕ್ಷಣವೇ ಊಟ ಮಾಡಬೇಕು. ಊಟ ಮಾಡಿದ ತಕ್ಷಣವೇ ತಟ್ಟೆಯನ್ನು ತೊಳೆಯಬೇಕು. ರೂಮಿನಲ್ಲಿ ಇಟ್ಟ ಬೆಳ್ಳುಳ್ಳಿಯ ವಾಸನೆಯನ್ನು ಆಗಾಗ ತೆಗೆದುಕೊಳ್ಳುತ್ತಿರಬೇಕು. ಇದರಿಂದ ವಾಸನಾ ಸಾಮರ್ಥ್ಯವನ್ನು ತಿಳಿದುಕೊಳ್ಳಬಹುದು. ಪ್ರತಿ ದಿನ ಬೆಳಗ್ಗೆ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಹಿಂಡಿ ಕುಡಿಯಬೇಕು ಎಂದರು.
ಆಗಾಗ ದೀರ್ಘ ಉಸಿರನ್ನು ತೆಗೆದುಕೊಳ್ಳುತ್ತಿರಬೇಕು. ಇದರ ಜೊತೆಗ ಓದುವ ಆಸಕ್ತಿ ಇದ್ದವರು ಪುಸ್ತಕವನ್ನು ಓದುತ್ತಿರಬೇಕು. ಸಿನಿಮಾ ನೋಡಿ, ಧ್ಯಾನ ಮತ್ತು ಪ್ರಾಣಯಾಮ ಮಾಡಬೇಕು. ಉಸಿರಾಟದ ಸಮಸ್ಯೆ ಎದುರಾದಾಗ ತಕ್ಷಣ ಮನೆಯವರಿಗೆ ತಿಳಿಸಬೇಕು. ನಿಮ್ಮ ಬಟ್ಟೆಯನ್ನು ನೀವೆ ತೊಳೆದುಕೊಳ್ಳಬೇಕು. ತೊಳೆದ ಬಟ್ಟೆಯನ್ನು ಡೆಟಾಲ್ನಲ್ಲಿ ಹಾಕಬೇಕು. ಫ್ಯಾನ್ ಮತ್ತ ಎಸಿ ಹಾಕಿಕೊಂಡು ಮಲಗಬಾರದು ಎಂದು ಹೇಳಿದ್ದಾರೆ. ಈ ಎಲ್ಲ ಕ್ರಮಗಳನ್ನು ಪಾಲಿಸಿದಾಗ ಕೊರೊನಾದಿಂದ ಗುಣಮುಖರಾಗಲು ಸಾಧ್ಯವೆಂದು ಹೇಳಿದರು.
ಇದನ್ನೂ ಓದಿ
ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ; ಬಂಡೀಪುರ ಅರಣ್ಯ ಮೊಳೆಯೂರು ವಲಯದಲ್ಲಿ ಘಟನೆ
ಶಾರುಖ್ ಖಾನ್ ನೋಡಿದರೆ ಯುವ ಪೊಲಾರ್ಡ್ ನೋಡಿದಂತ್ತಾಗುತ್ತದೆ; ವೀರೇಂದ್ರ ಸೆಹ್ವಾಗ್
(Girija Hegde Explained preparation of home quarantine and Precautionary action)
Published On - 5:01 pm, Sun, 16 May 21