ಹಾಸನ, ಡಿಸೆಂಬರ್ 05: 22 ವರ್ಷಗಳ ಕಾಲ ದಸರಾದಲ್ಲಿ ಭಾಗವಹಿಸಿದ್ದ ಸಾಕಾನೆ ಅರ್ಜುನ (Arjuna) ಇನ್ನೂ ನೆನಪು ಮಾತ್ರ. ಒಂಟಿ ಸಲಗದ ಜತೆ ಹೋರಾಡಿ ಮೃತಪಟ್ಟಿದ್ದ ಅರ್ಜುನನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದ ಬಳಿ ನೆರವೇರಿಸಲಾಗಿದೆ. ಮೊದಲು ಅರ್ಜುನನ ಕಳೆಬರಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ಜಿಲ್ಲಾಡಳಿತದಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಗಿದೆ.
ಅಗಲಿದ ಅರ್ಜುನನಿಗೆ ಮಾವುತ ವಿನು ಕಣ್ಣೀಡುತ್ತಲೇ ಪ್ರದಕ್ಷಿಣಿ ಹಾಕಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ಎಲ್ಲಾ ಮುಗಿದ ಮೇಲೆ ಜೆಸಿಬಿಯಿಂದ 15 ಅಡಿಗಳ ಆಳದವರೆಗೆ ಗುಂಡಿ ತೋಡಲಾಯಿತು. ಈ ವೇಳೆ ಅಲ್ಲಿದ್ದ ಜನರು ಸಮಾಧಿಗೆ ಉಪ್ಪು, ಸುಣ್ಣ, ಬ್ಲೀಚಿಂಗ್ ಪೌಡರ್ ಹಾಕಿದರು. ಬಳಿಕ ಜೆಸಿಬಿ ಸಹಾಯದಿಂದ ಅರ್ಜುನನ ದೇಹವನ್ನ ಸಮಾಧಿಗೆ ಇಳಿಸಿ ಮಣ್ಣು ಮುಚ್ಚಲಾಗಿದೆ. 22 ವರ್ಷಗಳ ಕಾಲ ದಸರಾದಲ್ಲಿ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಹೀಗೆ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ದುಃಖದ ಸಂಗತಿ.
ಇದನ್ನೂ ಓದಿ: ಅರ್ಜುನ ಆನೆಯ ಅಂತ್ಯಕ್ರಿಯೆಗೆ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್
1968ರಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾಗೆ ಕೆಡವಿ ಅರ್ಜುನನನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರು. 2.95 ಮೀ.ಎತ್ತರ, 3.75 ಮೀ. ಉದ್ದ, 5775 ಕೆಜಿ ತೂಕವಿದ್ದ ಅರ್ಜುನ. ಅಂತ್ಯ ಸಂಸ್ಕಾರಕ್ಕೂ ಮುನ್ನ ವೈದ್ಯರ ನೆರವಿನೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನನ ಎರಡೂ ದಂತವನ್ನು ತೆಗೆದು ಕೊಂಡೊಯ್ದಿದ್ದಾರೆ.
ಹಾಸನದ ಸಕಲೇಶಪುರದ ಯಸಳೂರಲ್ಲಿ, 20 ಕಾಡಾನೆಗಳ ಗುಂಪಿತ್ತು. ಈ ಗುಂಪಲ್ಲಿದ್ದ ಒಂಟಿ ಸಲಗ ಸೆರೆ ಹಿಡಿಯಲು, ಸಾಕಾನೆ ಅರ್ಜುನ ಸೇರಿದಂತೆ 6 ಆನೆಗಳಿಂದ ಆಪರೇಷನ್ ನಡೀತಿತ್ತು. ಗುಂಪಿನಿಂದ ಒಂಟಿ ಸಲಗ ಬೇರ್ಪಡಿಸಿ, ಅರಿವಳಿಕೆ ಮದ್ದು ನೀಡಿದ್ದರು. ಆದರೆ ಮದದಲ್ಲಿದ್ದ ಕಾಡಾನೆ, ಎಲ್ಲರ ಮೇಲೆ ದಾಳಿ ಮಾಡಿದೆ. ಈ ವೇಳೆ ಏಕಾಂಗಿಯಾಗಿ ಅರ್ಜುನ ಹೋರಾಟಕ್ಕೆ ಇಳಿದಿದ್ದಾನೆ. ಕಾಡಾನೆಯಿಂದ ತೀವ್ರವಾಗಿ ದಾಳಿಗೆ ಒಳಗಾದ ಅರ್ಜುನ ಅಲ್ಲೇ ಪ್ರಾಣ ಬಿಟ್ಟಿದ್ದಾನೆ.
ಟಿವಿ9ಗೆ ನಿವೃತ್ತ ಡಿಸಿಎಫ್ ದೇವರಾಜ್ ಹೇಳಿಕೆ ನೀಡಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಗೆ ನಮ್ಮಲ್ಲಿ ಆನೆಗಳ ಕೊರತೆಯಿದೆ. ಕೆಲ ಸಾಕಾನೆಗಳು ಕಾಡಾನೆ ಶಬ್ದ, ವಾಸನೆಗೆ ಓಡಿಹೋಗುತ್ತವೆ. ಆದರೆ ಅರ್ಜುನ, ಅಭಿಮನ್ಯು ಕಾರ್ಯಾಚರಣೆಗೆ ಒಗ್ಗಿಕೊಂಡಿದ್ದವು. ಕಾಡಾನೆ ಸೆರೆ ಯುದ್ಧವಿದ್ದಂತೆ, ಅರ್ಜುನನಂತ ಆನೆ ಅನಿವಾರ್ಯ. ಆ ಮೂಲಕ ಕಾಡಾನೆ ಕಾರ್ಯಾಚರಣೆಗೆ ಅರ್ಜುನನ ಬಳಕೆಗೆ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ನನ್ನ ಆನೆಯನ್ನು ಮೈಸೂರಿಗೆ ಕಳಿಸಿಕೊಡಿ, ಇಲ್ಲ ನನ್ನನ್ನೂ ಅರ್ಜುನ ಜತೆ ಮಣ್ಣು ಮಾಡಿ: ಅಂಗಲಾಚಿದ ಮಾವುತ
ಬೇರೆ ಆನೆಗಳು ಅಂಬಾರಿ ಭಾರ ಬಿದ್ದರೆ ಬಗ್ಗುತ್ತಿದ್ದವು, ಅರ್ಜುನ ಹಾಗಲ್ಲ. ಅರ್ಜುನ ರಾಮಾಯಣ, ಮಹಾಭಾರತದ ಆನೆಯಂತಿದ್ದ. ಮೇರಿ ಆನೆ ಜೊತೆ ಅರ್ಜುನನ ವಂಶಾಭಿವೃದ್ಧಿ ಪ್ರಯತ್ನ ವಿಫಲವಾಗಿತ್ತು. ಅರ್ಜುನ ಕಾರ್ಯಾಚರಣೆಗಳ ಮೂಲಕ ಅಷ್ಟು ರಫ್ ಆಂಡ್ ಟಫ್ ಆಗಿದ್ದ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Tue, 5 December 23