ಉತ್ತರ ಪ್ರದೇಶದಿಂದ ಧಾರಾವಾಡಕ್ಕೆ ಸಿಹಿರುಚಿಯ ಪೇಡಾ ಬಂದಿದ್ದು ಹೇಗೆ?

|

Updated on: May 25, 2024 | 12:11 PM

177 ವರ್ಷಗಳಷ್ಟು ಹಳೆಯದಾದ ಧಾರವಾಡ ಪೇಢಾವನ್ನು ಅತ್ಯುತ್ತಮವಾದ ,ಶುದ್ಧ ತುಪ್ಪ ಮತ್ತು ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ. ಧಾರವಾಡದ ಸ್ಥಳೀಯ ಪ್ರದೇಶಗಳಿಂದ ಸಂಗ್ರಹಿಸಿದ ಹಾಲನ್ನು ಬಳಸಿ ಖೋಯಾವನ್ನು ತಯಾರಿಸಲಾಗುತ್ತದೆ. ಇದನ್ನು ಸಿದ್ಧಪಡಿಸಲು ಬರೋಬ್ಬರಿ ನಾಲ್ಕು ಗಂಟೆ ಬೇಕಾಗುತ್ತದೆ

ಉತ್ತರ ಪ್ರದೇಶದಿಂದ ಧಾರಾವಾಡಕ್ಕೆ ಸಿಹಿರುಚಿಯ ಪೇಡಾ ಬಂದಿದ್ದು ಹೇಗೆ?
ಧಾರವಾಡ ಪೇಡಾ
Follow us on

ಪೇಡಾ ಅಂದ ಕೂಡಲೇ ನೆನಪಾಗುವುದೇ  ಧಾರವಾಡ ಪೇಡಾ. ಕಂದು ಬಣ್ಣದ, ನಿರ್ದಿಷ್ಟ ಆಕೃತಿಯನ್ನೂ ಹೊಂದಿರದ ಪುಟ್ಟ ಮಕ್ಕಳು ಕೈಯಲ್ಲಿ ಉಂಡೆ ಮಾಡಿದಂತೆ ಕಾಣುವ ಸಿಹಿತಿಂಡಿಯೇ ಪೇಡಾ. ನೋಡಿದ ಕೂಡಲೇ ಬಾಯಲ್ಲಿ ನೀರೂರುವಂತೆ ಮಾಡುವ ಆಕೃತಿ ಅದಕ್ಕಿಲ್ಲ. ಆದರೆ ಬಾಯಲ್ಲಿಟ್ಟರೆ ಆ ರುಚಿಗೆ ಸರಿಸಾಟಿ ಎಂದೆನಿಸುವಂತದ್ದು ಬೇರೆ ಯಾವುದೂ ಇಲ್ಲ. ಅಂದಹಾಗೆ ಈ ಅದ್ಭುತ ರುಚಿಯ ಸಿಹಿತಿಂಡಿ ಧಾರವಾಡಕ್ಕೆ ಪೇಡಾ ಬಂದಿದ್ದು ಹೇಗೆ? ಈ  ಬಗ್ಗೆ ಹುಡುಕಿದಾಗ ಸಿಕ್ಕಿದ ಮಾಹಿತಿ ಏನೆಂದರೆ 19 ನೇ ಶತಮಾನದ ಆರಂಭದಲ್ಲಿ ಉತ್ತರ ಪ್ರದೇಶದ ಉನ್ನಾವೊದಲ್ಲಿ ಪ್ಲೇಗ್ ಉಲ್ಬಣಗೊಂಡ ನಂತರ ಧಾರವಾಡಕ್ಕೆ ವಲಸೆ ಬಂದ ಠಾಕೂರ್ ಕುಟುಂಬ ಈ ಸಿಹಿತಿಂಡಿಯನ್ನು ತಯಾರಿಸಿ ವ್ಯಾಪಾರ ಪ್ರಾರಂಭಿಸಿತು. ಮೊದಲ ತಲೆಮಾರಿನ ಮಿಠಾಯಿ ವ್ಯಾಪಾರಿ ರಾಮ್ ರತನ್ ಸಿಂಗ್ ಠಾಕೂರ್ ಅವರು ಸ್ಥಳೀಯವಾಗಿ ಪೇಡಾಗಳನ್ನು ಉತ್ಪಾದಿಸಿ ಅವುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ನಂತರ ಇದೇ ಕುಟುಂಬ ಈ ವ್ಯಾಪಾರವನ್ನು ವಿಸ್ತರಿಸಿತು. ಅವರ ಮೊಮ್ಮಗ ಬಾಬು ಸಿಂಗ್ ಠಾಕೂರ್ ಅವರು ತಮ್ಮ ಲೈನ್ ಬಜಾರ್ ಅಂಗಡಿಯಲ್ಲಿ ಕುಟುಂಬದ ವ್ಯವಹಾರವನ್ನು ಮತ್ತಷ್ಟು ಬೆಳೆಸಿದರು. ಈಗ ಇದೇ ಕುಟುಂಬದ 5ನೇ ತಲೆಮಾರು ಈ ಉದ್ಯಮ ನಡೆಸುತ್ತಿದೆ. ಧಾರವಾಡದ ಈ ಫೇಮಸ್ ಪೇಡಾ ಬಗ್ಗೆ ಮತ್ತಷ್ಟು ತಿಳಿಯೋಣ…

ಪೇಡಾ ಹೇಗೆ ತಯಾರಿಸಲಾಗುತ್ತದೆ?

ಧಾರವಾಡ ಮತ್ತು ಸುತ್ತಮುತ್ತಲಿನ ಗೌಳಿ ಸಮುದಾಯದವರು ಸಾಕುವ ಧಾರವಾಡದ ಎಮ್ಮೆಗಳ ಹಾಲಿನಿಂದ ಧಾರವಾಡ ಪೇಡಾ ತಯಾರಿಸಲಾಗುತ್ತದೆ. ರಾಮ್ ರತನ್ ಸಿಂಗ್ ಠಾಕೂರ್ ಮೊಮ್ಮಗ ಬಾಬು ಸಿಂಗ್ ಠಾಕೂರ್ ಅವರು ತಮ್ಮ ಲೈನ್ ಬಜಾರ್ ಅಂಗಡಿಯಲ್ಲಿ ಕುಟುಂಬದ ವ್ಯವಹಾರವನ್ನು ಮತ್ತಷ್ಟು ಬೆಳೆಸಿದ್ದು, ಇದನ್ನು ಜನರು “ಲೈನ್ ಬಜಾರ್ ಪೇಡಾ’ ಎಂದೇ ಕರೆಯುತ್ತಾರೆ. ಇಲ್ಲಿವರೆಗೆ ಧಾರವಾಡ ಪೇಡಾದ ‘ಪಾಕ ರಹಸ್ಯ’ವನ್ನು ಈ ಕುಟುಂಬ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ವಿಶೇಷವೆಂದರೆ ಇದೇ ಒಂದು ಕುಟುಂಬ ಈಗಲೂ ಧಾರವಾಡ ಪೇಡಾ ತಯಾರಿಸುತ್ತಿದ್ದು, ಅವರ ಹಿರೀಕರು ಪೇಡಾ ತಯಾರಿಸಲು ಎಲ್ಲಿಂದ ವಸ್ತುಗಳನ್ನು ತರುತ್ತಿದ್ದರೋ ಅಲ್ಲಿಂದಲೇ ಇವರು ವಸ್ತುಗಳನ್ನು ತರುತ್ತಾರೆ. ಹಿಂದಿನವರು ಎಲ್ಲಿಂದ ಹಾಲು ತರುತ್ತಿದ್ದರೋ ಅದೇ ಕುಟುಂಬ ಈಗಲೂ ಹಾಲು ಪೂರೈಸುತ್ತದೆ. ಎಲ್ಲಿಂದ ಸಕ್ಕರೆ ತರುತ್ತಿದ್ದರೋ ಅಲ್ಲಿಂದಲೇ ತರುತ್ತಿದ್ದಾರೆ. ಅಂದರೆ ಪೇಡಾ ತಯಾರಿಕೆಯಲ್ಲಿ ಹಿಂದೆ ಯಾವ ಕುಟುಂಬಗಳು ಭಾಗಿಯಾಗಿದ್ದವೋ  ಅದೇ ಕುಟುಂಬಗಳು ಈ ವ್ಯಾಪಾರ ಮುಂದುವರಿಸಿವೆ.

ಕಾಲ ಬದಲಾದರೂ ಬದಲಾಗಿಲ್ಲ ರುಚಿ

ಬಾಬು ಸಿಂಗ್ ಠಾಕೂರ್ ಅವರು ಮನೆಯಲ್ಲೇ ಪೇಡಾ ತಯಾರಿಸಿ ಅಲ್ಲೇ ಒಂದು ಕಟ್ಟೆ ಮೇಲೆ ಕುಳಿತು ಮಾರಾಟ ಮಾಡುತ್ತಿದ್ದರಂತೆ. ಅದು ಲಿಮಿಟೆಡ್ ಸ್ಟಾಕ್. ಗ್ರಾಹಕರು ಪೇಡಾ ಖರೀದಿ ಮಾಡಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಸಾಲಿನಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ನೋಡಿ ಪೇಡಾ ಹಂಚಿಕೆಯಾಗುತ್ತಿತ್ತು. ಅಂದರೆ ಒಬ್ಬರಿಗೆ ಕಾಲು ಅಥವಾ ಅರ್ಧ ಕೆಜಿ ಅಷ್ಟೇ. ಇನ್ನೂ ಹೆಚ್ಚು ಬೇಕು ಎಂದು ಗ್ರಾಹಕರು ಬಯಸಿದರೆ ಅಲ್ಲೇ ಗುಡಿ ಹತ್ತಿರದಲ್ಲಿದ್ದ ಮಕ್ಕಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಸರತಿ ಸಾಲಿನಲ್ಲಿ ನಿಂತಿದ್ದಕ್ಕೆ ಒಂದಷ್ಟು ಹಣ ಕೊಟ್ಟು ಪೇಡಾ ಖರೀದಿ ಮಾಡುತ್ತಿದ್ದ ಕಾಲವದು. 177 ವರ್ಷದ ಪರಂಪರೆ ಇರುವ ಈ ಪೇಡಾವನ್ನು ಹಲವು ರಾಜಕಾರಣಿಗಳು ಮೆಚ್ಚಿ ಬೆಸ್ಟ್ ಸ್ವೀಟ್ ಎಂದು ಹೊಗಳಿದ್ದಾರೆ. ಧಾರವಾಡ ಪೇಡಾದ ಇನ್ನೊಂದು ವಿಶೇಷ ಏನಪ್ಪಾ ಅಂದರೆ ಹಾಲಿನಿಂದ ಮಾಡಿದ ಉತ್ಪನ್ನ ಇದಾಗಿದ್ದರೂ ಫ್ರಿಡ್ಜ್ ನಲ್ಲಿಡುವ ಅಗತ್ಯವಿಲ್ಲ.ಹೊರಗಿನ ವಾತಾವರಣದಲ್ಲಿ 8 ದಿನಗಳವರೆಗೆ ಇಟ್ಟರೂ ಇದೇನೂ ಆಗುವುದಿಲ್ಲ. ಇದು ಈ ಉತ್ಪನ್ನದ ಗುಣಮಟ್ಟಕ್ಕೆ ಹಿಡಿದ ಕನ್ನಡಿ. ಕೆಲವು ದಶಕಗಳಿಂದ ನಡೆಯುತ್ತಿದ್ದ ಬಾಬುಸಿಂಗ್ ಠಾಕೂರ್ ಅವರ ಸಿಂಗಲ್ ಔಟ್ಲೆಟ್ ಸ್ಟೋರ್ ನಂತರ  ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಬೆಳಗಾವಿ ಮತ್ತು ಹಾವೇರಿಯಲ್ಲಿ ವಿಸ್ತರಿಸಿತು.

ಪರೀಕ್ಷೆ ಫಲಿತಾಂಶ ಬಂತೆಂದರೆ ಪೇಡಾಕ್ಕೆ ಡಿಮ್ಯಾಂಡು

ಧಾರವಾಡಕ್ಕೆ ಯಾರೇ ಹೊರಗಿನವರು ಬರಲಿ ಅವರಿಗೆ ಅಲ್ಲಿನ ಸ್ಥಳೀಯರು ಕೊಟ್ಟು ಕಳಿಸುವ, ತಿನ್ನಿಸುವ ಸಿಹಿಯೆಂದರೆ ಧಾರವಾಡ ಪೇಡಾನೇ. ಎಸ್ಸೆಸ್ಸೆಲ್ಸಿ, ಪ್ಲಸ್ ಟು ಪರೀಕ್ಷೆ ಫಲಿತಾಂಶ ಬಂತೆಂದರೆ ಧಾರವಾಡದಲ್ಲಿ ಪೇಡಾಕ್ಕೆ ಡಿಮ್ಯಾಂಡು ಜಾಸ್ತಿ. ಅಷ್ಟೇ ಅಲ್ಲ ಮಗ ಹುಟ್ಟಿದ್ರೆ ಪೇಡಾ, ಮಗಳು ಹುಟ್ಟಿದ್ರೆ ಜಲೇಬಿ ಅಂತ ಧಾರವಾಡದ ಜನ ಸಿಹಿ ಹಂಚುತ್ತಾರೆ. ಮಗ ಹುಟ್ಟಿದ ಪೇಡಾ ತಿನ್ನಿಸಿಲ್ಲ ಅಂತ ಆಡುಮಾತಿನಲ್ಲಿ ಹೇಳುವುದೂ ಉಂಟು.

GI ಟ್ಯಾಗ್

ಧಾರವಾಡ ಪೇಡಾದ ಶ್ರೀಮಂತ ಐತಿಹಾಸಿಕ ಹಿನ್ನೆಲೆಯ ಕಾರಣ, ಠಾಕೂರ್ ಅವರ ಧಾರವಾಡ ಪೇಡಾ ತಯಾರಕರ ಕಲ್ಯಾಣ ಟ್ರಸ್ಟ್ ಇದನ್ನು ಜಿಯಾಗ್ರಫಿಕಲ್ ಇಂಡಿಕೇಷನ್ (ಭೌಗೋಳಿಕ ಸೂಚಿಕೆ) ನೋಂದಾಯಿಸಲು ಅರ್ಜಿ ಸಲ್ಲಿಸಿತು. 150ಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ರುಚಿಕರವಾದ ಧಾರವಾಡ ಪೇಡಾ GI ಟ್ಯಾಗ್ ಅನ್ನು ವರ್ಗ 29 ರ ಅಡಿಯಲ್ಲಿ ಅಂದರೆ, ಹಾಲಿನ ಉತ್ಪನ್ನಗಳ ಅಡಿಯಲ್ಲಿ 2007 ರಲ್ಲಿ GI ಟ್ಯಾಗ್ ಅನ್ನು ನೀಡಿತು. ಕರ್ನಾಟಕದಲ್ಲಿ ಜಿಐ ಮಾನ್ಯತೆ ಸಿಕ್ಕ ಇತರ ಆಹಾರೋತ್ಪನ್ನಗಳೆಂದರೆ ಮೈಸೂರಿನಲ್ಲಿ ಬೆಳೆಯುವ ವೀಳ್ಯದೆಳೆ, ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯುವ ರಸಬಾಳೆ, ಬೆಂಗಳೂರು ಸುತ್ತಮುತ್ತ ಬೆಳೆಯುವ ಗುಲಾಬಿ ಬಣ್ಣದ ಈರುಳ್ಳಿ, ವಿಜಯಪುರ ದ್ರಾಕ್ಷಿ, ಮೈಸೂರು ಪಾಕ್‌, ಕೊಡಗಿನ ಕಿತ್ತಳೆ, ಹಸಿರು ಏಲಕ್ಕಿ, ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನಲ್ಲಿ ಬೆಳೆಯುವ ಲಿಂಬೆ ಹಣ್ಣು.

ಪೇಡಾ ತಯಾರಿಸಲು ಬೇಕು  4 ಗಂಟೆ

177 ವರ್ಷಗಳಷ್ಟು ಹಳೆಯದಾದ ಧಾರವಾಡ ಪೇಢಾವನ್ನು ಅತ್ಯುತ್ತಮವಾದ ,ಶುದ್ಧ ತುಪ್ಪ ಮತ್ತು ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ. ಧಾರವಾಡದ ಸ್ಥಳೀಯ ಪ್ರದೇಶಗಳಿಂದ ಸಂಗ್ರಹಿಸಿದ ಹಾಲನ್ನು ಬಳಸಿ ಖೋಯಾ ತಯಾರಿಸಲಾಗುತ್ತದೆ. ಇದನ್ನು ಸಿದ್ಧಪಡಿಸಲು ಬರೋಬ್ಬರಿ ನಾಲ್ಕು ಗಂಟೆ ಬೇಕಾಗುತ್ತದೆ.  ಧಾರವಾಡ ಪೇಡಾ ತಯಾರಿಸುವ ಈ ಕುಟುಂಬ ಗುಣಮಟ್ಟ ಮತ್ತು ರುಚಿ ಎರಡನ್ನೂ ಕಾಪಾಡಿಕೊಂಡು ಬಂದಿರುವುದೇ ಅವರ ಯಶಸ್ಸಿಗೆ ಕಾರಣ.  ಮೊದಲ ತಲೆಮಾರಿನ ಸಿಹಿತಿಂಡಿ ತಯಾರಕರಾದ ರಾಮರತನ್ ಸಿಂಗ್ ಠಾಕೂರ್ ಇದನ್ನು ಸ್ಥಳೀಯವಾಗಿ ಉತ್ಪಾದಿಸಿ ಮಾರಾಟ ಮಾಡಿದರು. ಇದನ್ನು ಎರಡನೇ ತಲೆಮಾರಿನ ಮೋಹನಸಿಂಗ್ ಠಾಕೂರ್ ಮುಂದುವರಿಸಿದರು. ಮೂರನೇ ತಲೆಮಾರಿನ ಬಾಬುಸಿಂಗ್ ಠಾಕೂರ್ ಆಗಮನದಿಂದ ಈ ಸಿಹಿ ಮನ್ನಣೆ ಪಡೆಯಲಾರಂಭಿಸಿತು. ಅಂದಿನಿಂದ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳಿಗೆ ಬೇಡಿಕೆ ಬೆಳೆಯುತ್ತಲೇ ಇದೆ. 4 ನೇ ತಲೆಮಾರಿನ ರಾಮರತನ್ ಸಿಂಗ್ ಠಾಕೂರ್ ಅವರು ವ್ಯಾಪಾರವನ್ನು ಮುಂದುವರೆಸಿದರು. ಈಗ 5 ಮತ್ತು 6 ನೇ ತಲೆಮಾರಿನ ಸದಸ್ಯರಾದ ದುರ್ಗಾಸಿಂಗ್ ಠಾಕೂರ್ ಮತ್ತು ಕರಂಸಿಂಗ್ ಠಾಕೂರ್ ಅವರು ಪ್ರಸ್ತುತ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.  ಇವರದ್ದೇ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ ಪ್ರೋಟೀನ್‌ಯುಕ್ತ ಈ  ಸಾಂಪ್ರದಾಯಿಕ ಸಿಹಿ ತಯಾರಿಸಲು ಹಾಲು ಮತ್ತು ಸಕ್ಕರೆಯನ್ನು ಮಾತ್ರ ಬಳಸಲಾಗುತ್ತದೆ. ಸ್ಟೌವ್ ಅಥವಾ ಓವನ್ ಅನ್ನು ಬಳಸುವ ಬದಲು, ಮಿಶ್ರಣವನ್ನು ಬೆಂಕಿ ಒಲೆ ಮೇಲೆ ಬೇಯಿಸಲಾಗುತ್ತದೆ. ನಂತರ ಸಣ್ಣ ಉಂಡೆ ಕಟ್ಟಲಾಗುತ್ತದೆ, ಎಲ್ಲವನ್ನೂ ಕೈಯಿಂದಲೇ ತಯಾರಿಸಲಾಗುತ್ತದೆ.

ನವೆಂಬರ್ 17, 1913 ರಂದು ‘ಧಾರವಾಡ ಕೈಗಾರಿಕಾ ಪ್ರದರ್ಶನ’ದಲ್ಲಿ ‘ಪೇಢಾಸ್’ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ಆಗಿನ ಬಾಂಬೆ ಗವರ್ನರ್ ಹೆಚ್. ಇ ಲಾರ್ಡ್ ವಿಲ್ಲಿಂಗ್ಡನ್ ಅವರು ಬೆಳ್ಳಿ ಪದಕವನ್ನು ನೀಡಿ ಗೌರವಿಸಿ ಬಾಬು ಸಿಂಗ್ ಠಾಕೂರ್ ಅವರಿಗೆ ಅರ್ಹತೆಯ ಪ್ರಮಾಣಪತ್ರವನ್ನು ನೀಡಿದ್ದರು.  ಧಾರವಾಡ ಪೇಡಾಕ್ಕೆ ರಾಜೀವ್ ಗಾಂಧಿ ಶ್ರೇಷ್ಠ ಪ್ರಶಸ್ತಿ, ಪ್ರಿಯದರ್ಶಿನಿ ಇಂದಿರಾ ಗಾಂಧಿ ಪ್ರಶಸ್ತಿ ಮೊದಲಾದ ಮನ್ನಣೆ ಸಿಕ್ಕಿದೆ. 1846 ರಿಂದ ಇದೇ ಮನೆತನ ಪ್ರಸಿದ್ಧ ಬಾಬುಸಿಂಗ್ ಅವರ ಠಾಕೂರ್ ಪೇಡಾ, ಹಾಗೆಯೇ ಇತರ ಉತ್ತಮ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದೆ.

ಧಾರವಾಡದಲ್ಲಿ ಈ ತಿಂಡಿಗಳೂ ಫೇಮಸ್

ಧಾರವಾಡದಲ್ಲಿ ಇನ್ನೂ ಕೆಲವು ತಿನಿಸಿಗಳು ಪ್ರಸಿದ್ಧವಾಗಿವೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ತಯಾರಾಗುವ  ಉತ್ತರ ಕರ್ನಾಟಕದ ಗೋಧಿ ಹುಗ್ಗಿಗೆ ಸಿಎಸ್ಐಆರ್ ಕೇಂದ್ರ ಆಹಾರ ತಂತ್ರಜ್ಞಾನ  ಸಂಶೋಧನಾ ಸಂಸ್ಥೆಯ ಮಾನ್ಯತೆ ಇದೆ. ಗೋಧಿ, ಬೆಲ್ಲ,ಗಸೆಗಸೆ, ಗೋಡಂಬಿ, ಏಲಕ್ಕಿಯ ಮಿಶ್ರಣದೊಂದಿಗೆ  ಗೋಧಿ ಹುಗ್ಗಿ ಮಾಡಲಾಗುತ್ತದೆ. ಅದೇ ರೀತಿ ಹುಬ್ಬಳ್ಳಿ- ಧಾರವಾಡದ ಜೋಳದ ರೊಟ್ಟಿಯೂ ಇಲ್ಲಿ ಫೇಮಸ್. ಹುಬ್ಬಳ್ಳಿಯ ಸಾವಜಿ ಖಾನಾವಳಿ  ಚಿಕನ್, ಮಟನ್ ಊಟ ಮಾಂಸಾಹಾರಿಗಳ ಪ್ರೀತಿಯ  ತಾಣ. ಇನ್ನು ಹುಬ್ಬಳ್ಳಿ- ಧಾರವಾಡ ಎಂದರೆ ಗಿರ್ಮಿಟ್, ಮಿರ್ಚಿ ಬಜ್ಜಿ ಬಗ್ಗೆ ಹೇಳದಿದ್ದರೆ ಹೇಗೆ? ಸಂಜೆಯಾದರೆ ಬಹುತೇಕ ಹೋಟೆಲ್, ಬೀದಿ ಬದಿ ತಿಂಡಿ ಮಾರಾಟ ಮಾಡುವವರು ಮಿರ್ಚಿ ಬಜ್ಜಿ ಮಾರುವುದನ್ನು ಇಲ್ಲಿ ಕಾಣಬಹುದು. ಒಟ್ಟಿನಲ್ಲಿ ಧಾರವಾಡ ಆಹಾರ ಪ್ರಿಯರ ಅಚ್ಚುಮೆಚ್ಚಿನ ಜಿಲ್ಲೆ ಎಂಬುದುರಲ್ಲಿ ಎರಡು ಮಾತಿಲ್ಲ.