ಹಾಸನ: ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಹೇಮಾವತಿ ನದಿ ದಂಡೆಯಲ್ಲಿರುವ ಗ್ರಾಮ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಲೆ ಬೇಲೂರು. ಇಲ್ಲಿ ಚೋಳರು, ಹೊಯ್ಸಳರ ಕಾಲದಲ್ಲಿ ವಿಶಿಷ್ಟ ಮಾನ್ಯತೆ ಹೊಂದಿದ್ದ ಮತ್ತು ಅದರ ದ್ಯೋತಕ ಎಂಬಂತೆ ಒಂದು ಶಾಸನವಿದೆ. ಹೊಯ್ಸಳರ ಕಾಲದ ಶಿಲ್ಪಕಲೆಗಳನ್ನು ಜಗತ್ತಿಗೆ ಸಾರುವ ಬೇಲೂರಿನ ಚನ್ನಕೇಶವ ದೇವಾಲಯ ನಿರ್ಮಾಣಕ್ಕೂ ಮುನ್ನ ಈ ಗ್ರಾಮದಲ್ಲೇ ದೇಗುಲ ನಿರ್ಮಿಸುವ ಚಿಂತನೆ ಕೂಡ ನಡೆದಿತ್ತು ಎನ್ನುತ್ತದೆ ಇತಿಹಾಸ. ಈ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಚನ್ನಕೇಶವನ ದೇಗುಲವನ್ನು ಜೀರ್ಣೋದ್ಧಾರ ಮಾಡುವ ಯತ್ನದಲ್ಲಿದ್ದ ಗ್ರಾಮಸ್ಥರಿಗೆ ಈಗ ದೊಡ್ಡದೊಂದು ಅಚ್ಚರಿ ಎದುರಾಗಿದೆ.
ಸಾವಿರಾರು ವರ್ಷಗಳಿಂದ ಭೂಗರ್ಭದಲ್ಲಿ ಹುದುಗಿ ಹೋಗಿದ್ದ ಐದು ಅಡಿ ಎತ್ತರದ ಸುಂದರ ಚನ್ನಕೇಶವನ ಮೂರ್ತಿ ಪತ್ತೆಯಾಗಿದ್ದು, ಇದು ದೇವರ ಮಹಿಮೆ ಎಂದು ಸಾವಿರಾರು ಜನರು ಚೆನ್ನಿಗನ ದರ್ಶನಕ್ಕೆ ಬರುತ್ತಿದ್ದಾರೆ.
ಚೋಳರು, ಹೊಯ್ಸಳರ ಕಾಲದ ಇತಿಹಾಸ ಸಾರುವ ವಿಸ್ಮಯ ಮೂರ್ತಿಯೊಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಾಲೆ ಬೇಲೂರಿನಲ್ಲಿ ಕಳೆದ ಬುಧವಾರ ಪತ್ತೆಯಾಗಿದೆ. ಗ್ರಾಮದಲ್ಲಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಜನರಿಗೆ ಭೂಮಿಯೊಳಗೆ ಕಲ್ಲೊಂದು ಇರುವುದು ಗೋಚರಿಸಿದೆ. ಅದನ್ನು ನಿಧಾನವಾಗಿ ಮೇಲೆತ್ತಿ ನೋಡಿದಾಗ ಸುಮಾರು ಐದು ಅಡಿ ಎತ್ತರದ ಸುಂದರ ವಿಗ್ರಹವೊಂದು ಕಾಣಿಸಿದೆ. ಕೂಡಲೆ ಅದನ್ನು ತಂದು ಭಕ್ತಿಭಾವದಿಂದ ಶುಚಿಗೊಳಿಸಿ, ತೊಳೆದು ನೋಡಿದರೆ ಜನರಿಗೆ ಸತ್ಯವೊಂದು ಗೊತ್ತಾಗಿದ್ದು, ಅದು ತಮ್ಮೂರಿನ ಪುಟ್ಟ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದ ಚನ್ನಕೇಶವಸ್ವಾಮಿ ಮೂರ್ತಿಯ ತದ್ರೂಪವಾಗಿದೆ ಎಂದು ತಿಳಿದಿದೆ.
ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯ ಸಂಪೂರ್ಣ ಶಿಥಿಲವಾಗಿತ್ತು. ಅದನ್ನು ಜೀರ್ಣೋದ್ಧಾರ ಮಾಡುವ ಕಾಯಕ ಶುರುಮಾಡಿದ್ದ ಗ್ರಾಮಸ್ಥರು, ಸುಂದರ ದೇಗುಲ ನಿರ್ಮಿಸುವ ವೇಳೆಯಲ್ಲಿಯೇ ಈ ಆಕರ್ಷಕವಾದ ಮೂರ್ತಿ ಕಾಣಿಸಿದೆ. ಈ ಸುಂದರ ಕೆತ್ತನೆಯ ಮೂರ್ತಿ ನದಿಯೊಳಗೆ ದೊರೆತಿದ್ದು, ವಿಗ್ರಹವನ್ನು ನಮ್ಮ ದೇಗುಲದಲ್ಲಿಯೇ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಿ ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಊರಿನ ಹೆಸರಿನಲ್ಲೇ ಬೇಲೂರು ಇದೆ, ಹೊಯ್ಸಳರು ಬೇಲೂರಿನಲ್ಲಿ ಸುಂದರ ವಾಸ್ತು ಶಿಲ್ಪದ ದೇಗುಲ ನಿರ್ಮಿಸುವ ಮೊದಲು ಇಲ್ಲಿಯೇ ದೇಗುಲ ಕಟ್ಟುವ ಯೋಜನೆ ಮಾಡಿದ್ದರು. ನಂತರ ಅದ್ಯಾವುದೋ ಕಾರಣಕ್ಕೆ ಇಲ್ಲಿನ ಯೋಜನೆ ಕೈಬಿಟ್ಟು ಬೇಲೂರಿನಲ್ಲಿ ದೇಗುಲ ನಿರ್ಮಿಸಿದರು. ಹಾಗಾಗಿಯೇ ಈ ಊರಿಗೆ ಹಳೆ ಬೇಲೂರು ಅಥವಾ ಹಾಲೆ ಬೇಲೂರು ಎಂದು ಹೆಸರು ಬಂದಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಿವರಾಜ್ ಹೇಳಿದ್ದಾರೆ.
ಗ್ರಾಮದಲ್ಲಿರುವ ಚನ್ನಕೇಶವನನ್ನು ಪೂಜಿಸುವ ಊರಿನ ಜನರು ಮೂರು ವರ್ಷಕ್ಕೊಮ್ಮೆ ಹರಿಸೇವೆ ಎಂದು ನದಿ ದಂಡೆಯಲ್ಲಿ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಜನರು ಪೂಜೆ ಸಲ್ಲಿಸುತ್ತಿದ್ದ ಸ್ಥಳದಲ್ಲಿಯೇ ಇದೀಗ ಹೊಸದಾಗಿ ಸುಂದರ ವಿಗ್ರಹ ಪತ್ತೆಯಾಗಿದೆ. ಇನ್ನು ಈ ಗ್ರಾಮಕ್ಕೆ ಇರುವ ಐತಿಹಾಸಿಕ ಮಾನ್ಯತೆ ಸಾರುವುದಕ್ಕೆ ಗ್ರಾಮದಲ್ಲಿ ಒಂದು ಶಿಲಾಶಾಸನ ಇದೆ. ಚೋಳರ ದೊರೆ ಮಹಾಪರಾಕ್ರಮಿಯಾದ ದಯಾಸಿಂಹನ ತಾಯಿ ನೈಸಿಲಾದೇವಿ ಈ ದೇಗುಲ ಕಟ್ಟಿಸಿ, ಇಲ್ಲಿ ವಿಷ್ಣುವಿನ 24 ಅವರತಾರಗಳಲ್ಲಿ ಒಬ್ಬನಾದ ವಾಸುದೇವನನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ವಹಣೆಗೆ ದತ್ತಿಯಾಗಿ ಜಮೀನು ನೀಡಿದ್ದರು ಎಂದು ಈ ಶಾಸನದಲ್ಲಿ ಉಲ್ಲೇಖೀಸಲಾಗಿದೆ.
ಈ ಚನ್ನಕೇಶವನ ವಿಗ್ರಹದಲ್ಲಿ ಬಲಗೈನಲ್ಲಿ ಗದೆ, ಎಡ ಬಲದಲ್ಲಿ ಹೆಣ್ಣು ದೇವತೆಗಳಿವೆ, ಶಂಖ ಚಕ್ರ ಇದೆ. ಪ್ರಭಾವಳಿಯಲ್ಲಿ ದಶಾವತಾರ ಬಿಂಬಿಸುವ ಚಿತ್ರಗಳಿವೆ. ಸದ್ಯ ದೇಗುಲವನ್ನು 12ನೆ ಶತಮಾನದಲ್ಲಿ ನಿರ್ಮಿಸಿರಬಹುದೆಂದು ಹೇಳಲಾಗಿದ್ದು, ಇತಿಹಾಸ ತಜ್ಞ ಸಂಶೋದಕ ಬಿ.ಎಲ್.ರೈಸ್ ರವರ ಸಂಶೋಧನೆಯಲ್ಲಿ ಈ ಗ್ರಾಮದ ಶಾಸನದ ಉಲ್ಲೇಖ ಇದೆ.
ನದಿ ದಂಡೆಯಲ್ಲಿ ಹಿಂದೆ ದೇಗುಲ ಇದ್ದು, ಕಾಲಾನಂತರದಲ್ಲಿ ಅದು ನದಿಯಲ್ಲಿ ಸೇರಿ ಹೋಗಿರಬಹುದು. ಈಗ ಅಲ್ಲಿನ ವಿಗ್ರಹ ಪತ್ತೆಯಾಗಿರಬಹುದೆಂದು ಹೇಳಲಾಗುತ್ತಿದೆ. ಯಾವುದೇ ಲೋಪವಿಲ್ಲದ ಪೂಜೆಗೆ ಯೋಗ್ಯವಾದ ವಿಗ್ರಹ ಇದಾಗಿದ್ದರೂ ಆಗಮ ಶಾಸ್ತ್ರಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎನ್ನುವುದು ತಿಳಿಯಬೇಕಿದೆ.
ಇತಿಹಾಸದ ದಾಖಲೆಗಳು ಏನೇ ಹೇಳಲಿ, ಪುರಾಣದ ಕತೆಗಳು ಏನೇ ಇರಲಿ, ತಮ್ಮೂರಿನ ದೈವ, ತಮ್ಮೂರನ್ನು ಕಾಯುತ್ತಿರುವ ಚನ್ನಕೇಶವನನ್ನೇ ಹೋಲುವ ವಿಗ್ರಹ ಇದು. ದೇಗುಲದ ಜೀರ್ಣೋದ್ಧಾರ ವೇಳೆಯಲ್ಲೇ ಪತ್ತೆಯಾಗಿರುವುದು ಖುಷಿ ತಂದಿದೆ ಎಂದು ಊರಿನ ಭಕ್ತರಾದ ಪೂರ್ಣಿಮಾ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು: ನಂಜನಗೂಡಿನಲ್ಲಿ ರಥೋತ್ಸವ ವೇಳೆ ವಿಘ್ನ; ಪ್ರದಕ್ಷಿಣೆ ಮುನ್ನವೇ ವಿಗ್ರಹ ಇಳಿಸಿದ ಅರ್ಚಕರು