ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್​ ಪಠಣ; ವಾಸ್ತವಾಂಶ ತಿಳಿಯಲು ದೇಗುಲಕ್ಕೆ ಆಗಮ ಪಂಡಿತರ ತಂಡ ಭೇಟಿ

|

Updated on: Mar 30, 2023 | 4:54 PM

ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ ವೇಳೆ ಕುರಾನ್​ ಪಠಣ ನಿಲ್ಲಿಸುವಂತೆ ಹಿಂದೂ ಪರ ಸಂಘಟನೆಗಳ ಹೋರಾಟ ಹಿನ್ನೆಲೆಯಲ್ಲಿ ದೇವಾಲಯಕ್ಕೆ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತರ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್​ ಪಠಣ; ವಾಸ್ತವಾಂಶ ತಿಳಿಯಲು ದೇಗುಲಕ್ಕೆ ಆಗಮ ಪಂಡಿತರ ತಂಡ ಭೇಟಿ
ಬೇಲೂರು ಚೆನ್ನಕೇಶವ ಸ್ವಾಮಿ ದೇವಸ್ಥಾನ
Follow us on

ಹಾಸನ: ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ (Beluru Channakeshava Temple) ವೇಳೆ ಕುರಾನ್ (Quran)​ ಪಠಣ ನಿಲ್ಲಿಸುವಂತೆ ಹಿಂದೂ ಪರ ಸಂಘಟನೆಗಳ (Hindu Organizations) ಹೊರಾಟ ಹಿನ್ನೆಲೆ ದೇವಾಲಯಕ್ಕೆ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತರ ತಂಡ ಭೇಟಿ ನೀಡಿದೆ. ಏಪ್ರಿಲ್ 4 ಮತ್ತು 5ರಂದು ಚನ್ನಕೇಶವಸ್ವಾಮಿ ರಥೋತ್ಸವ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ನಡೆಸಿ ನಂತರ ರಥ ಎಳೆಯಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಇದಕ್ಕೆ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ವರ್ಷದಿಂದ ಈ ಸಂಪ್ರದಾಯ ನಿಲ್ಲಬೇಕು ಎಂದು ಆಗ್ರಹಿಸುತ್ತಿವೆ. ಇದೇ ಕಾರಣಕ್ಕೆ ವಾಸ್ತವಾಂಶ ತಿಳಿಯಲು ಆಗಮ ಪಂಡಿತರ ತಂಡ ದೇವಾಲಯಕ್ಕೆ ಭೇಟಿ ನೀಡಿದ್ದು, ದೇವಸ್ಥಾನದ ಅರ್ಚಕರು, ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಸಮಿತಿಯಿಂದ ಮಾಹಿತಿ ಸಂಗ್ರಹ ಮಾಡಿದೆ.

ತೀವ್ರ ಸ್ವರೂಪ ಪಡೆದ ಹೋರಾಟ

ಐತಿಹಾಸಿಕ ಬೇಲೂರು ಚನ್ನಕೇಶವ ರಥೋತ್ಸವದ ಸಂದರ್ಭದಲ್ಲಿ ಕುರಾನ್ ಪಠಣಕ್ಕೆ ವಿರೋಧ ವ್ಯಕ್ತಪಡಿಸಿ ಈ ಸಂಪ್ರದಾಯವನ್ನ ನಿಲ್ಲಿಸಬೇಕು, ಈ ಬಗ್ಗೆ ಏಪ್ರಿಲ್​​​ 3ರೊಳಗೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ಎರಡು ದಿನಗಳ ಹಿಂದೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೇಲೂರಿನ ದೇವಾಲಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೈಕ್​ನಲ್ಲಿ ಸ್ಥಳಕ್ಕೆ ಬಂದ ಶಾಕಿಬ್ ಹುಸೇನ್ ಎಂಬ ಮುಸ್ಲಿಂ ಯುವಕ ‘ಕುರಾನ್ ಜಿಂದಾಬಾದ್​’ ಎಂದು ಕೂಗಿದ್ದ. ಇದು ಪ್ರತಿಭಟನಾನಿತರ ಕಾರ್ಯಕರ್ತರನ್ನು ಕೆರಳಿಸಿದ್ದು, ಮುಸ್ಲಿಂ ಯುವಕನೊಂದಿಗೆ ವಾಗ್ವಾದ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವುದನ್ನು ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವಕನನ್ನು ವಶಕ್ಕೆ ಪಡೆದಿದ್ದರು. ಸದ್ಯ ಐಪಿಸಿ ಸೆಕ್ಷನ್ 107 ರ ಅಡಿಯಲ್ಲಿ ಮುಂಜಾಗ್ರತಾ ಕ್ರಮದ ಬಂಧನ ಮಾಡಿ ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ಬೇಲೂರು ಚನ್ನಕೇಶವ ದೇವಸ್ಥಾನ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣೆ: ಹೆಚ್ಚಿದ ಹಿಂದೂ ಸಂಘಟನೆಗಳ ಪ್ರತಿಭಟನೆ ಕಿಚ್ಚು

ಏಪ್ರಿಲ್ 4ರಂದು ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವ ಜಾತ್ರೆ ನಡೆಯಲಿದ್ದು, ಚುನಾವಣೆ ವೇಳೆ ಈ ಬೆಳವಣಿಗೆ ಕೋಮು ದ್ವೇಶಕ್ಕೆ ತಿರುಗುತ್ತಿದೆ ಎಂದು ಜಿಲ್ಲಾಡಳಿತ ಚಿಂತಿಸುತ್ತಿದೆ. 12 ನೇ ಶತಮಾನದ ಬೇಲೂರು ಚೆನ್ನಕೇಶವ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು ಇದನ್ನು ಮೂರು ತಲೆಮಾರುಗಳವರೆಗೆ ನಿರ್ಮಿಸಲಾಗಿದೆ. ಈ ದೇವಸ್ಥಾನ ಪೂರ್ಣಗೊಳಿಸಲು 103 ವರ್ಷಗಳು ಬೇಕಾದವು ಎನ್ನಲಾಗಿದೆ. ಹೊಯ್ಸಳರ ಕಾಲದ ವಿಶ್ವ ವಿಖ್ಯಾತ ಚನ್ನಕೇಶವಸ್ವಾಮಿ ದೇವಾಲಯ ತನ್ನ ಕಲೆ ವಾಸ್ತು ಶಿಲ್ಪಗಳ ಮೂಲಕ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಲಿದೆ. ಇಂತಹ ನಿರೀಕ್ಷೆಯ ವೇಳೆಯಲ್ಲಿ ಕುರಾನ್ ವಿವಾದ ಹುಟ್ಟುಕೊಂಡಿದೆ.

1932ರಲ್ಲಿ ರಥೋತ್ಸವದ ವೇಳೆ ಕುರಾನ್ ಪಠಣೆ ಮಾಡಬೇಕು ಎಂಬ ಸುಳ್ಳು ಸಂಪ್ರದಾಯವನ್ನು ತರಲಾಯಿತು ಎಂದು ವೈದ್ಯ ಡಾ.ರಮೇಶ್ ಬರೆದ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ. ಸೌಹಾರ್ದತೆ ಓಕೆ, ಎಲ್ಲರೂ ಒಂದಾಗಿ ಇರಬೇಕು ಎನ್ನೋದು ಸರಿ. ಆದ್ರೆ ಚನ್ನಕೇಶವನ ಜಾತ್ರೆ ವೇಳೆ ಗೋವಿಂದ ನಾಮಸ್ಮರಣೆ ಮೊಳಗಬೇಕೇ ವಿನಹ ಅಲ್ಲಿ ಕುರಾನ್ ಪಠಣ ಸರಿಯಲ್ಲ. ದರ್ಗಾಗೆ ಹೋಗಿ ನಾವು ಹನುಮಾನ್ ಚಾಲಿಸ ಹೇಳೋಕೆ ಆಗುತ್ತಾ ಹಾಗೆಯೇ ಕೆಲವೇ ವರ್ಷಗಳ ಹಿಂದೆ ಸೇರಿಸಲಾಗಿರೋಇಂತಹ ಆಚರಣೆಯನ್ನು ಕೈಬಿಡಬೇಕು ಎಂದು ಡಾ ರಮೇಶ್ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ