ಹಾಸನ: ಭಾರೀ ಕುತೂಹಲ ಮೂಡಿಸಿದ್ದ ಹಾಸನ ಜಿಲ್ಲಾ ಪಂಚಾಯಿತಿ ಸಭೆ ಗೊಂದಲಾದ ಗೂಡಾಗಿ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಆರೋಪ ಪ್ರತ್ಯಾರೋಪಗಳಲ್ಲಿ ಮಿಂದೆದ್ದಿದೆ. ಜನಸಾಮನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಸಭೆ, ಉಭಯ ಪಕ್ಷಗಳ ಕೆಸರೆರಚಾಟಕ್ಕೆ ಸಾಕ್ಷಿಯಾಯಿತು.
ದಲಿತಳಾದ ಕಾರಣಕ್ಕೆ ಕೆಲಸ ಮಾಡಲು ಜೆಡಿಎಸ್ ಬಿಡುತ್ತಿಲ್ಲ:
ಹೌದು, ಹಾಸನ ಜಿಲ್ಲಾ ಪಂಚಾಯಿತಿ ಸಭೆ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು. ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ತಾನು ದಲಿತ ಹೆಣ್ಣು ಮಗಳಾಗಿದ್ದರಿಂದ ಜೆಡಿಎಸ್ ಸದಸ್ಯರು ತನಗೆ ಕೆಲಸ ಮಾಡಲು ಬಿಡುತ್ತಿಲ್ಲ. ಆರಂಭದಿಂದಲೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ರು. ಅಷ್ಟೇ ಅಲ್ಲ ಕೆಲ ಸದಸ್ಯರ ಸಹಿಯನ್ನ ಫೋರ್ಜರಿ ಮಾಡಿ ಅವರ ಹೆಸರಿನಲ್ಲಿ ಪತ್ರ ನೀಡುತ್ತಿದ್ದಾರೆ. ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ರು.
ಜಿ.ಪಂ ಅಧ್ಯಕ್ಷೆಯ ಕ್ಷಮೆಗೆ ಜೆಡಿಎಸ್ ಸದಸ್ಯರ ಪಟ್ಟು:
ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಈ ಆರೋಪ ಜೆಡಿಎಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ವಿನಾಕಾರಣ ನಮ್ಮ ಮತ್ತು ನಮ್ಮ ನಾಯಕ ರೇವಣ್ಣ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ತಾನು ದಲಿತೆ ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರು ಕ್ಷಮೆ ಕೇಳಿದ್ರೆ ಮಾತ್ರ ಸಭೆ ಮುಂದುವರಿಸಿ ಎಂದು ಆಗ್ರಹಿಸಿದರು. ಅಷ್ಟೇ ಅಲ್ಲ ಶಾಸಕ ಶಿವಲಿಂಗೇಗೌಡ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಅವರಿಗೆ, ನೀವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು. ಪರಿಣಾಮ ಸಭೆ ಕೆಲ ಕಾಲ ಗೊಂದಲದ ಗೂಡಾಯಿತು.
ಶಿವಲಿಂಗೇಗೌಡರಿಂದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ:
ಇದಾದ ಕೆಲ ಹೊತ್ತಿನ ನಂತರ ಕಾಂಗ್ರೆಸ್‌ನ ಪಟೇಲ್ ಶಿವಪ್ಪ ಅವರು, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಮೇಲೆ ಸದಸ್ಯರ ಅನುದಾನವನ್ನ ತಡೆ ಹಿಡಿದ ಆರೋಪ ಮಾಡಿದ್ರು. ಅಷ್ಟೇ ಅಲ್ಲ ಶಿವಲಿಂಗೇಗೌಡ ಅವರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಈ ಬಗ್ಗೆ ಅಧಿಕಾರಿಗಳೇ ಉತ್ತರಿಸಲಿ ಎಂದರು. ಆಗ ಎದ್ದು ನಿಂತ ಕೆಲ ಅಧಿಕಾರಿಗಳು ಶಿವಪ್ಪ ಅವರ ಆರೋಪಕ್ಕೆ ಉತ್ತರಿಸಲು ಮುಂದಾದರು. ಆದ್ರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಇದು ಅವರಿಬ್ಬರ ನಡುವಿನ ಆರೋಪ-ಪ್ರತ್ಯಾರೋಪ. ಇದಕ್ಕೆ ನೀವೇನು ಉತ್ತರಿಸೋದು ಎಂದು ಸುಮ್ಮನಿರಿಸದರು. ಹೀಗಾಗಿ ಮತ್ತೇ ಸಭೆ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಮದ್ಯೆ ವಾಕ್ಸಮರಕ್ಕೆ ನಾಂದಿಯಾಯಿತು.
Published On - 4:29 pm, Sat, 20 June 20